ಬೆಂಗಳೂರಿನಲ್ಲಿ ಫೆ.27ಕ್ಕೆ ಜಿಎಎಫ್‍ಎಕ್ಸ್ ಸಮ್ಮೇಳನ : ಪ್ರಿಯಾಂಕ್ ಖರ್ಗೆ
ಪ್ರಿಯಾಂಕ್ ಖರ್ಗೆ | PC: PTI
ಬೆಂಗಳೂರು : ಅನಿಮೇಷನ್, ವಿಷುಯಲ್ ಎಫೆಕ್ಪ್, ಗೇಮಿಂಗ್ ಮತ್ತು ಕಾಮಿಕ್ಸ್(ಎವಿಜಿಸಿ)ಗೆ ಸಂಬಂಧಿಸಿದಂತೆ ಏಷ್ಯಾದ ಅತಿದೊಡ್ಡ ವಾರ್ಷಿಕ ಸಮ್ಮೇಳನ ಮತ್ತು ಪ್ರದರ್ಶನ ಎಂದೇ ಖ್ಯಾತಿ ಆಗಿರುವ ‘ಬೆಂಗಳೂರು ಜಿಎಎಫ್‍ಎಕ್ಸ್-2026’ ಅನ್ನು ಫೆ.27ರಿಂದ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾಗಿದೆ ಎಂದು ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಸೋಮವಾರ ವಿಧಾನಸೌಧದ ತಮ್ಮ ಕೊಠಡಿಯಲ್ಲಿ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರಕಾರವು ಅಸೋಸಿಯೇಷನ್ ಆಫ್ ಬೆಂಗಳೂರು ಅನಿಮೇಷನ್ ಇಂಡಸ್ಟ್ರಿ(ಎಬಿಎಐ) ಸಹಯೋಗದಡಿ ಈ ಸಮ್ಮೇಳನವನ್ನು ಹಮ್ಮಿಕೊಳ್ಳಲಾಗಿದೆ. ಈ ಕ್ಷೇತ್ರದಲ್ಲಿ ಜಾಗತಿಕ ಮಟ್ಟದಲ್ಲಿ ಕೆಲಸ ಮಾಡುತ್ತಿರುವ ಮಾಡಲು ಇಚ್ಛಿಸುವ ಕನಸುಗಾರರು ಒಟ್ಟು ಸೇರಲಿದ್ದಾರೆ. ಹೊಸ ಚಿಂತನೆ ಮತ್ತು ತಂತ್ರಜ್ಞಾನಕ್ಕೆ ಸಮ್ಮೇಳನ ಪ್ರೋತ್ಸಾಹ ನೀಡಲಿದೆ ಎಂದು ಅವರು ತಿಳಿಸಿದರು.
ಈ ತಿಂಗಳಾಂತ್ಯಕ್ಕೆ ನಡೆಯಲಿರುವ ಬೆಂಗಳೂರು ಜಿಎಎಫ್‍ಎಕ್ಸ್-7ನೆ ಆವೃತ್ತಿಯಾಗಿದ್ದು, ಫೆ.27ರಿಂದ ಮಾ.1ರವರೆಗೆ ಬೆಂಗಳೂರಿನ ಹೋಟೆಲ್ ಲಲಿತ್ ಅಶೋಕ್‍ನಲ್ಲಿ ನಡೆಯಲಿದೆ. ವಿಕಾಸದ ಮರುವ್ಯಾಖ್ಯಾನವು ಈ ವರ್ಷದ ಮುಖ್ಯ ಆಶಯವಾಗಿದ್ದು, ತನ್ಮಯಗೊಳಿಸುವ ಮಾಧ್ಯಮ ಉದ್ಯಮಗಳಲ್ಲಿನ ಬೆಳವಣಿಗೆಯ ಮುಂದಿನ ಹಂತವನ್ನು ಪ್ರತಿಬಿಂಬಿಸಲಿದೆ. ಮಾನವನ ಸೃಜನಶೀಲತೆ ಮತ್ತು ಮುಂದುವರಿದ ತಂತ್ರಜ್ಞಾನಗಳು ಕತೆ ಹೇಳುವಿಕೆ, ಗೇಮಿಂಗ್, ಅನಿಮೇಷನ್ ಈ ಸಮಾವೇಶದಲ್ಲಿ ಸಂಗಮಗೊಳ್ಳಲಿವೆ ಎಂದು ಸಚಿವರು ವಿವರಿಸಿದರು.
ಈ ಬಾರಿಯ ಸಮ್ಮೇಳನದಲ್ಲಿ ಪ್ರಮುಖ ಸಿನೆಮಾಗಳಾದ ಕಾಂತಾರ ಚಾಪ್ಟರ್ 1, ನೆಟ್‍ಫ್ಲಿಕ್ಸ್ ನ ಕುರುಕ್ಷೇತ್ರ, ಮಹಾವತಾರ ನರಸಿಂಹ, ಧುರಂಧರ್ ಮತ್ತು ಲೋಕಹ ಸೇರಿದಂತೆ ಭಾರಿ ಯಶಸ್ಸು ಕಂಡಿರುವ ಜನಪ್ರಿಯ ಚಿತ್ರ ನಿರ್ಮಾಣಗಳ ಕುರಿತು ವಿಶೇಷ ಸಭಾ ಕಾರ್ಯಕ್ರಮ ಇರಲಿದೆ. ಲೇಖಕ ಆನಂದ ನೀಲಕಂಠನ್ ಜೊತೆಗೆ ಭಾರತದ ಪುರಾಣಗಳ ಕುರಿತು ಪುಸ್ತಕದಿಂದ ಪರದೆಯವರೆಗಿನ ಸಂವಾದ ಕಾರ್ಯಕ್ರಮ, ಕಾಂತಾರ, ಬಾಹುಬಲಿ ಮತ್ತು ಒಜಿ ಚಲನಚಿತ್ರಗಳ ಛಾಯಾಗ್ರಹಣ ನಿರ್ದೇಶಕರು ಭಾಗವಹಿಸಲಿರುವ ಛಾಯಾಗ್ರಹಣ ಮತ್ತು ವರ್ಚುವಲ್ ಪ್ರೊ ಡಕ್ಷನ್ ಸಭಾ ಕಾರ್ಯಕ್ರಮಗಳು ಸಹ ಈ ಸಮಾವೇಶದ ಪ್ರಮುಖ ಆಕರ್ಷಣೆಗಳಾಗಿವೆ ಎಂದೂ ಅವರು ವಿವರಿಸಿದರು.
50ಕ್ಕೂ ಹೆಚ್ಚು ಸಭಾ ಕಾರ್ಯಕ್ರಮಗಳು, ಮಾಸ್ಟರ್ ಕ್ಲಾಸ್‍ಗಳು ಮತ್ತು ಕಾರ್ಯಾಗಾರಗಳಲ್ಲಿ 100ಕ್ಕೂ ಹೆಚ್ಚು ಭಾಷಣಕಾರರು ತಮ್ಮ ಚಿಂತನೆಗಳನ್ನು ಸಭಿಕರ ಜೊತೆ ಹಂಚಿಕೊಳ್ಳಲಿದ್ದಾರೆ. ಜಿಎಎಫ್‍ಎಕ್ಸ್ 2026 ಐಎಲ್‍ಎಂ, ನೆಟ್‍ಫ್ಲಿಕ್ಸ್, ಎಂಆರ್‌ಎಕ್ಸ್, ಬೇಸ್ ಎಫ್‍ಎಕ್ಸ್, ಮೊಂಕ್ ಸ್ಟುಡಿಯೊಸ್ ಮತ್ತು ದಿ ಪೆರ್ಲಿನ್ ನಂತಹ ಪ್ರಮುಖ ಸ್ಟುಡಿಯೊಗಳಿಂದ ಜಾಗತಿಕ ಪರಿಣತರ ಜೊತೆಗೆ ಸಭೆ ಆಯೋಜಿಸಲಿದೆ.
ಅದೇ ರೀತಿ, ಆಸ್ಕರ್ ಮತ್ತು ಬ್ರಿಟಿಷ್ ಅಕಾಡೆಮಿ ಆಫ್ ಫಿಲ್ಮ್ ಆ್ಯಂಡ್ ಟೆಲಿವಿಷನ್ ಆಟ್ರ್ಸ್ (ಬಿಎಎಫ್‍ಟಿಎ) ನಾಮ ನಿರ್ದೇಶಿತ ಯೋಜನೆಗಳಿಂದ ನಿರ್ಮಾಣ ಸಂವಾದ, ಬಲವಾದ ಗೇಮಿಂಗ್ ಟ್ರ್ಯಾಕ್ ಮತ್ತು ವಿಶ್ವ ದರ್ಜೆಯ ವಿಎಫ್‍ಎಕ್ಸ್ ಮಾಸ್ಟರ್ ಕ್ಲಾಸ್‍ಗಳನ್ನು ಒಳಗೊಂಡಿರಲಿದೆ ಎಂದೂ ಸಚಿವರು ಹೇಳಿದರು.
ಒಂದು ದಶಕಕ್ಕೂ ಹೆಚ್ಚು ಕಾಲ, ಬೆಂಗಳೂರು ಜಿಎಎಫ್‍ಎಕ್ಸ್ ಭಾರತದ ಎವಿಜಿಸಿ ವಲಯಕ್ಕೆ ವೇಗವರ್ಧಕ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಪ್ರತಿಭೆ, ತಂತ್ರಜ್ಞಾನ, ಸರಕಾರದ ನೀತಿಗಳು ಮತ್ತು ಜಾಗತಿಕ ಅವಕಾಶಗಳನ್ನು ಒಂದೇ ವೇದಿಕೆಯಲ್ಲಿ ಒದಗಿಸಿ ಕೊಡುತ್ತಿದೆ. ಸ್ಟುಡಿಯೊಗಳು, ನವೋದ್ಯಮಗಳು ಮತ್ತು ಹೊಸ ತಲೆಮಾರಿನ ಸೃಷ್ಟಿಕರ್ತರ ಬೆಳವಣಿಗೆಗೆ ವೇಗ ನೀಡುವುದರ ಜೊತೆಗೆ ಭಾರತದ ಸೃಜನಶೀಲ ಸಾಮಥ್ರ್ಯಗಳನ್ನು ಜಗತ್ತಿಗೆ ಪ್ರದರ್ಶಿಸಲು ನೆರವಾಗುತ್ತಿದೆ. ವಿಕಾಸದ ಮರುವ್ಯಾಖ್ಯಾನವು ಎವಿಜಿಸಿ ಬೆಳವಣಿಗೆಯ ಮುಂದಿನ ಹಂತವು ಡೀಪ್ ಟೆಕ್ನಾಲಜಿ ಮತ್ತು ಮಾನವನ ಸೃಜನಶೀಲತೆಯ ಸಂಗಮದಿಂದ ಸಾಧ್ಯವಾಗಲಿದೆ ಎನ್ನುವ ಕರ್ನಾಟಕದ ನಂಬಿಕೆಯನ್ನು ಬಲವಾಗಿ ಪ್ರತಿಬಿಂಬಿಸಲಿದೆ ಎಂದು ಅವರು ತಿಳಿಳಿಸಿದರು.
ಐಟಿ, ಬಿಟಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ಡಾ.ಮಂಜುಳಾ ಮಾತನಾಡಿ, ತಂತ್ರಜ್ಞಾನ ಮತ್ತು ಮಾನವನ ಕಲ್ಪನೆಯು ಒಟ್ಟಿಗೆ ಬೆಳೆಯುವ ಭವಿಷ್ಯಕ್ಕೆ ಸಿದ್ಧವಾದ ಸೃಜನಶೀಲ ಆರ್ಥಿಕತೆ ನಿರ್ಮಿಸುವ ಕರ್ನಾಟಕದ ದೀರ್ಘಕಾಲೀನ ಬದ್ಧತೆಯನ್ನು ಈ ಸಮಾವೇಶವು ಪ್ರತಿನಿಧಿಸುತ್ತದೆ. ಎವಿಜಿಸಿ ಮತ್ತು ತನ್ಮಯಗೊಳಿಸುವ ಮಾಧ್ಯಮ ವಲಯಗಳು ವೇಗವಾಗಿ ಬದಲಾವಣೆಗೊಳ್ಳುತ್ತಿದ್ದಂತೆ, ನಮ್ಮ ಗಮನವು ಕೌಶಲಗಳು, ಸ್ಟುಡಿಯೊಗಳು, ನವೋದ್ಯಮಗಳು, ಮೂಲಸೌಕರ್ಯ ಮತ್ತು ಜಾಗತಿಕ ಪಾಲುದಾರಿಕೆಗಳಂತಹ ಸಂಪೂರ್ಣ ಪ್ರಕ್ರಿಯೆಯನ್ನು ಬಲಪಡಿಸುತ್ತಿವೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಎಬಿಎಐ ಅಧ್ಯಕ್ಷ ಬಿರೆನ್ ಘೋಸ್, ಫೇಸ್ 1 ವರ್ಲ್ಡ್ ನ ನಿರ್ದೇಶಕ ಓಮ್ ಪ್ರದತ್ ಸೇರಿದಂತೆ ಪ್ರಮುಖರಿದ್ದರು.