ಸಾಂದರ್ಭಿಕ ಚಿತ್ರ (AI)

ಬೆಂಗಳೂರು: ರಾಜ್ಯ ಪೊಲೀಸ್ ನೇಮಕಾತಿ ವಿಭಾಗವು ಸಿವಿಲ್ ಪೊಲೀಸ್ ಕಾನ್‍ಸ್ಟೇಬಲ್ (ಆರ್‍ಪಿಸಿ ಮತ್ತು ಕೆಕೆ) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ದೇಹದಾಡ್ರ್ಯ ಪರೀಕ್ಷೆ ಹಾಗೂ ಸಹಿಷ್ಣುತಾ ಪರೀಕ್ಷೆಯ ವೇಳಾಪಟ್ಟಿಯನ್ನು ಪ್ರಕಟಿಸಿದೆ.

ಒಟ್ಟು 3,991 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದ್ದು, ರಾಜ್ಯಾದ್ಯಂತ ವಿವಿಧ ಹಂತಗಳಲ್ಲಿ ಆಯ್ಕೆಯಾಗಿರುವ ಒಟ್ಟು 19,396 ಅರ್ಹ ಅಭ್ಯರ್ಥಿಗಳು ದೈಹಿಕ ಪರೀಕ್ಷೆಗಳಲ್ಲಿ ಭಾಗವಹಿಸಲಿದ್ದಾರೆ.

ಉಳಿಕೆ ಮೂಲ ವೃಂದದ ಒಟ್ಟು 3,395 ಹುದ್ದೆಗಳಿಗೆ 16,454 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹತೆ ಪಡೆದಿದ್ದರೆ, ಕಲ್ಯಾಣ ಕರ್ನಾಟಕ ವೃಂದದ 596 ಹುದ್ದೆಗಳಿಗೆ 2,942 ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಆಯ್ಕೆಯಾಗಿದ್ದಾರೆ.

ಬೆಂಗಳೂರು ನಗರ ಘಟಕ ವ್ಯಾಪ್ತಿಯಲ್ಲಿ 2,015 ಹುದ್ದೆಗಳಿದ್ದು, ಒಟ್ಟು 9,887 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇವರಿಗೆ ಸೆ.28ರಿಂದ ಅ.5ರ ವರೆಗೆ ಸಿಎಆರ್ (ಎಚ್‍ಕ್ಯೂ) ಚಾಮರಾಜಪೇಟೆಯ ಸಿರ್ಸಿ ಸರ್ಕಲ್ ಮೈದಾನ, ಆಡುಗೋಡಿಯ ಸಿಎಆರ್ (ದಕ್ಷಿಣ) ಮೈದಾನ ಹಾಗೂ ಆರ್.ಕೆ.ಹೆಗಡೆ ನಗರದ ಥಣಿಸಂದ್ರ ಮುಖ್ಯ ರಸ್ತೆಯಲ್ಲಿರುವ ಸಿಎಆರ್ (ಉತ್ತರ) ಪರೇಡ್ ಮೈದಾನಗಳಲ್ಲಿ ದೈಹಿಕ ಪರೀಕ್ಷೆ ನಡೆಯಲಿವೆ.

ಕೇಂದ್ರ ವಲಯದ ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಬೆಂಗಳೂರು ಜಿಲ್ಲೆ ಹಾಗೂ ರೈಲ್ವೆ ಘಟಕಗಳನ್ನು ಒಳಗೊಂಡಂತೆ 200 ಹುದ್ದೆಗಳಿಗೆ 946 ಅಭ್ಯರ್ಥಿಗಳ ಪರೀಕ್ಷೆ ಸೆ.28ರಿಂದ ಅ.3 ರವರೆಗೆ ನಗರದ ಕೊರಮಂಗಲದ ಮಡಿವಾಳ ಮಾರುಕಟ್ಟೆ ಎದುರು ಇರುವ 3ನೇ ಬೆಟಾಲಿಯನ್ ಕೆಎಸ್‍ಆರ್‍ಪಿ ಮೈದಾನದಲ್ಲಿ ನಡೆಯಲಿವೆ.

ದಕ್ಷಿಣ ವಲಯದ ಮೈಸೂರು ನಗರ, ಮೈಸೂರು ಜಿಲ್ಲೆ, ಹಾಸನ, ಕೊಡಗು, ಚಾಮರಾಜನಗರ ಮತ್ತು ಮಂಡ್ಯ ಘಟಕಗಳ 395 ಹುದ್ದೆಗಳಿಗೆ 1,891 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಸೆ.28ರಿಂದ ಅ.5ರ ವರೆಗೆ ಮೈಸೂರಿನ ರೇಸ್ ಕೋರ್ಸ್ ಹಿಂಭಾಗದಲ್ಲಿರುವ ಸಿಟಿ ಆಮ್ರ್ಸ್ ರಿಸರ್ವ್ ಪರೇಡ್ ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಯಲಿವೆ.

ಪೂರ್ವ ವಲಯದ ಶಿವಮೊಗ್ಗ, ಹಾವೇರಿ, ದಾವಣಗೆರೆ ಹಾಗೂ ಚಿತ್ರದುರ್ಗ ಘಟಕಗಳ ವ್ಯಾಪ್ತಿಯ 250 ಹುದ್ದೆಗಳಿಗೆ 1,234 ಅಭ್ಯರ್ಥಿಗಳು ಪರೀಕ್ಷೆಗೆ ಅರ್ಹರಾಗಿದ್ದಾರೆ. ಸೆ.29ರಿಂದ ಅ.6 ರವರೆಗೆ ಶಿವಮೊಗ್ಗದ ನವಿಲೆಯಲ್ಲಿರುವ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಯಲಿವೆ.

ಪಶ್ಚಿಮ ವಲಯದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ (ಕಾರವಾರ), ಚಿಕ್ಕಮಗಳೂರು ಮತ್ತು ಮಂಗಳೂರು ನಗರ ಘಟಕಗಳ 395 ಹುದ್ದೆಗಳಿಗೆ 1,803 ಅಭ್ಯರ್ಥಿಗಳು ಆಯ್ಕೆಯಾಗಿದ್ದು, ಇವರಿಗೆ ಸೆ.28ರಿಂದ ಅ.3ರ ವರೆಗೆ ಮಂಗಳೂರಿನ ಲಾಲ್‍ಬಾಗ್‍ನಲ್ಲಿರುವ ಮಂಗಳ ಕ್ರೀಡಾಂಗಣದಲ್ಲಿ ದೈಹಿಕ ಪರೀಕ್ಷೆ ನಿಗದಿಯಾಗಿದೆ.

ಉತ್ತರ ವಲಯದ ಗದಗ್ ಹಾಗೂ ಹುಬ್ಬಳ್ಳಿ-ಧಾರವಾಡ ನಗರ ಘಟಕ ಒಳಗೊಂಡ 110 ಹುದ್ದೆಗಳಿಗೆ 549 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇವರಿಗೆ ಸೆ.29 ಮತ್ತು ಸೆ.30ರಂದು ಬೆಳಗಾವಿಯ ವಿಟಿಯು ಹತ್ತಿರದ ಮಚ್ಚೆಯಲ್ಲಿರುವ 2ನೇ ಬೆಟಾಲಿಯನ್ ಕೆಎಸ್‍ಆರ್‍ಪಿ ಮೈದಾನದಲ್ಲಿ ಪರೀಕ್ಷೆ ನಡೆಯಲಿದೆ.

ಬಳ್ಳಾರಿ ವಲಯದ ಬಳ್ಳಾರಿ ಮತ್ತು ರಾಯಚೂರು ಘಟಕಗಳ 30 ಹುದ್ದೆಗಳಿಗೆ 144 ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇವರಿಗೆ ಪರೀಕ್ಷೆಯು ಅ.5 ಮತ್ತು ಅ.6ರಂದು ಕೊಪ್ಪಳದ ಮುನಿರಾಬಾದ್‍ನ ಹೊಸಹಳ್ಳಿ ಬಳಿಯಿರುವ ಕೆಎಸ್‍ಆರ್‍ಪಿ ಪಿ.ಟಿ.ಎಸ್. ಮೈದಾನದಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.


ಕಲ್ಯಾಣ ಕರ್ನಾಟಕ ವೃಂದದ ಪರೀಕ್ಷಾ ವಿವರ: ಸಿಒಪಿ ಬೆಂಗಳೂರು ನಗರ ಭಾಗದ 171 ಹುದ್ದೆಗಳಿಗೆ 833 ಅಭ್ಯರ್ಥಿಗಳು ಅರ್ಹರಾಗಲಿದ್ದು, ಅ.8ರಂದು ಚಾಮರಾಜಪೇಟೆಯ ಸಿಎಆರ್ ಪರೇಡ್ ಮೈದಾನ ಹಾಗೂ ಆಡುಗೋಡಿಯ ಸಿಎಆರ್ ಪರೇಡ್ ಮೈದಾನಗಳಲ್ಲಿ (ದಕ್ಷಿಣ) ಏಕಕಾಲದಲ್ಲಿ ದೈಹಿಕ ಪರೀಕ್ಷೆ ನಡೆಯಲಿದೆ. ಬಳ್ಳಾರಿ ವಲಯದ ಕೊಪ್ಪಳ, ರಾಯಚೂರು, ಬಳ್ಳಾರಿ ಹಾಗೂ ವಿಜಯನಗರ ಘಟಕಗಳ 174 ಹುದ್ದೆಗಳಿಗೆ 869 ಅಭ್ಯರ್ಥಿಗಳು ಅರ್ಹತೆ ಪಡೆದಿದ್ದಾರೆ. ಇವರಿಗೆ ಅ.12ರಿಂದ 15 ರವರೆಗೆ ಕೊಪ್ಪಳದ ಮುನಿರಾಬಾದ್ ಹೊಸಹಳ್ಳಿಯಲ್ಲಿರುವ ಕೆಎಸ್‍ಆರ್‍ಪಿ ಪಿ.ಟಿ.ಎಸ್ ಮೈದಾನದಲ್ಲಿ ದೈಹಿಕ ಪರೀಕ್ಷೆ ನಡೆಸಲಾಗುವುದು. ಈಶಾನ್ಯ ವಲಯದ ಕಲಬುರಗಿ ನಗರ, ಕಲಬುರಗಿ ಜಿಲ್ಲೆ ಹಾಗೂ ಬೀದರ್ ಘಟಕಗಳ 251 ಹುದ್ದೆಗಳಿಗೆ 1,240 ಅಭ್ಯರ್ಥಿಗಳು ದೈಹಿಕ ಪರೀಕ್ಷೆಯು ಅ.12ರಿಂದ ಅ.14ರ ವರೆಗೆ ಕಲಬುರಗಿಯ ತಾಜ್ ಸುಲ್ತಾನ್‍ಪುರದಲ್ಲಿರುವ 6ನೇ ಬೆಟಾಲಿಯನ್ ಕೆಎಸ್‍ಆರ್‍ಪಿ ಮೈದಾನದಲ್ಲಿ ನೆಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor