‘ನೇಗಿಲ ಯೋಗಿ ಯೋಜನೆ' ಅನುಷ್ಠಾನಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಸೂಚನೆ
ಬೆಂಗಳೂರು : ಸಣ್ಣ ಮತ್ತು ಅತಿಸಣ್ಣ ರೈತರ ನೆರವಿಗೆ ಧಾವಿಸಲು ರಾಜ್ಯ ಸರಕಾರ ಆರಂಭಿಸಿರುವ ಮಹತ್ವಾಕಾಂಕ್ಷೆಯ ‘ಮುಖ್ಯಮಂತ್ರಿ ನೇಗಿಲ ಯೋಗಿ' ಯೋಜನೆಯನ್ನು ಅಕ್ಟೋಬರ್ ಅಂತ್ಯದೊಳಗೆ ಅನುಷ್ಠಾನಗೊಳಿಸಬೇಕು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಸೋಮವಾರ ಇಲ್ಲಿನ ಸಿಎಂ ಗೃಹ ಕಚೇರಿ ಕೃಷ್ಣಾ ದಲ್ಲಿ ನಡೆದ ಸಿಎಂ 100 ದಿನಗಳ ಕಾರ್ಯ, ನೇಮಕಾತಿಗಳು ಹಾಗೂ ಆದ್ಯತೆ ಯೋಜನೆಗಳ ಪರಿಶೀಲನೆ ಸಭೆ'ಯಲ್ಲಿ ಕೃಷಿ ಇಲಾಖೆಯ ಪ್ರಗತಿ ಪರಿಶೀಲಿಸಿದ ಅವರು, ಸಿಎಂ ನೇಗಿಲ ಯೋಗಿ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯ ಒಂದು ತಾಲೂಕಿನಲ್ಲಿ ಅನುಷ್ಠಾನಗೊಳಿಸಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿತ್ತು. ಆದರೆ, ಈಗ ಯೋಜನೆಯನ್ನು ಎರಡು ತಾಲೂಕುಗಳಿಗೆ ವಿಸ್ತರಿಸಿ, ಇದೇ ತಿಂಗಳಾಂತ್ಯಕ್ಕೆ ಯೋಜನೆ ಅನುಷ್ಠಾನಗೊಳಿಸಬೇಕು ಎಂದು ಸಿಎಂ ಸೂಚನೆ ನೀಡಿದರು.
ಆ್ಯಪ್ ಅಭಿವೃದ್ಧಿ: ಪ್ರಸ್ತುತ, 11 ಜಿಲ್ಲಾ ಉಸ್ತುವಾರಿ ಸಚಿವರಿಂದ ಮಾಹಿತಿ ಬಂದಿದೆ. ಇನ್ನೊಂದು ವಾರದಲ್ಲಿ ಎಲ್ಲ ಜಿಲ್ಲೆಗಳ ಮಾಹಿತಿ ತಲುಪಿಸಬೇಕು. ಪ್ರಸ್ತುತ, ರೈತರ ಬಳಿ ಲಭ್ಯವಿರುವ ಟ್ರ್ಯಾಕ್ಟರ್ ಹಾಗೂ ಇತರೆ ಯಂತ್ರೋಪಕರಣಗಳ ಮಾಹಿತಿ ಪಡೆಯಲು ಪ್ರತ್ಯೇಕ ಆ್ಯಪ್ ಅಭಿವೃದ್ಧಿಪಡಿಸಲು ಸೂಚಿಸಲಾಗಿದೆ.
ಸರಕಾರಿ ಏಜೆನ್ಸಿಯಿಂದಲೇ ಆ್ಯಪ್ ತಯಾರಿಸಿ, ಅದಕ್ಕೆ ಕೃಷಿ ಹಾಗೂ ತೋಟಗಾರಿಕಾ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಫ್ರೂಟ್ ಐಡಿಯನ್ನು ಸಂಯೋಜಿಸಲಾಗುವುದು. ಆಗ ರೈತರು ತಾವಿರುವಲ್ಲೇ ಆ್ಯಪ್ ಮೂಲಕ ಟ್ರ್ಯಾಕ್ಟರ್ ಬುಕ್ಕಿಂಗ್ ಮಾಡಿಕೊಳ್ಳಬಹುದಾಗಿದೆ. ಟ್ರ್ಯಾಕ್ಟರ್ ವೆಚ್ಚದ ಶೇ.50ರಷ್ಟು ಹಣವನ್ನು ಸರಕಾರ ಪಾವತಿಸುವುದರಿಂದ ಸಣ್ಣ ರೈತರಿಗೆ ಅನುಕೂಲವಾಗಲಿದೆ. ಹಾಗಾಗಿ ಅಕ್ಟೋಬರ್ ತಿಂಗಳೊಳಗೆ ಸಿಎಂ ನೇಗಿಲ ಯೋಗಿ ಯೋಜನೆಯನ್ನು ಅನುಷ್ಠಾನ ಮಾಡಬೇಕು ಎಂದು ಸಿಎಂ ಸೂಚನೆ ನೀಡಿದರು.
ಏನಿದು ಯೋಜನೆ?: ಮೂರು ಎಕರೆ ಹಾಗೂ ಅದಕ್ಕಿಂತ ಕಡಿಮೆ ಭೂಮಿ ಹೊಂದಿರುವ ಬಡ ಮತ್ತು ಸಣ್ಣ ರೈತರ ಜಮೀನುಗಳ ಉಳುಮೆಗೆ ನೆರವಾಗುವ ಸಲುವಾಗಿ ರಾಜ್ಯ ಸರಕಾರ ಓಲಾ, ಉಬರ್ ಮಾದರಿಯಲ್ಲಿ ‘ಸಿಎಂ ನೇಗಿಲ ಯೋಗಿ' ಅನುಷ್ಠಾನಗೊಳಿಸಲು ಮುಂದಾಗಿದೆ. ಸರಕಾರ ಅಭಿವೃದ್ಧಿಪಡಿಸುವ ಆ್ಯಪ್ ಮೂಲಕವೇ ಅಗತ್ಯವಿರುವ ರೈತರು ಉಳುಮೆಗೆ ಟ್ರ್ಯಾಕ್ಟರ್ ಬುಕ್ಕಿಂಗ್ ಮಾಡಬಹುದಾಗಿದೆ. ಈ ರೀತಿ ಬುಕ್ಕಿಂಗ್ ಮಾಡಲಾದ ಟ್ರ್ಯಾಕ್ಟರ್‍ಗೆ ಶೇ.50ರಷ್ಟು ಬಾಡಿಗೆ ಹಣವನ್ನು ರೈತರು ಪಾವರಿಸಿದರೆ, ಉಳಿದ ಶೇ.50ರಷ್ಟು ಹಣವನ್ನು ಸರಕಾರ ಟ್ರ್ಯಾಕ್ಟರ್ ಮಾಲಕರಿಗೆ ಪಾವತಿಸಲಿದೆ.
ಈ ಯೋಜನೆಯಿಂದ ರಾಜ್ಯದ ಸುಮಾರು 59ಲಕ್ಷ ಸಣ್ಣ ಮತ್ತು ಅತಿಸಣ್ಣ ರೈತರಿಗೆ ಅನುಕೂಲವಾಗಲಿದೆ. ಪ್ರಸ್ತುತ, ಈ ಯೋಜನೆಯನ್ನು ಪ್ರಾಯೋಗಿಕವಾಗಿ ಪ್ರತಿ ಜಿಲ್ಲೆಯ ಎರಡೆರಡು ತಾಲೂಕುಗಳಲ್ಲಿ ಅನುಷ್ಠಾನಗೊಳಿಸಲು ರಾಜ್ಯ ಸರಕಾರ ನಿರ್ಧರಿಸಿದೆ. ಆರ್ಥಿಕ ಮುಗ್ಗಟ್ಟಿನ ಹಿನ್ನೆಲೆಯಲ್ಲಿ ಕೃಷಿಯಿಂದ ವಿಮುಖರಾಗುತ್ತಿರುವ ಸಣ್ಣ ರೈತರಿಗೆ ಕೃಷಿ ವೆಚ್ಚ ತಗ್ಗಿಸಲು ಹಾಗೂ ಭೂಮಿಯನ್ನು ಹದಗೊಳಿಸಲು ನೆರವಾಗುವುದು ಈ ಯೋಜನೆಯ ಮುಖ್ಯ ಗುರಿಯಾಗಿದೆ.