‘ರಾಜ್ಯಪಾಲರ ಭಾಷಣ’ ವಿವಾದ | ‘ವಾರ್ತಾಭಾರತಿ ಪತ್ರಿಕೆ ಸಂಪಾದಕೀಯ’ ಉಲ್ಲೇಖಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು : ವಿಧಾನ ಮಂಡಲ ಉಭಯ ಸದನಗಳ ಜಂಟಿ ಅಧಿವೇಶನವನ್ನುದ್ದೇಶಿಸಿ ‘ರಾಜ್ಯಪಾಲರ ಭಾಷಣ’ದ ವಿಷಯ ರಾಜ್ಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ. ಈ ಮಧ್ಯೆ ರಾಜ್ಯಪಾಲರ ಭಾಷಣದ ಕುರಿತು ವಿಧಾನಸಭೆಯಲ್ಲಿ ನಡೆದ ಸುದೀರ್ಘ ಚರ್ಚೆಗೆ ಉತ್ತರ ನೀಡುವ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ‘ವಾರ್ತಾಭಾರತಿ ಪತ್ರಿಕೆ’ಯ ಸಂಪಾದಕೀಯವನ್ನು ಉಲ್ಲೇಖಿಸಿದರು.
ಸೋಮವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಸದನ ಸಮಾವೇಶಗೊಳ್ಳುತ್ತಿದ್ದಂತೆ ಸ್ಪೀಕರ್ ಯು.ಟಿ.ಖಾದರ್, ರಾಜ್ಯಪಾಲರ ಭಾಷಣಕ್ಕೆ ಸಂಬಂಧಿಸಿದಂತೆ ವಂದನಾರ್ಪಣಾ ಪ್ರಸ್ತಾವದ ಮೇಲೆ ನಡೆದ ಚರ್ಚೆಗೆ ಉತ್ತರ ನೀಡಲು ಅವಕಾಶ ನೀಡಿದರು. ಬಳಿಕ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ, ‘ರಾಜ್ಯಪಾಲರು ಸರಕಾರ ಸಿದ್ದಪಡಿಸಿದ್ದ ಭಾಷಣವನ್ನು ಸಂಪೂರ್ಣ ಓದದೆ ತರಾತುರಿಯಲ್ಲಿ ಹೋದರು. ಭಾಷಣದಲ್ಲಿದ್ದ ‘ಜೈ ಸಂವಿಧಾನ’ ಎನ್ನುವುದನ್ನೂ ಉಲ್ಲೇಖಿಸಲಿಲ್ಲ. ರಾಷ್ಟ್ರಗೀತೆ ಮುಗಿಯುವವರೆಗೂ ಕಾಯಲಿಲ್ಲ, ಇದು ಸರಿಯಲ್ಲ’ ಎಂದು ಆಕ್ಷೇಪಿಸಿದರು.
ಈ ಕುರಿತು ರಾಜ್ಯದ ದಿನಪತ್ರಿಕೆಗಳಲ್ಲಿನ ಸಂಪಾದಕೀಯಗಳನ್ನು ಪ್ರಸ್ತಾಪಿಸಿದ ಸಿದ್ದರಾಮಯ್ಯ ಅವರು, ‘ಜ.23ರಂದು ವಾರ್ತಾಭಾರತಿ ಪತ್ರಿಕೆಯಲ್ಲಿನ ಸಂಪಾದಕೀಯವನ್ನು ಉಲ್ಲೇಖಿಸಿದರು. ‘ಜ.22ರ ಗುರುವಾರದಂದು ಅಧಿವೇಶನದಲ್ಲಿ ಗೆಹ್ಲೋಟ್ ಅವರ ನಡವಳಿಕೆ ರಾಜ್ಯಪಾಲ ಘನತೆಗೆ ತಕ್ಕುದಾಗಿರಲಿಲ್ಲ. ಸರಕಾರದ ನಿರ್ಧಾರ, ನಿರ್ಣಯಗಳು ತನ್ನ ಅಥವಾ ಕೇಂದ್ರ ಸರಕಾರದ ಮೂಗಿನ ನೇರಕ್ಕಿರಬೇಕು ಎಂಬಂತಿತ್ತು ಅವರ ವರ್ತನೆ. ಆ ಮೂಲಕ ಒಕ್ಕೂಟ ವ್ಯವಸ್ಥೆಯ ಹಿರಿಮೆಗೆ ಧಕ್ಕೆ ತಂದರು. ಮಾತ್ರವಲ್ಲ, ಸಂವಿಧಾನದ ಆಶಯಗಳಿಗೆ ಚ್ಯುತಿಯುಂಟು ಮಾಡಿದರು. ಈಗಾಗಲೇ ಜಾರಿಯಲ್ಲಿರುವ ಕೇಂದ್ರ ಮತ್ತು ರಾಜ್ಯಗಳ ನಡುವಿನ ಸಂಘರ್ಷಕ್ಕೆ ಅವರು ತುಪ್ಪ ಸುರಿದಿದ್ದಾರೆ’ ಎಂದು ಸಿಎಂ ಪ್ರಸ್ತಾಪ ಮಾಡಿದರು.
ಈ ವೇಳೆ ಮಧ್ಯಪ್ರವೇಶಿಸಿದ ಬಿಜೆಪಿ ಸದಸ್ಯ ವಿ.ಸುನೀಲ್‍ಕುಮಾರ್, ‘ವಾರ್ತಾಭಾರತಿ ಪತ್ರಿಕೆ ನಿಮ್ಮ ಸಚಿವ ಸಂಪುಟದಲ್ಲಿದೆಯೇ?’ ಎಂದು ಪ್ರಶ್ನಿಸಿದರು. ‘ಆ ಪತ್ರಿಕೆಯ ಪ್ರತಿನಿಧಿಗಳು ಯಾರೂ ನಮ್ಮ ಪಕ್ಷದಲ್ಲಿಲ್ಲ’ ಎಂದು ಸಿದ್ದರಾಮಯ್ಯ ತಿರುಗೇಟು ನೀಡಿದರು. ಇದಕ್ಕೆ ಧ್ವನಿಗೂಡಿಸಿದ ಸಚಿವ ಭೈರತಿ ಸುರೇಶ್, ‘ವಾರ್ತಾಭಾರತಿ’ ಪ್ರತಿನಿಧಿಗಳು ಯಾರು ನಮ್ಮ ಸಚಿವ ಸಂಪುಟದಲ್ಲಿ ಇಲ್ಲ. ಬೇರೆ ಪತ್ರಿಕೆಯೊಂದರ ಸಂಪಾದಕರು ನಿಮ್ಮ(ಬಿಜೆಪಿ)ಪಕ್ಷದಲ್ಲಿ ಸದಸ್ಯರಾಗಿದ್ದರು’ ಎಂದು ಉಲ್ಲೇಖಿಸಿದರು.