ʼಹನೂರು ಶೂಟೌಟ್‌ ಪ್ರಕರಣʼ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ಎಸ್‌ಐಟಿ ತನಿಖೆಯಾಗಲಿ : ಬೊಮ್ಮಾಯಿ ಒತ್ತಾಯ

Update: 2026-08-16 16:58 IST

​ಬೆಂಗಳೂರು : ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿಯಿಂದ ನಡೆದ ಶೂಟೌಟ್‌ ಘಟನೆಗೆ ಸಂಬಂಧಿಸಿದಂತೆ ನ್ಯಾಯಾಲಯದ ಮೇಲ್ವಿಚಾರಣೆಯಲ್ಲಿ ವಿಶೇಷ ತನಿಖಾ ತಂಡ ರಚಿಸಿ ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಅವರು ಆಗ್ರಹಿಸಿದ್ದಾರೆ.

ಬೆಂಗಳೂರಿನಲ್ಲಿ ​ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಘಟನೆಯ ಕುರಿತು ಸ್ಥಳೀಯ ಜನರು ತೀವ್ರ ಪ್ರತಿಭಟನೆ ನಡೆಸುತ್ತಿದ್ದು, ಅರಣ್ಯ ಪ್ರದೇಶದಲ್ಲಿ ಸ್ಥಳೀಯರಿಗೆ ಮತ್ತು ಅರಣ್ಯ ಇಲಾಖೆಗೆ ನಿರಂತರವಾಗಿ ಸಂಪರ್ಕವಿರುತ್ತದೆ. ಆದರೆ ಈ ರೀತಿಯ ಹತ್ಯೆ ಘಟನೆಗಳು ಸಂಭವಿಸಿರುವುದು ಹಾಗೂ ಬೆದರಿಸುವ ಕೆಲಸಗಳು ನಡೆಯುತ್ತಿರುವುದು ತೀವ್ರ ಆತಂಕಕಾರಿ ಸಂಗತಿಯಾಗಿದೆ ಎಂದರು.

ಅರಣ್ಯ ಇಲಾಖೆ ಹಾಗೂ ಸ್ಥಳೀಯ ಜನರ ನಡುವೆ ನಿಕಟವಾದ ಸಂಬಂಧವಿರುತ್ತದೆ. ಸ್ಥಳೀಯ ಗಾರ್ಡ್ಸ್‌ ಹಾಗೂ ಕೆಳಹಂತದ ಅರಣ್ಯ ಅಧಿಕಾರಿಗಳಿಗೆ ಪ್ರತಿಯೊಬ್ಬರ ಬಗ್ಗೆಯೂ ಮಾಹಿತಿ ಇರುತ್ತದೆ. ಹೀಗಿರುವಾಗ ಅತ್ಯಂತ ಕಡಿಮೆ ಅಂತರದಿಂದ ಮೂವರು ವ್ಯಕ್ತಿಗಳ ಮೇಲೆ ಗುಂಡು ಹಾರಿಸಿರುವುದು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ ಎಂದು ಆರೋಪಿಸಿದರು.

​ಇಲಾಖೆಯ ಅಧಿಕಾರಿಗಳು ನೀಡುತ್ತಿರುವ ಸಮರ್ಥನೆಗಳು ಹಾಗೂ ಕಾರಣಗಳು ನಂಬಲು ಸಾಧ್ಯವಿಲ್ಲದ್ದು ಮತ್ತು ಸತ್ಯಕ್ಕೆ ದೂರವಾದವು. ಈ ಪ್ರಕರಣದ ತನಿಖೆ ಕೆಳಹಂತದ ಅಧಿಕಾರಿಗಳಿಂದ ನಡೆದರೆ ಸತ್ಯ ಹೊರಬರಲು ಸಾಧ್ಯವಿಲ್ಲ. ಆದ್ದರಿಂದ ನಿಷ್ಪಕ್ಷಪಾತ ಹಾಗೂ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕು. ಮೃತರ ಕುಟುಂಬಸ್ಥರು ನ್ಯಾಯಕ್ಕಾಗಿ ಪ್ರತಿಭಟನೆ ನಡೆಸುತ್ತಿದ್ದು, ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಅವರಿಗೆ ನ್ಯಾಯ ಒದಗಿಸಬೇಕು. ​ಘಟನೆಯ ಹಿಂದಿನ ನೈಜ ಸತ್ಯಾಂಶಗಳನ್ನು ಹೊರತಂದು ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಸಂಬಂಧಪಟ್ಟ ಅಧಿಕಾರಿಗಳ ಸಸ್ಪೆಂಡ್: ಘಟನೆಯಲ್ಲಿ ಭಾಗಿಯಾದ ಹಾಗೂ ನಿರ್ಲಕ್ಷ್ಯ ವಹಿಸಿದ ಎಲ್ಲಾ ಅರಣ್ಯ ಅಧಿಕಾರಿಗಳು ಮತ್ತು ಸಿಬ್ಬಂದಿಯನ್ನು ಸರ್ಕಾರ ತಕ್ಷಣವೇ ಅಮಾನತು ಮಾಡಬೇಕು. ಬೇರೆ ಬೇರೆ ಪ್ರಕರಣಗಳಿಗೆ ಸರ್ಕಾರ ಎಸ್‌ಐಟಿ ರಚನೆ ಮಾಡುವಂತೆ, ಈ ಘಟನೆಗೂ ನ್ಯಾಯಾಲಯದ ನೇರ ಮೇಲ್ವಿಚಾರಣೆಯಲ್ಲಿ ಸ್ವತಂತ್ರ ಎಸ್‌ಐಟಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.

​ಘಟನೆಯ ಹಿಂದಿನ ಸತ್ಯಾಂಶ ಹೊರಬರದಿದ್ದರೆ ಇದು ಯೋಜಿತ ಹತ್ಯೆ ಎಂದು ಬಿಂಬಿತವಾಗುತ್ತದೆ. ಆದ್ದರಿಂದ ನಿಷ್ಪಕ್ಷಪಾತ ತನಿಖೆಯೊಂದೇ ಸತ್ಯವನ್ನು ಹೊರ ಬರಲು ಸಾಧ್ಯ. ​ಸರ್ಕಾರ ತಕ್ಷಣವೇ ಹೆಚ್ಚೆತ್ತುಕೊಂಡು ಸಂತ್ರಸ್ತರಿಗೆ ನ್ಯಾಯ ಒದಗಿಸಬೇಕು ಮತ್ತು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಬಸವರಾಜ ಬೊಮ್ಮಾಯಿ ಒತ್ತಾಯಿಸಿದರು.

​ನೈಸ್ ಯೋಜನೆ ಸಮಗ್ರ ತನಿಖೆಗೆಯಾಗಲಿ :

ನೈಸ್ ಯೋಜನೆ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೈಸ್ ಯೋಜನೆಯಲ್ಲಿ ಹಲವು ನ್ಯೂನತೆಗಳಿದ್ದು, ಈ ಕುರಿತು ಸರ್ಕಾರ ಸಮಗ್ರ ತನಿಖೆ ನಡೆಸಿ ಸೂಕ್ತ ತೀರ್ಮಾನ ಕೈಗೊಳ್ಳಬೇಕು. "ನೈಸ್ ಯೋಜನೆಯಡಿ ನಿರ್ಮಿಸಲಾಗಿರುವ ರಸ್ತೆಯಿಂದ ಬೆಂಗಳೂರಿಗೆ ಒಂದಿಷ್ಟು ಅನುಕೂಲವಾಗಿರುವುದನ್ನು ಹೊರತುಪಡಿಸಿದರೆ, ಸಾರ್ವಜನಿಕರಿಂದ ಅತಿಯಾದ ಟೋಲ್ ವಸೂಲಿ ಮಾಡಲಾಗುತ್ತಿದೆ ಎಂಬ ದೂರುಗಳು ಮೊದಲಿನಿಂದಲೂ ಇವೆ" ಎಂದು ಹೇಳಿದರು.

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News