×
Ad

ನೀರವ್, ಲಲಿತ್ ಮೋದಿ ಜೊತೆ ನಿಮ್ಮನ್ನು ಹೋಲಿಸಬಹುದಾ ?: 'INDIA' ಕುರಿತ ಪ್ರಧಾನಿ ಮೋದಿ ಟೀಕೆಗೆ ಸಿದ್ದರಾಮಯ್ಯ ತಿರುಗೇಟು

Update: 2023-07-26 12:15 IST

ಬೆಂಗಳೂರು: ವಿರೋಧ ಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ ವನ್ನು ಈಸ್ಟ್ ಇಂಡಿಯಾ ಕಂಪೆನಿ ಮತ್ತು ಇಂಡಿಯನ್ ಮುಜಾಹಿದೀನ್ ಗೆ ಹೋಲಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. 

ಈ ಸಂಬಂಧ ಬುಧವಾರ ಟ್ವೀಟ್ ಮಾಡಿರುವ ಅವರು, ''ಭಾರತೀಯರ ನೂರಾರು ಕೋಟಿ ತೆರಿಗೆ ಹಣವನ್ನು ಲೂಟಿ ಮಾಡಿ ದೇಶ ಬಿಟ್ಟು ಓಡಿಹೋಗಿರುವ ನೀರವ್ ಮೋದಿ ಮತ್ತು ಲಲಿತ್ ಮೋದಿ ಅವರ ಹೆಸರಿನಲ್ಲಿಯೂ ನಿಮ್ಮ ಹೆಸರಿನ ಮೋದಿ ಇದೆಯಲ್ಲಾ? ಅವರನ್ನು ನಿಮ್ಮ ಜೊತೆ ಹೋಲಿಸಬಹುದಾ?'' ಎಂದು ಪ್ರಶ್ನೆ ಮಾಡಿದ್ದಾರೆ. ''ಲಲಿತ್ ಮತ್ತು ನೀರವ್ ಹೆಸರಲ್ಲಿಯೂ ಮೋದಿ ಇದೆಯಲ್ಲಾ ಎಂಬ ಸಾಮಾನ್ಯ ಪ್ರಶ್ನೆ ಕೇಳಿದ ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿ, ಎರಡು ವರ್ಷ ಜೈಲು ಶಿಕ್ಷೆ ನೀಡಿ, ಲೋಕಸಭೆಯಿಂದ ಅನರ್ಹಗೊಳಿಸಲಾಯಿತು. ಈಗ ಇಂಡಿಯಾವನ್ನು ಈಸ್ಟ್ ಇಂಡಿಯಾ ಕಂಪೆನಿ ಮತ್ತು ಇಂಡಿಯನ್ ಮುಜಾಹಿದೀನ್ ಗೆ ಹೋಲಿಸಿರುವ ನಿಮ್ಮ ಹೋಲಿಕೆಗೆ ರಾಹುಲ್ ಗಾಂಧಿಯವರ ವಿರುದ್ಧದ ಕ್ರಮ ಅನ್ವಯವಾಗುವುದಿಲ್ಲವೇ?'' ಎಂದು ಅವರು ಪ್ರಶ್ನಿಸಿದ್ದಾರೆ.

''ಪ್ರಧಾನಿ ನರೇಂದ್ರ ಮೋದಿ ಅವರೇ, ಇಂಡಿಯಾ ಎಂಬ ಸುಂದರ, ಸುಮಧುರ ಮತ್ತು ಪವಿತ್ರ ಹೆಸರಿನ ಬಗ್ಗೆ ನಿಮಗೆ ಯಾಕೆ ಇಷ್ಟೊಂದು ದ್ವೇಷ? ಇಂಡಿಯಾ ಹೆಸರಿನ ಬಗ್ಗೆ ಇಷ್ಟೊಂದು ಅಸಹನೆ ಹೊಂದಿರುವ ನೀವು ನಿಮ್ಮದೇ ಸರ್ಕಾರದ ಕಾರ್ಯಕ್ರಮಗಳಾದ ಮೇಕ್ ಇನ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಇಂಡಿಯಾ ಮೊದಲಾದ ಕಾರ್ಯಕ್ರಮಗಳ ಹೆಸರನ್ನೂ ಬದಲಾಯಿಸುವಿರಾ?'' ಎಂದು ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News