ಕರ್ನಾಟಕಕ್ಕೆ ಎಷ್ಟೇ ಅನ್ಯಾಯವಾದರೂ ರಾಜ್ಯ ಬಿಜೆಪಿಯವರು ಕೇಂದ್ರ ಮಾಡಿದ್ದನ್ನೆಲ್ಲಾ ಸಮರ್ಥಿಸಿಕೊಳ್ಳುವುದು ಅಪರಾಧ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಪ್ರತಿಪಕ್ಷ ಬಿಜೆಪಿಯವರು ಕರ್ನಾಟಕ ರಾಜ್ಯಕ್ಕೆ ಎಷ್ಟೇ ಅನ್ಯಾಯವಾದರೂ ಕೇಂದ್ರ ಸರಕಾರ ಮಾಡಿದ್ದನ್ನೆಲ್ಲಾ ಸಮರ್ಥಿಸಿಕೊಳ್ಳುವುದು ಮಹಾ ಅಪರಾಧ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟೀಕಿಸಿದ್ದಾರೆ.
ಶನಿವಾರ ಇಲ್ಲಿನ ರೇಸ್‍ಕೋರ್ಸ್ ರಸ್ತೆಯಲ್ಲಿನ ಕೆಇಬಿ ಇಂಜಿನಿಯರ್ ಅಸೋಸಿಯೇಷನ್‍ನಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಪಾಲ್ಗೊಂಡ ವೇಳೆ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು, ಕರ್ನಾಟಕಕ್ಕೆ ಅನ್ಯಾಯವಾದದ್ದನೆಲ್ಲ ಅದನ್ನು ಬಿಜೆಪಿಯವರು ನ್ಯಾಯ ಎನ್ನುವುದು ದೊಡ್ಡ ತಪ್ಪು ಎಂದು ವಾಗ್ದಾಳಿ ನಡೆಸಿದರು.
ಚರ್ಚೆಗೆ ನಾವೂ ಸಿದ್ಧ: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕಾಯ್ದೆ ಕುರಿತಂತೆ ಚರ್ಚೆಗೆ ಆಹ್ವಾನಿಸಿದರೆ ಅದಕ್ಕೆ ನಾವು ಸಿದ್ಧವಾಗಿದ್ದು, ಉದ್ಯೋಗ ಖಾತರಿ ಯೋಜನೆ ಬದಲಾವಣೆ ವಿರೋಧಿಸಿ ದೊಡ್ಡ ಆಂದೋಲನವನ್ನೇ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಹೇಳಿದರು.
ಹೋರಾಟ ಮಾಡುತ್ತೇವೆ: ಕೇರಳ ರಾಜ್ಯದ ಗಡಿಭಾಗಗಳ ಶಾಲೆಗಳಲ್ಲಿ ಮಲಯಾಳವನ್ನು ಮೊದಲ ಭಾಷೆಯಾಗಿ ಕಲಿಯುವುದನ್ನು ಕಡ್ಡಾಯಗೊಳಿಸಿರುವ ಬಗ್ಗೆ ಕೇರಳ ಸಿಎಂಗೆ ಪತ್ರ ಬರೆದಿದ್ದು, ನಮ್ಮ ಭಾಷೆಯ ಉಳಿವಿಗಾಗಿ ನಾವು ಹೋರಾಟವನ್ನೇ ಮಾಡುತ್ತೇವೆ ಎಂದು ಅವರು ತಿಳಿಸಿದರು.
ದ್ವೇಷ ಭಾಷಣ ತಡೆಗೆ ಸಂಬಂಧಿಸಿದ ಮಸೂದೆ ರಾಜ್ಯಪಾಲರ ಬಳಿಯೇ ಉಳಿದಿದ್ದು, ಈ ಬಗ್ಗೆ ಶೀಘ್ರದಲ್ಲೇ ರಾಜ್ಯಪಾಲ ಥಾವರ್ ಚೆಂದ್ ಗೆಹ್ಲೋಟ್ ಅವರನ್ನು ಒಮ್ಮೆ ಭೇಟಿಯಾಗಿ ವಿವರಣೆ ನೀಡಲಾಗುವುದು ಎಂದ ಅವರು, ರಾಜ್ಯದಲ್ಲಿ ಬಾಂಗ್ಲಾ ವಲಸಿಗರು ಇದ್ದರೆ ಅವರ ಹೆಸರನ್ನು ನೀಡಲಿ ಎಂದು ಕೇಳಿದರು.