ಧ್ರುವ ರಾಠಿ, ಪ್ರಕಾಶ್ ರಾಜ್, ಅಭಿಜಿತ್ ದೀಪ್ಕೆ(PC : PTI)

ಬೆಂಗಳೂರು : ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯಿಂದ ಉಂಟಾಗಿರುವ ಅನ್ಯಾಯ ಮತ್ತು ಮತದಾರರ ಹಕ್ಕುಗಳ ಮೇಲಿನ ಪರಿಣಾಮಗಳ ವಿರುದ್ಧ ಎಸ್‍ಐಆರ್ ವಿರೋಧಿ ಒಕ್ಕೂಟ ಹಾಗೂ ವಿವಿಧ ನಾಗರಿಕ ಹಕ್ಕುಗಳ ಸಂಘಟನೆಗಳ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ನಾಳೆ ಬೆಳಗ್ಗೆ 10:30ಕ್ಕೆ ‘ಜನತಾ ನ್ಯಾಯಾಲಯ’ ಕಾರ್ಯಕ್ರಮ ನಡೆಯಲಿದೆ.

ಕಾರ್ಯಕ್ರಮದಲ್ಲಿ ಖ್ಯಾತ ಯೂಟ್ಯೂಬರ್ ಧ್ರುವರಾಠಿ, ವಿಶ್ರಾಂತ ನ್ಯಾಯಮೂರ್ತಿ ವಿ.ಗೋಪಾಲಗೌಡ, ಬಹುಭಾಷಾ ನಟ ಹಾಗೂ ಸಾಮಾಜಿಕ ಹೋರಾಟಗಾರರಾದ ಪ್ರಕಾಶ್ ರಾಜ್, ಕಿಶೋರ್, ಸಿಜೆಪಿ ಪ್ರಮುಖರಾದ ಅಭಿಜಿತ್ ದೀಪ್ಕೆ, ಅಶುತೋಷ್ ರಾಂಕಾ, ಆಯಿಷಾ ಘೋಷ್, ಸೌರವ್ ದಾಸ್, ಹಿರಿಯ ಸಾಹಿತಿ ದೇವನೂರು ಮಹಾದೇವ, ನೂರ್ ಶ್ರೀಧರ್, ಕೆ.ಮಹಾಂತೇಶ್, ತಾಹೇರ್ ಹುಸೇನ್, ಅಬ್ದುಲ್ ಮಜೀದ್, ಮುಹಮ್ಮದ್ ಯೂಸುಫ್ ಕನ್ನಿ, ಫಾ.ಅರುಣ್ ಲೂಯಿಸ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಎಸ್‍ಐಆರ್ ಪ್ರಕ್ರಿಯೆಯಲ್ಲಿ ಅರ್ಹ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗಿದೆ ಎಂಬ ಆರೋಪಗಳು, ನಮೂನೆ-7ರ ದುರುಪಯೋಗ, ನೋಟಿಸ್ ನೀಡುವ ಪ್ರಕ್ರಿಯೆಯಲ್ಲಿನ ಗೊಂದಲಗಳು ಹಾಗೂ ಮತದಾರರಿಗೆ ಎದುರಾಗಿರುವ ವಿವಿಧ ಸಮಸ್ಯೆಗಳನ್ನು ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಪ್ರಸ್ತಾಪಿಸಲಾಗುತ್ತದೆ. ರಾಜ್ಯದ ವಿವಿಧ ಭಾಗಗಳಿಂದ ಎಸ್‍ಐಆರ್‍ನಿಂದ ಸಂತ್ರಸ್ತರಾಗಿರುವ ಮತದಾರರು, ನಾಗರಿಕ ಹಕ್ಕುಗಳ ಹೋರಾಟಗಾರರು ಹಾಗೂ ವಿವಿಧ ಸಂಘಟನೆಗಳ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

ಎಸ್‍ಐಆರ್ ಪ್ರಕ್ರಿಯೆಯಲ್ಲಿನ ಲೋಪದೋಷಗಳ ಕುರಿತು ಸಾರ್ವಜನಿಕ ವಿಚಾರಣೆ ನಡೆಸುವ ಉದ್ದೇಶವನ್ನು ಕಾರ್ಯಕ್ರಮ ಆಯೋಜಕರು ಹೊಂದಿದ್ದಾರೆ.

ವಿಶ್ರಾಂತ ನ್ಯಾಯಮೂರ್ತಿಗಳು, ಹಿರಿಯ ವಕೀಲರು, ಸಾಹಿತಿಗಳು ಹಾಗೂ ಮಾನವ ಹಕ್ಕುಗಳ ಹೋರಾಟಗಾರರು ಜನತಾ ನ್ಯಾಯಾಲಯದ ವಿಚಾರಣೆಯಲ್ಲಿ ಭಾಗವಹಿಸಲಿದ್ದಾರೆ. ಆ ಬಳಿಕ ಸಿದ್ಧಪಡಿಸುವ ವರದಿಯನ್ನು ಚು.ಆಯೋಗ ಹಾಗೂ ನ್ಯಾಯಾಲಯಗಳ ಗಮನಕ್ಕೆ ತರಲು ಉದ್ದೇಶಿಸಲಾಗಿದೆ. ಮತದಾರರ ಹಕ್ಕು ಮತ್ತು ಪ್ರಜಾಪ್ರಭುತ್ವದ ರಕ್ಷಣೆಯ ವಿಚಾರದಲ್ಲಿ ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಧ್ವನಿ ದಾಖಲಿಸುವಂತೆ ಎಸ್‍ಐಆರ್ ವಿರೋಧಿ ಒಕ್ಕೂಟ ಹಾಗೂ ನಾಗರಿಕ ಸಂಘಟನೆಗಳು ಕರೆ ನೀಡಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor