×
Ad

ಪ್ರಧಾನಿ ಮೋದಿ ಅವರನ್ನು ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ

► ಮೇಕೆದಾಟು, ಮಹಾದಾಯಿ, ಕೃಷ್ಣಾ ನದಿ ನೀರು ಹಂಚಿಕೆ ಅಧಿಸೂಚನೆಗೆ ಮನವಿ ► ಎನ್‍ಡಿಆರ್‌ಎಫ್ ಅಡಿ ಗರಿಷ್ಠ ನೆರವು, ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಕೋರಿಕೆ

Update: 2025-11-17 20:24 IST

File Photo: (PC X/@CMofKarnataka)

ಹೊಸದಿಲ್ಲಿ : ಪ್ರಧಾನಿ ನರೇಂದ್ರ ಮೋದಿಯನ್ನು ಸೋಮವಾರ ಭೇಟಿಯಾದ ಮುಖ್ಯಮಂತ್ರಿ ಸಿದ್ದರಾಮಯ್ಯ, ರಾಜ್ಯದ ಮೇಕೆದಾಟು, ಮಹಾದಾಯಿ ನೀರಾವರಿ ಯೋಜನೆಗಳಿಗೆ ಅನುಮತಿ ಹಾಗೂ ಕೃಷ್ಣ ನದಿ ಹಂಚಿಕೆ ಕುರಿತು ಆಧಿಸೂಚನೆ ಹೊರಡಿಸುವಂತೆ ವಿನಂತಿಸಿದರು. ಅಲ್ಲದೇ, ಬೆಳೆ ಹಾನಿಗೆ ಎನ್‍ಡಿಆರ್‌ಎಫ್ ಅಡಿ ಗರಿಷ್ಠ ನೆರವು ನೀಡುವಂತೆ ಮತ್ತು ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಪತ್ರಗಳನ್ನು ಸಲ್ಲಿಸಿದರು.

ನೀರಾವರಿ ಯೋಜನೆಗಳ ಮನವಿ ಪತ್ರ: ಕಾವೇರಿ ನದಿಯ ಮೇಕೆದಾಟು ಯೋಜನೆಗೆ ಸಂಬಂಧಿಸಿ ತಮಿಳುನಾಡು ರಾಜ್ಯದ ವಿವಿಧ ಅರ್ಜಿಗಳನ್ನು ಸುಪ್ರೀಂಕೋರ್ಟ್ ನ.13ರಂದು ವಜಾಗೊಳಿಸಿದೆ. ಈ ಯೋಜನೆಗೆ ಅನುಮತಿ ನೀಡುವ ವಿಚಾರವಾಗಿ ಅಂತಿಮ ತೀರ್ಮಾನವನ್ನು ತೆಗೆದುಕೊಳ್ಳಲು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ ಮತ್ತು ಕೇಂದ್ರ ಜಲ ಆಯೋಗಕ್ಕೆ ಸೂಚಿಸಿದೆ. ಈಗಾಗಲೇ ಕೇಂದ್ರ ಜಲ ಆಯೋಗಕ್ಕೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವು ಮನವಿ ಮಾಡಿದ್ದು, ಕೇಂದ್ರ ಸರಕಾರವು ತ್ವರಿತವಾಗಿ ಕೇಂದ್ರ ಜಲ ಆಯೋಗಕ್ಕೆ ನಿರ್ದೇಶನಗಳನ್ನು ನೀಡುವ ಮೂಲಕ ಅನುಮತಿ ಕೊಡಿಸಬೇಕು ಎಂದು ಮುಖ್ಯಮಂತ್ರಿ ಮನವಿ ಮಾಡಿದ್ದಾರೆ.

ಕೃಷ್ಣಾ ನದಿ ನೀರು ಹಂಚಿಕೆ ಕುರಿತಂತೆ ಕೃಷ್ಣಾ ಜಲ ವಿವಾದ ನ್ಯಾಯ ಮಂಡಳಿ ತೀರ್ಪು ಘೋಷಣೆಯಾಗಿ ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದರೂ, ಇನ್ನೂ ಕೇಂದ್ರ ಸರಕಾರ ಗೆಜೆಟ್ ಅಧಿಸೂಚನೆ ಹೊರಡಿಸಿಲ್ಲ. ಈ ಯೋಜನೆಗಾಗಿ ರಾಜ್ಯ ಸರಕಾರವು ಹೆಚ್ಚಿನ ಮೊತ್ತವನ್ನು ವ್ಯಯಿಸಿದೆಯಾದರೂ, ಅಧಿಸೂಚನೆ ಹೊರಡಿಸಲು ತಡ ಮಾಡಿರುವುದರಿಂದ ಇನ್ನೂ ಯೋಜನೆಯ ಪ್ರಯೋಜನಗಳನ್ನು ಪಡೆಯಲು ಸಾಧ್ಯವಾಗಿಲ್ಲ. ದಯಮಾಡಿ ಇದನ್ನೂ ತ್ವರಿತವಾಗಿ ಇತ್ಯರ್ಥಗೊಳಿಸಿ ಎಂದು ಅವರು ಕೋರಿದ್ದಾರೆ.

ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರ ಸರಕಾರವು 2023-24ರ ಬಜೆಟ್‍ನಲ್ಲಿ 5,300 ಕೋಟಿ ರೂ.ಅನುದಾನ ಘೋಷಿಸಿತ್ತು. ಈ ಸಂಬಂಧ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಹಣಕಾಸು ಇಲಾಖೆಗೆ ಮನವಿ ಸಲ್ಲಿಸಿದರೂ ಇನ್ನೂ ರಾಜ್ಯಕ್ಕೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಎಂದು ಮುಖ್ಯಮಂತ್ರಿ ಗಮನ ಸೆಳೆದಿದ್ದಾರೆ.

ಹುಬ್ಬಳ್ಳಿ-ಧಾರವಾಡಕ್ಕೆ ಕುಡಿಯುವ ನೀರು ಪೂರೈಸುವ ಕಳಸಾ ಬಂಡೂರಿ ನಾಲಾ ಯೋಜನೆಗೆ (ಮಹಾದಾಯಿ) 2022ರ ಡಿಸೆಂಬರ್‍ನಲ್ಲಿ ಕೇಂದ್ರ ಜಲ ಆಯೋಗ/ಜಲಶಕ್ತಿ ಸಚಿವಾಲಯವು ಅನುಮತಿ ನೀಡಿದೆ. ಆದರೆ ಈ ಯೋಜನೆಗಳಿಗೆ ಯಾವುದೇ ಕಾನೂನು ಅಡೆತಡೆಗಳು ಇಲ್ಲದಿದ್ದರೂ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದಿಂದ ಇನ್ನೂ ಕಾಡು/ವನ್ಯಜೀವಿ ಅನುಮೋದನೆ ಸಿಕ್ಕಿಲ್ಲ. ಇದರಿಂದ ಯೋಜನೆಯನ್ನು ಅನುಷ್ಠಾನಗೊಳಿಸಲು ಹಾಗೂ ಕುಡಿಯುವ ನೀರು ಪೂರೈಸಲು ಸಾಧ್ಯವಾಗುತ್ತಿಲ್ಲ. ಕೂಡಲೇ ಮಧ್ಯಪ್ರವೇಶಿಸಿ ಈ ಸಮಸ್ಯೆಯನ್ನು ಬಗೆಹರಿಸಿ ಕೊಡಬೇಕೆಂದು ಸಿದ್ದರಾಮಯ್ಯ ಕೋರಿದ್ದಾರೆ.

ಎನ್‍ಡಿಆರ್‌ಎಫ್ ಅಡಿ ಗರಿಷ್ಠ ಪರಿಹಾರಕ್ಕೆ ಮನವಿ:

ರಾಜ್ಯದಲ್ಲಿ ಈ ವರ್ಷ ಪ್ರಕೃತಿ ವಿಕೋಪದಿಂದ 14.5 ಲಕ್ಷ ಹೆಕ್ಟೇರ್ ಗಿಂತಲೂ ಅಧಿಕ ಪ್ರದೇಶದ ಬೆಳೆ ಹಾನಿಗೊಳಗಾಗಿದ್ದು, ಸುಮಾರು 19 ಲಕ್ಷ ರೈತರು ಬಾಧಿಸಲ್ಪಟ್ಟಿದ್ದಾರೆ. ಇದಲ್ಲದೆ 13,143 ಮನೆಗಳು, 8,216.79 ಕಿಮೀ ರಸ್ತೆ, 2,856 ಶಾಲೆಗಳು, 164 ಪ್ರಾಥಮಿಕ ಆರೋಗ್ಯ ಕೇಂದ್ರಗಳು, 2,017 ಅಂಗನವಾಡಿ ಕೇಂದ್ರಗಳು, 43,798 ವಿದ್ಯುತ್ ಕಂಬಗಳು ಮತ್ತು 198 ಸಣ್ಣ ನೀರಾವರಿ ಕೆರೆಗಳು ಹಾನಿಗೊಳಗಾಗಿವೆ.

ರಾಜ್ಯ ಸರಕಾರವು ಎಸ್.ಡಿ.ಆರ್.ಎಫ್ ನಿಧಿಯಿಂದ 984.42 ಕೋಟಿ ರೂ.ಗಳನ್ನು ರೈತರಿಗೆ ‘ಬೆಳೆ ಉತ್ಪಾದನಾ ಸಹಾಯಧನ(ಇನ್ಪುಟ್ ಸಬ್ಸಿಡಿ) ವಿತರಿಸಲು ಮೀಸಲಿಟ್ಟಿದೆ. ಆದರೆ ಒಟ್ಟು ಅವಶ್ಯಕತೆ 1,499.32 ಕೋಟಿ ರೂ. ಆಗಿರುವ ಕಾರಣ 514.9 ಕೋಟಿ ರೂ.ಗಳ ಕೊರತೆ ಎದುರಾಗಿದೆ. ಎಸ್.ಡಿ.ಆರ್.ಎಫ್‍ನ ಮುಂದಿನ ಕಂತು 2026ರ ಜೂನ್ ವರೆಗೆ ಲಭ್ಯವಿಲ್ಲದ ಕಾರಣ, ಈ ಕೊರತೆಯನ್ನು ಭರಿಸಲು 514.9 ಕೋಟಿ ರೂ. ಹಾಗೂ ಅನಿರೀಕ್ಷಿತ ಅಗತ್ಯಗಳಿಗೆ ಹೆಚ್ಚುವರಿ 100 ಕೋಟಿ ರೂ. ಅವಶ್ಯಕವಾಗಿದೆ. ಆದುದರಿಂದ, ‘ರಕ್ಷಣಾ ಮತ್ತು ಪರಿಹಾರ’ ವಿಭಾಗದ ಅಡಿಯಲ್ಲಿ ಎನ್.ಡಿ.ಆರ್.ಎಫ್‍ನಿಂದ 614.9 ಕೋಟಿ ರೂ.ಗಳ ವಿಶೇಷ ನೆರವನ್ನು ಒದಗಿಸುವಂತೆ ಅವರು ಕೇಳಿದ್ದಾರೆ.

ಎಸ್.ಡಿ.ಆರ್.ಎಫ್‍ನ ‘ಪುನಶ್ಚೇತನ ಮತ್ತು ಪುನರ್ ನಿರ್ಮಾಣ’ ವಿಭಾಗದಡಿ 1,521.67 ಕೋಟಿ ರೂ. ಒದಗಿಸಬೇಕು. ಬೆಳೆ ಹಾನಿಯು 10 ಸಾವಿರ ಕೋಟಿ ರೂ.ಗಿಂತಹೆಚ್ಚು ಹಾಗೂ ಮೂಲಸೌಕರ್ಯ ಹಾನಿ 3,400 ಕೋಟಿ ರೂ.ಗಿಂತ ಹೆಚ್ಚಾಗಿದ್ದರೂ, ರಾಜ್ಯವು ಪ್ರಕೃತಿ ವಿಕೋಪ ನಿರ್ವಹಣಾ ಮಾರ್ಗಸೂಚಿಗಳಲ್ಲಿ ಅನುಮೋದನೆಗೊಂಡಿರುವ ಮಿತಿಗಳೊಳಗೆ ಮಾತ್ರ ಮನವಿಯನ್ನು ಸಲ್ಲಿಸಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ರಾಯಚೂರಿನಲ್ಲಿ ಏಮ್ಸ್ ಸ್ಥಾಪನೆಗೆ ಮನವಿ:

ರಾಜ್ಯ ಸರಕಾರವು ವಿವಿಧ ಸಾಧ್ಯತೆಯ ಸ್ಥಳಗಳನ್ನು ಪರಿಶೀಲಿಸಿದ ನಂತರ, ಕಲ್ಯಾಣ ಕರ್ನಾಟಕ ಪ್ರದೇಶಕ್ಕೆ ಸೇರಿದ ರಾಯಚೂರನ್ನು ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ(ಏಮ್ಸ್) ಸ್ಥಾಪನೆಗೆ ಅತ್ಯಂತ ಸೂಕ್ತಸ್ಥಳವೆಂದು ಗುರುತಿಸಿದೆ. ಇಲ್ಲಿ ಏಮ್ಸ್ ಸ್ಥಾಪನೆಯು ರಾಯಚೂರು, ಯಾದಗಿರಿ, ಬಳ್ಳಾರಿ, ಕೊಪ್ಪಳ, ಕಲಬುರಗಿ ಮತ್ತು ಬೀದರ್ ಜಿಲ್ಲೆಗಳ ಬೃಹತ್ ಜನಸಂಖ್ಯೆಗೆ ಮಾತ್ರವಲ್ಲದೆ ಸಾಮಾಜಿಕ-ಆರ್ಥಿಕ ಅಭಿವೃದ್ಧಿಗೆ ವೇಗ ನೀಡುತ್ತದೆ ಎಂದು ಅವರು ಗಮನ ಸೆಳೆದಿದ್ದಾರೆ.

ಜಲಜೀವನ್ ಮಿಷನ್:

ಕರ್ನಾಟಕದಲ್ಲಿ ಜಲಜೀವನ್ ಮಿಷನ್(ಜೆಜೆಎಂ) ಯೋಜನೆಯಡಿ ಶೇ.86ಕ್ಕಿಂತ ಹೆಚ್ಚು ಮನೆಗಳಿಗೆ ನಲ್ಲಿ ಸಂಪರ್ಕ ಒದಗಿಸಲಾಗಿದೆ. ರಾಜ್ಯಮಟ್ಟದ ಯೋಜನಾ ಮಂಜೂರಾತಿ ಸಮಿತಿ ಒಟ್ಟು 69,487.60 ಕೋಟಿ ರೂ. ವೆಚ್ಚದ ಯೋಜನೆಗಳಿಗೆ ಅನುಮೋದನೆ ನೀಡಿದೆ. ಇದುವರೆಗೆ ಈ ಯೋಜನೆಯಡಿ ಒಟ್ಟು 35,698.58 ಕೋಟಿ ರೂ.ಖರ್ಚು ಮಾಡಲಾಗಿದೆ. ಇದರಲ್ಲಿ ರಾಜ್ಯ ಸರಕಾರದ ಕೊಡುಗೆ 24,598.45 ಕೋಟಿ ರೂ.ಇದ್ದರೆ, ಕೇಂದ್ರ ಸರಕಾರದಿಂದ ಬಿಡುಗಡೆಯಾದ ಮೊತ್ತ ಕೇವಲ 11,786.63 ಕೋಟಿ ರೂ.ಮಾತ್ರ. 2025-26ರ ಅಂತ್ಯದವರೆಗೆ ರಾಜ್ಯಕ್ಕೆ ಕೊಡಬೇಕಾದ ಪಾಲಿನಲ್ಲಿ 13,004.63 ಕೋಟಿ ರೂ. ಇನ್ನೂ ಬಿಡುಗಡೆ ಮಾಡಿಲ್ಲ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

2024-25ರ ಹಣಕಾಸು ವರ್ಷದಲ್ಲಿ ಹಂಚಿಕೆ ಯಾಗಬೇಕಿದ್ದ 3,804.41 ಕೋಟಿ ರೂ. ಪೈಕಿ 570.66 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಸ್ವೀಕರಿಸಿದೆ. ಆದರೂ ರಾಜ್ಯ ಸರಕಾರ ತಾನೇ ಮುಂಗಡವಾಗಿ 7,045.64 ಕೋಟಿ ರೂ.ಬಿಡುಗಡೆ ಮಾಡುವ ಮೂಲಕ, ಯೋಜನೆಯ ಯಶಸ್ಸಿಗೆ ಅಗತ್ಯವಿರುವ 7,602.99 ಕೋಟಿ ರೂ.ಮೊತ್ತವನ್ನು ಒದಗಿಸಿದೆ ಎಂದು ಅವರು ಹೇಳಿದ್ದಾರೆ.

2025-26ನೆ ಸಾಲಿನಲ್ಲಿ ಕೇಂದ್ರದಿಂದ ಇನ್ನೂ ಒಂದು ರೂಪಾಯಿಯೂ ಬಂದಿಲ್ಲ. ಆದರೂ ರಾಜ್ಯ ಮುಂಗಡವಾಗಿ 1,500 ಕೋಟಿ ರೂ.ಬಿಡುಗಡೆ ಮಾಡಿದೆ. ಪ್ರಸಕ್ತ 1,700 ಕೋಟಿರೂ. ಮೊತ್ತದ ಬಿಲ್‍ಗಳು ಪಾವತಿಗೆ ಬಾಕಿ ಇವೆ ಮತ್ತು 2,600 ಕೋಟಿ ರೂ.ಮೊತ್ತದ ಬಿಲ್ಲುಗಳು ಸಲ್ಲಿಕೆಯಾಗಬೇಕಿದೆ ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ಗ್ರಾಮೀಣ ಜನತೆಗೆ ಶುದ್ಧ ಕುಡಿಯುವ ನೀರು ಒದಗಿಸುವುದು ಅತ್ಯಂತ ಮುಖ್ಯವಾದ ಕೇಂದ್ರದ ಯೋಜನೆಯಾಗಿದೆ. ಇದನ್ನು ಸಮಯಕ್ಕೆ ಸರಿಯಾಗಿ ಪೂರ್ಣಗೊಳಿಸಲು ಕೇಂದ್ರ ಸರಕಾರದ ಸಹಾಯ ಅನಿವಾರ್ಯ. ಆದುದರಿಂದ, ಜಲಜೀವನ್ ಮಿಷನ್ ಯೋಜನೆಯಡಿ ರಾಜ್ಯಕ್ಕೆ ಬಾಕಿ ಇರುವ ಕೇಂದ್ರದ ಪಾಲಿನ ಹಣವನ್ನು ತಕ್ಷಣವೆ ಬಿಡುಗಡೆ ಮಾಡುವಂತೆ ಅವರು ಕೋರಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News