ಬರ ವಿಚಾರ | ಹೊಸದಿಲ್ಲಿಯಲ್ಲಿ ಸರ್ವಪಕ್ಷ ಸಭೆ : ಸಿಎಂ ಡಿ.ಕೆ.ಶಿವಕುಮಾರ್
ಬೆಂಗಳೂರು : ಬರ ಪರಿಹಾರ ಸೇರಿದಂತೆ ಇನ್ನಿತರೆ ವಿಚಾರವಾಗಿ ಹೊಸದಿಲ್ಲಿಯಲ್ಲಿ ವಿರೋಧ ಪಕ್ಷಗಳ ಜತೆಗೂಡಿ ಸರ್ವಪಕ್ಷ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಳ್ಳತನ ಕುರಿತು ಚರ್ಚೆ ಮಾಡಲು ಹೊಸದಿಲ್ಲಿಗೆ ತೆರಳುತ್ತಿದ್ದೇನೆ. ಅಲ್ಲಿ ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಜತೆ ಸಭೆ ನಡೆಸಲಿದ್ದೇನೆ. ಆನಂತರ, ಬರ ಪರಿಹಾರ ಸೇರಿದಂತೆ ಇನ್ನಿತರೆ ವಿಚಾರವಾಗಿ ಹೊಸದಿಲ್ಲಿಯಲ್ಲಿ ವಿರೋಧ ಪಕ್ಷಗಳ ಜತೆಗೂಡಿ ಸರ್ವಪಕ್ಷ ನಡೆಸಲಾಗುವುದು ಎಂದರು.
ನಿಗಮ ಮಂಡಳಿ ನೇಮಕಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಹೊಸದಿಲ್ಲಿಯಲ್ಲಿ ಈಗಾಗಲೇ ತೀರ್ಮಾನ ಆಗಿದೆ. ಹಿರಿಯ ಶಾಸಕರಿಗೆ ಸ್ಥಾನ ಕೊಡಲಾಗುತ್ತದೆ. ಇದು ಆದ ಮೇಲೆ ಕಾರ್ಯಕರ್ತರಿಗೆ ಕೂಡಲೇ ಸ್ಥಾನ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದರು.
ಗದಗ ಕೆಆರ್‍ಐಡಿಎಲ್ ಎಇಇ ಪತ್ರ ಬರೆದು ನಾಪತ್ತೆಯಾದ ವಿಚಾರವಾಗಿ ಮಾತನಾಡಿ, ಆ ಎಇಇ ಹಿಂದೆ ಕೂಡ ನಾಪತ್ತೆಯಾಗಿದ್ದ. ಶಾಸಕರು ಆತನ ಕೆಲಸ ಚರ್ಚೆ ಆಗಬೇಕು ಎಂದಿದ್ದರು. ಕಾನೂನು ಪ್ರಕಾರ ಕೆಲಸ ಮಾಡುತ್ತಿಲ್ಲ ಎನ್ನುವ ಆರೋಪ ಇದೆ. ಆತ ಹೈದರಾಬಾದ್‍ನಲ್ಲಿರುವುದು ಪತ್ತೆ ಆಗಿದ್ದು, ಎಲ್ಲೇ ಇದ್ದರೂ ತರಿಸುತ್ತೇವೆ ಎಂದು ಹೇಳಿದರು.
ಸರ್ವಪಕ್ಷ ನಿಯೋಗ ಬೇಡ: ಎಚ್‍ಡಿಕೆ
‘ಬರದ ವಿಚಾರಕ್ಕಾಗಿ ಸರ್ವಪಕ್ಷ ನಿಯೋಗವನ್ನು ಹೊಸದಿಲ್ಲಿಗೆ ಕರೆದುಕೊಂಡು ಹೋಗಿ ಏನು ಮಾಡುತ್ತೀರಿ? ಅದು ಮತ್ತೊಂದು ಖರ್ಚು. ವಿಮಾನ, ಫೈವ್ ಸ್ಟಾರ್ ಹೋಟೆಲ್ ವಾಸ್ತವ್ಯ ಎಲ್ಲವೂ ಅನಗತ್ಯ ಖರ್ಚು. ನೀವೇ ಯಾರಾದರೂ ಹೋಗಿ ಮಾತನಾಡಿಕೊಂಡು ಬರಲು ಆಗುವುದಿಲ್ಲವೇ? ರಾಜ್ಯದ ಖಜಾನೆ ಖಾಲಿಯಾಗಿದೆ ಎಂದು ನಾನು ಹೇಳುವುದಿಲ್ಲ, ಖಾಲಿ ಮಾಡಿಕೊಂಡು ಕುಳಿತಿರುವವರು ನೀವು’ ಎಂದು ರಾಜ್ಯ ಸರಕಾರದ ವಿರುದ್ಧ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.