ಹೊಸದಿಲ್ಲಿ: “ಮುಖ್ಯಮಂತ್ರಿ ಆದ ಬಳಿಕ ನನ್ನ ಹಾಗೂ ಇತರೆ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ಪ್ರಯತ್ನ ನಡೆದಿದ್ದು, ಇದರ ಪಿತಾಮಹ ಯಾರು? ಇದಕ್ಕೆ ಹಣಕಾಸಿನ ನೆರವು ಯಾರು ನೀಡುತ್ತಿದ್ದಾರೆ ಹಾಗೂ ಹೇಗೆ ಕಾರ್ಯಾಚರಣೆ ನಡೆಸುತ್ತಿದ್ದಾರೆ ಎಂಬುದು ನನಗೆ ತಿಳಿದಿದೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದ್ದಾರೆ.

ಹೊಸದಿಲ್ಲಿಯ ಕರ್ನಾಟಕ ಭವನದ ಬಳಿ ಮಾಧ್ಯಮಗಳ ಪ್ರಶ್ನೆಗಳಿಗೆ ಶಿವಕುಮಾರ್ ಅವರು ಗುರುವಾರ ಪ್ರತಿಕ್ರಿಯೆ ನೀಡಿದರು.

ಸಚಿವರ ಮೇಲೆ ಗುಪ್ತ ಕಾರ್ಯಾಚರಣೆ ಮಾಡುತ್ತಿರುವ ಬಗ್ಗೆ ನೀಡಿರುವ ಎಚ್ಚರಿಕೆ ಬಗ್ಗೆ ಕೇಳಿದಾಗ, “ಮಾರುವೇಷದ ಕಾರ್ಯಾಚರಣೆಗಳನ್ನು ನನ್ನ ಮೇಲಿಂದಲೇ ಶುರು ಮಾಡಲು ಪ್ರಯತ್ನ ಮಾಡಿದ್ದಾರೆ. ನನ್ನ ಬಳಿ ಈ ಬಗ್ಗೆ ಎಲ್ಲ ಸಾಕ್ಷ್ಯಗಳೂ ಇವೆ. ನಾನು ಜವಾಬ್ದಾರಿ ಸ್ಥಾನದಲ್ಲಿದ್ದೇನೆ. ನಾನು ಏನೇ ಮಾತನಾಡಬೇಕಾದರೂ ಸುಮ್ಮನೆ ಮಾತನಾಡುವುದಿಲ್ಲ” ಎಂದರು.

ಈ ಕಾರ್ಯಾಚರಣೆ ಸಿಎಂ ಆಗುವ ಮುನ್ನವೇ ಅಥವಾ ಸಿಎಂ ಆದ ಬಳಿಕ ನಡೆದಿದೆಯೇ ಎಂದು ಕೇಳಿದಾಗ, “ಮುಖ್ಯಮಂತ್ರಿಯಾದ ಬಳಿಕ ನಡೆದಿರುವ ಪ್ರಯತ್ನಗಳ ಬಗ್ಗೆ ಹೇಳುತ್ತಿದ್ದೇನೆ. ನನ್ನನ್ನು ಸೇರಿಸಿ ಬೇರೆ ಯಾವ, ಯಾವ ನಾಯಕರ ವಿರುದ್ಧ ಕಾರ್ಯಾಚರಣೆ ಮಾಡಲು ಪ್ರಯತ್ನಿಸುತ್ತಿದ್ದಾರೆ ಎಂಬುದೂ ತಿಳಿದಿದೆ. ಆದರೆ, ಈ ಎಲ್ಲ ವಿಚಾರಗಳನ್ನು ಈಗ ಬಹಿರಂಗವಾಗಿ ಮಾತನಾಡುವ ಅಗತ್ಯವಿಲ್ಲ” ಎಂದು ತಿಳಿಸಿದರು.

ತಮ್ಮ ವಿರುದ್ಧದ ಪ್ರಯತ್ನಗಳ ಹಿಂದೆ ಕರ್ನಾಟಕದವರೇ ಇದ್ದಾರೆಯೇ ಅಥವಾ ಬೇರೆ ರಾಜ್ಯದವರೂ ಇದ್ದಾರೆಯೇ ಎಂಬ ಬಗ್ಗೆ ಕೇಳಲಾಗಿ, “ನಾನು ನಿಮ್ಮ ಬಳಿ ಎಲ್ಲವನ್ನೂ ಬಹಿರಂಗಪಡಿಸಲು ಹೋಗುವುದಿಲ್ಲ. ಕಾಲ ಬಂದಾಗ ಉತ್ತರ ಕೊಡುತ್ತೇನೆ” ಎಂದು ಹೇಳಿದರು.

ಅಧಿಕಾರಿಗಳು, ಸಚಿವರಿಗೆ ಎಚ್ಚರಿಕೆಯಿಂದಿರಲು ಸೂಚನೆ

ಸಚಿವರನ್ನು ಸಿಕ್ಕಿ ಹಾಕಿಸಲು ಏಜೆಂಟರನ್ನು ನೇಮಕ ಮಾಡಿಕೊಂಡಿರುವ ಬಗ್ಗೆ ಬಹಳ ಚರ್ಚೆಯಾಗುತ್ತಿದೆ ಎಂದು ಕೇಳಿದಾಗ, “ಕೆಲವರು ನನ್ನ ಬಳಿ ಬಂದಿದ್ದರು, ನಾನು ಫೋಟೋಗಳನ್ನು ಬಿಡುಗಡೆ ಮಾಡಲು ಸಿದ್ಧ. ಸದ್ಯಕ್ಕೆ ಅದರ ಅವಶ್ಯಕತೆ ಇಲ್ಲ. ಯಾರು ಏನೇನು ಮಾಡುತ್ತಿದ್ದಾರೆ ಎಂಬುದು ನನಗೆ ಗೊತ್ತು. ಕುಂಬಳಕಾಯಿ ಕಳ್ಳ ಎಂದರೆ ಹೆಗಲು ಮುಟ್ಟಿ ನೋಡಿಕೊಳ್ಳುತ್ತಿದ್ದಾರೆ. ನನ್ನ ಬಳಿ ಯಾರು ಬಂದಿದ್ದರೋ ಅವರ ಮೇಲೆ ಅನುಮಾನ ಬಂದು ಪೊಲೀಸರಿಗೆ ತಿಳಿಸಿ, ದಾಖಲೆಗಳನ್ನು ಸಿದ್ಧಪಡಿಸಿ ಇಟ್ಟುಕೊಂಡಿದ್ದೇನೆ. ಅದನ್ನು ಈಗಲೇ ಬಹಿರಂಗ ಮಾಡಲು ಸಾಧ್ಯವಿಲ್ಲ. ಇದಕ್ಕೆ ಪಿತಾಮಹರು ಯಾರು ಎಂದು ತಿಳಿದಿದೆ. ಅದಕ್ಕೆಲ್ಲಾ ಉತ್ತರಿಸಲು ಹೋಗುವುದಿಲ್ಲ. ಅಧಿಕಾರಿಗಳನ್ನು ಸುಮ್ಮನೆ ಸಿಕ್ಕಿಹಾಕಿಸಲು ಪ್ರಯತ್ನ ಮಾಡುತ್ತಿದ್ದು, ಅವರು ಹುಷಾರಾಗಿರಬೇಕು ಎಂದು ಎಚ್ಚರಿಕೆ ನೀಡಿದೆ. ಹಿಂದೆ ಮಾಧ್ಯಮದಿಂದ ಸ್ಟಿಂಗ್ ಆಪರೇಷನ್ ಮಾಡಲು ಬಂದಿದ್ದರು. ಹಾಗಾಗಿ ಈಗಲೇ ಎಚ್ಚರಿಕೆ ನೀಡಲಾಗಿದೆ. ಕೆಲವು ನಾಯಕರು ಈ ಕಾರ್ಯಾಚರಣೆಗೆ ಖಾಸಗಿ ಏಜೆಂಟರನ್ನು ನೇಮಕ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಪಕ್ಕಾ ಮಾಹಿತಿ ಇದೆ” ಎಂದರು.

ಭಾರತೀಯರ ಮತಗಳನ್ನು ರಕ್ಷಣೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ

ಎಸ್ ಐ ಆರ್ ಬಗ್ಗೆ ಕಳೆದ ಎರಡು ದಿನಗಳಿಂದ ಹೋರಾಟ ನಡೆದಿರುವ ಬಗ್ಗೆ ಕೇಳಿದಾಗ, “ಬಾಂಗ್ಲಾದೇಶ ಹಾಗೂ ಬೇರೆಡೆಗಳಿಂದ ಬಂದು ಜನರು ಇಲ್ಲಿದ್ದಾರೆ ಎಂದು ಬಿಜೆಪಿಯವರು ಹೇಳುತ್ತಾರೆ. ಹಾಗಿದ್ದರೆ ದೇಶದ ಗಡಿಯಲ್ಲಿ ಬಾಂಗ್ಲಾದೇಶದಿಂದ ನುಸುಳಿಕೋರರನ್ನು ತಡೆಗಟ್ಟುವುದು ಕೇಂದ್ರ ಸರ್ಕಾರದ ಕರ್ತವ್ಯವಲ್ಲವೇ? ಬಿಜೆಪಿಯ ಸಂಸದರೂ ಹಾಗೂ ಶಾಸಕರು, ನಾವು ಬಾಂಗ್ಲಾದೇಶದವರನ್ನು ಮತಪಟ್ಟಿಯಿಂದ ತೆಗೆಯಲು ಅರ್ಜಿ ಸಲ್ಲಿಸಿದ್ದೇವೆ ಎಂದಿದ್ದಾರೆ. ಭಾರತೀಯರ ಮತಗಳ ರಕ್ಷಣೆ ಮಾಡುವುದು ಕೇಂದ್ರ ಸರ್ಕಾರದ ಕರ್ತವ್ಯ. ನಮ್ಮಲ್ಲಿ ಅಕ್ರಮ ಬಾಂಗ್ಲಾ ವಲಸಿಗರು ಇದ್ದರೆ ಅವರ ಮತದಾನದ ಹಕ್ಕು ಕಸಿಯುವುದು ಮಾತ್ರವಲ್ಲ, ಅವರನ್ನೇ ದೇಶದಿಂದ ಹೊರಗೆ ಹಾಕಲಿ. ಆ ಕೆಲಸ ಯಾಕೆ ಮಾಡುತ್ತಿಲ್ಲ?” ಎಂದು ಪ್ರಶ್ನಿಸಿದರು.

ಕೇಂದ್ರದಲ್ಲಿ ಪ್ರತಿಪಕ್ಷಗಳ ಹೋರಾಟದ ಬಗ್ಗೆ ಪೊಲೀಸರ ಕ್ರಮದ ಬಗ್ಗೆ ಕೇಳಿದಾಗ, “ಹೋರಾಟಗಾರರ ವಿರುದ್ಧ ಪೊಲೀಸರೂ ಅಮಾನವೀಯವಾಗಿ ನಡೆದುಕೊಳ್ಳುತ್ತಿದ್ದಾರೆ. ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿಯವರು ದೇಶದ ಪ್ರಜಾಪ್ರಭುತ್ವ ಹಾಗೂ ಜನರ ರಕ್ಷಣೆಗಾಗಿ ಹೋರಾಡುತ್ತಿದ್ದಾರೆ” ಎಂದರು.

ಅರ್ಹ ಮತಗಳನ್ನು ಅಳಿಸಿಹಾಕದಂತೆ ಚುನಾವಣಾ ಆಯೋಗದ ಸ್ಪಷ್ಟ ಸೂಚನೆ

“ರಾಜ್ಯದಲ್ಲಿ ಬಿಜೆಪಿಯವರು ತಮ್ಮ ಬಡ ಬಿಜೆಪಿ ಕಾರ್ಯಕರ್ತರ ಹೆಸರಿನಲ್ಲಿ ಪೂರ್ವಮುದ್ರಿತ ಫಾರಂ 7 ಗಳನ್ನು ನೀಡುತ್ತಿದ್ದಾರೆ. ವಿಶೇಷವಾಗಿ ಅಲ್ಪಸಂಖ್ಯಾತ ಮತದಾರರ ಪೂರ್ವ ಮುದ್ರಿತ ಅರ್ಜಿಗಳನ್ನು ಲಕ್ಷಾಂತರ ಸಂಖ್ಯೆಯಲ್ಲಿ ಸಲ್ಲಿಸಲಾಗುತ್ತಿದೆ. ಕೆಲವು ಬಿಜೆಪಿ ಕಾರ್ಯಕರ್ತರು ತಪ್ಪೊಪ್ಪಿಗೆ ಮಾಡಿಕೊಂಡು ಅರ್ಜಿಗಳನ್ನು ವಾಪಸ್ಸು ಪಡೆದಿದ್ದಾರೆ. ಕೇಂದ್ರ ಸರ್ಕಾರದವರು ಈ ಮತಗಳ್ಳತನವನ್ನು ಒಂದು ದೊಡ್ಡ ಕ್ರಿಮಿನಲ್ ಸಂಚು ಎಂದು ಏಕೆ ಪರಿಗಣಿಸಲಿಲ್ಲ? ರಾಜ್ಯದಲ್ಲಿ ನಮ್ಮ ಹೋರಾಟದ ನಂತರ ಚುನಾವಣಾ ಆಯೋಗವೂ, ಸೂಕ್ತ ಪರಿಶೀಲನೆಯಿಲ್ಲದೇ ಯಾವುದೇ ಅರ್ಹ ಮತವನ್ನು ತೆಗೆದುಹಾಕಬಾರದೆಂದು ಸ್ಪಷ್ಟ ಸೂಚನೆ ನೀಡಿದೆ. ನಾವು ಆ ಹೋರಾಟ ಮಾಡದೇ ಇದ್ದಿದ್ದರೆ, ಬಡ ಹಳ್ಳಿಗರು, ಅನಕ್ಷರಸ್ಥರ ಮತಗಳನ್ನು ಡಿಲೀಟ್ ಮಾಡಲಾಗುತ್ತಿತ್ತು. ಈಗ ಚುನಾವಣಾ ಆಯೋಗವು, ದೇಶಾದ್ಯಂತ ಯಾವುದೇ ವಸತಿಯಿಲ್ಲದವರು, ಶೋಷಿತರು ಮತದಾನದ ಹಕ್ಕಿನಿಂದ ವಂಚಿತರಾಗದಂತೆ ಒಂದು ತಿಂಗಳ ಕಾಲ ಅಭಿಯಾನದ ರೀತಿಯಲ್ಲಿ ಮತಗಳ ರಕ್ಷಣೆ ಮಾಡಬೇಕೆಂದು ತಿಳಿಸಿದೆ” ಎಂದರು.

ಮುಖ್ಯಮಂತ್ರಿಯಾಗಿ ರಾಜ್ಯದ ಪ್ರತಿಯೊಬ್ಬರ ಮತರಕ್ಷಣೆ ನನ್ನ ಕರ್ತವ್ಯ

“ಮತಗಳನ್ನು ರಕ್ಷಿಸುವ ಕಾರ್ಯವು ಬೆಂಗಳೂರಿನಿಂದ ಪ್ರಾರಂಭವಾಗಿದ್ದು, ಬಿಜೆಪಿ ನಾಯಕರಿಗೆ ನಾಚಿಕೆಯಾಗಬೇಕು. ರಾಜ್ಯದ ಪ್ರತಿ ನಾಗರಿಕನ ಮತದ ಹಕ್ಕನ್ನು ರಕ್ಷಿಸುವುದು ಮುಖ್ಯಮಂತ್ರಿಯಾಗಿ ನನ್ನ ಕರ್ತವ್ಯವಲ್ಲವೇ? ಬಿಜೆಪಿಯವರು ಮತಗಳ್ಳತನ ಮಾಡಲು ಇಂತಹ ಹಂತಕ್ಕೆ ತಲುಪುವರೆಂಬ ಕಲ್ಪನೆ ನಮಗಿರಲಿಲ್ಲ. ಚುನಾವಣೆ ಗೆಲ್ಲಲು ಮೊದಲು ರಾಜ್ಯದ ಹಾಗೂ ದೇಶದ ಜನರ ಮನಸ್ಸನ್ನು ಗೆಲ್ಲಬೇಕು. ಆದರೆ ಬಿಜೆಪಿಯವರು ಚುನಾವಣಾ ಆಯೋಗದ ವ್ಯವಸ್ಥೆಯನ್ನೇ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ” ಎಂದರು.

ಜಿ ಎಸ್ ಟಿ ಮಂಡಳಿ ಸಭೆ: ರಾಜ್ಯದ ಹಿತದೃಷ್ಟಿಯಿಂದ ಪ್ರಸ್ತಾವನೆ ಸಲ್ಲಿಕೆ

“ಕಳೆದ ಮೂರು ದಿನಗಳಿಂದ ಜಿ ಎಸ್ ಟಿ ಮಂಡಳಿ ಸಭೆ ನಡೆಯುತ್ತಿತ್ತು. ಇಂದಿನ ಸಭೆಯಲ್ಲಿ ಪ್ರಮುಖ ವಿಚಾರಗಳ ಬಗ್ಗೆ ಚರ್ಚೆ ಮಾಡಲು ಹಲವು ರಾಜ್ಯಗಳ ಮುಖ್ಯಮಂತ್ರಿಗಳು ಆಗಮಿಸುತ್ತಿದ್ದಾರೆ. ಇಂದು ನಾನು ಹಾಗೂ ಸಚಿವ ಕೃಷ್ಣ ಬೈರೇಗೌಡರು ಸಭೆಯಲ್ಲಿ ಭಾಗವಹಿಸುತ್ತಿದ್ದೇವೆ. ಬೆಂಗಳೂರಿನಲ್ಲಿಯೂ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿತ್ತು. ನಿನ್ನೆಯೂ ಸಭೆ ನಡೆಸಿ ನಮ್ಮ ನಿಲುವೇನು ಎಂದು ತಿಳಿಸಿದ್ದು, ತೆಲಂಗಾಣ ಸೇರಿದಂತೆ ಇತರೆ ರಾಜ್ಯಗಳ ಅಭಿಪ್ರಾಯ ತಿಳಿಸಲಾಗಿದೆ. ಅಧಿಕಾರಿಗಳು ಕೂಡ ಪ್ರಮುಖ ವಿಚಾರಗಳನ್ನು ತಿಳಿಸಿದ್ದು, ರಾಜ್ಯದ ಹಿತದೃಷ್ಟಿಯಿಂದ ಪ್ರಸ್ತಾವನೆ ಮಾಡಲಿದ್ದೇನೆ” ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor