ಚಂದ್ರಯಾನ 3 ಯಶಸ್ವಿ | ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ವಿಜ್ಞಾನಿಗಳನ್ನು ಸನ್ಮಾನಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೀಣ್ಯದಲ್ಲಿರುವ ಇಸ್ರೋ ಕೇಂದ್ರಕ್ಕೆ ಭೇಟಿ ನೀಡಿ ಚಂದ್ರಯಾನ-3 ಯಶಸ್ಸಿಗೆ ಕಾರಣರಾದ ಇಸ್ರೋ ಅಧ್ಯಕ್ಷ ಸೋಮನಾಥ ಸೇರಿದಂತೆ ಅಲ್ಲಿಯ ವಿಜ್ಞಾನಿಗಳು, ಸಿಬ್ಬಂದಿ ವರ್ಗದವರನ್ನು ಅಭಿನಂದಿಸಿದರು.
ಸೋಮನಾಥ ಹಾಗೂ ಇತರ ವಿಜ್ಞಾನಿಗಳನ್ನು ಸಿದ್ದರಾಮಯ್ಯ ಅವರು ಇದೇ ಸಂದರ್ಭದಲ್ಲಿ ಗೌರವಿಸಿ ಸಿಹಿ ವಿತರಿಸುವ ಮೂಲಕ ಸಂತಸ ಹಂಚಿಕೊಂಡರು.
ಈ ವೇಳೆ ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಉಪಸ್ಥಿತರಿದ್ದರು.
''ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ''
ʼದೇಶದ ವಿಜ್ಞಾನಿಗಳ ನಿರಂತರ ಪ್ರಯತ್ನ ಮತ್ತು ದಶಕಗಳ ಪರಿಶ್ರಮ ಇಂದು ಫಲನೀಡಿದೆ. ಚಂದ್ರನ ದಕ್ಷಿಣ ದ್ರುವದಲ್ಲಿ ಚಂದ್ರಯಾನ-3 ರ ವಿಕ್ರಂ ಲ್ಯಾಂಡರ್ ಯಶಸ್ವಿಯಾಗಿ ಇಳಿಯುವ ಮೂಲಕ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಸಾಧನೆಯನ್ನು ಜಗತ್ತು ಬೆರಗುಗಣ್ಣಿನಿಂದ ನೋಡುವಂತೆ ಮಾಡಿದೆ. ಪ್ರತಿಯೊಬ್ಬ ಭಾರತೀಯನಿಗೂ ಇದು ಹೆಮ್ಮೆಯ ಕ್ಷಣ. ಇಂಥದ್ದೊಂದು ಅಸಾಧಾರಣ ಸಾಧನೆಗೈದ ನಾಡಿನ ವಿಜ್ಞಾನಿಗಳಿಗೆ ಅಭಿನಂದನೆಗಳುʼ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.