PC : PTI

ಬೆಂಗಳೂರು : ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯಿಂದ ಉಂಟಾಗಿರುವ ಅನ್ಯಾಯ ಮತ್ತು ಮತದಾರರ ಹಕ್ಕುಗಳ ಮೇಲಿನ ಪರಿಣಾಮಗಳ ವಿರುದ್ಧ ಎಸ್‍ಐಆರ್ ವಿರೋಧಿ ಒಕ್ಕೂಟ ಹಾಗೂ ವಿವಿಧ ನಾಗರಿಕ ಹಕ್ಕುಗಳ ಸಂಘಟನೆಗಳ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಇಂದು (ಅ.8) ಜನತಾ ನ್ಯಾಯಾಲಯ ಹಾಗೂ ಬೃಹತ್ ಪ್ರತಿಭಟನೆ ನಡೆಯುತ್ತಿದೆ.

SIRನಿಂದ ತೊಂದರೆಗೊಳಗಾದವರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ‘ಜನತಾ ನ್ಯಾಯಾಲಯ’ ರೂಪದಲ್ಲಿ ಪ್ರತಿಭಟನೆ ಆಯೋಜಿಸಲಾಗಿದ್ದು, SIR ಪ್ರಕ್ರಿಯೆ ರದ್ದುಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಖ್ಯಾತ ಯೂಟ್ಯೂಬರ್‌ ಧ್ರುವ ರಾಠಿ ಮಾತನಾಡಿ, ʼವೋಟ್ ಚೋರಿ ಆಗುತ್ತಿದೆ ಎನ್ನುವುದಕ್ಕೆ ನಾನು ಮೂರು ಸಾಕ್ಷಿಗಳನ್ನು ನೀಡುತ್ತೇನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಉತ್ತರಿಸಬೇಕು. ವೋಟ್ ಚೋರಿಗೆ ಸಾಕ್ಷಿಯಾಗಿ ಪಶ್ಚಿಮ ಬಂಗಾಳದಲ್ಲಿ ಸುಮಾರು 70 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಅವರು ಮೊದಲು ಮತದಾರರ ಪಟ್ಟಿಯಲ್ಲಿದ್ದರೂ ಚುನಾವಣಾ ಸಂದರ್ಭದಲ್ಲಿ ಪಟ್ಟಿಯಲ್ಲಿ ಇರಲಿಲ್ಲ, ಚುನಾವಣೆಯ ಬಳಿಕ ಮತ್ತೆ ಪಟ್ಟಿಯಲ್ಲಿ ಕಾಣಿಸಿಕೊಂಡರು ಎಂದು ಅವರು ಹೇಳಿದರು.

ಬಿಹಾರದಲ್ಲಿ 75 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಈ ಕುರಿತು ಜ್ಞಾನೇಶ್ ಕುಮಾರ್ ಅವರು ಸುಪ್ರೀಂ ಕೋರ್ಟ್ ಕೇಳುವವರೆಗೆ ವಿವರ ನೀಡಿರಲಿಲ್ಲ. ಸುಮಾರು 14 ಲಕ್ಷ ಜನರ ಹೆಸರುಗಳನ್ನು ಸೇರಿಸಲಾಗಿದ್ದು, ಯಾರ ಹೆಸರುಗಳನ್ನು ತೆಗೆದುಹಾಕಲಾಗಿದೆ ಮತ್ತು ಯಾರನ್ನು ಸೇರಿಸಲಾಗಿದೆ ಎಂಬುದರ ಬಗ್ಗೆ ಸ್ಪಷ್ಟ ಮಾಹಿತಿ ನೀಡಲಾಗಿಲ್ಲ ಎಂದು ಹೇಳಿದರು. ಗೋವಾದಲ್ಲಿಯೂ 100 ಜನರ ಹೆಸರುಗಳನ್ನು ಸೇರಿಸಲು ಎಆರ್‌ಒಗೆ ಸಾಧ್ಯವಾಗಲಿಲ್ಲ ಎಂದರು.

ನಟ, ಪ್ರಗತಿಪರ ಚಿಂತಕ ಪ್ರಕಾಶ್‌ ರಾಜ್‌ ಮಾತನಾಡಿ, ʼಬಡವರು, ಬುಡಕಟ್ಟು ಜನಾಂಗದವರು ಹಾಗೂ ಅಲ್ಪಸಂಖ್ಯಾತರ ಮತಗಳು ಡಿಲೀಟ್ ಆಗುತ್ತಿವೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ಕುಮಾರ್ ರಾಜೀನಾಮೆ ನೀಡಿದರೆ, ಅವರ ಜಾಗಕ್ಕೆ ಮತ್ತೊಬ್ಬ ಅಜ್ಞಾನೇಶ್ ಬರುತ್ತಾನೆ. ಅದರ ಬದಲು, ಎಸ್‌ಐಆರ್‌ ಪ್ರಕ್ರಿಯೆಯೇ ರದ್ದಾಗಲು ಹೋರಾಡಬೇಕಿದೆ’ ಅವರು ಹೇಳಿದರು.

CJP ಮುಖಂಡರಾದ ಅಭಿಜೀತ್ ದೀಪ್ಕೆ, ಸೌರವ್ ದಾಸ್‌, ಅಶುತೋಷ್‌ ರಾಂಕಾ ಪ್ರತಿಭಟನೆಯಲ್ಲಿ ಭಾಗವಹಿಸಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor