ಜ್ಞಾನೇಶ್ ಹೋದರೆ ಮತ್ತೊಬ್ಬ ಅಜ್ಞಾನೇಶ್ ಬರುತ್ತಾನೆ, SIR ರದ್ದಾಗಲಿ : ಪ್ರಕಾಶ್ ರಾಜ್
ಬೆಂಗಳೂರು : ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ(ಎಸ್‍ಐಆರ್) ಪ್ರಕ್ರಿಯೆಯಿಂದ ಉಂಟಾಗಿರುವ ಅನ್ಯಾಯ ಮತ್ತು ಮತದಾರರ ಹಕ್ಕುಗಳ ಮೇಲಿನ ಪರಿಣಾಮಗಳ ವಿರುದ್ಧ ಎಸ್‍ಐಆರ್ ವಿರೋಧಿ ಒಕ್ಕೂಟ ಹಾಗೂ ವಿವಿಧ ನಾಗರಿಕ ಹಕ್ಕುಗಳ ಸಂಘಟನೆಗಳ ವತಿಯಿಂದ ನಗರದ ಫ್ರೀಡಂ ಪಾರ್ಕ್‍ನಲ್ಲಿ ಇಂದು (ಅ.8) ಜನತಾ ನ್ಯಾಯಾಲಯ ಹಾಗೂ ಬೃಹತ್ ಪ್ರತಿಭಟನೆ ನಡೆಯಿತು.
SIRನಿಂದ ತೊಂದರೆಗೊಳಗಾದವರ ಸಮಸ್ಯೆಗಳನ್ನು ಆಲಿಸುವ ಉದ್ದೇಶದಿಂದ ‘ಜನತಾ ನ್ಯಾಯಾಲಯ’ ರೂಪದಲ್ಲಿ ಪ್ರತಿಭಟನೆ ಆಯೋಜಿಸಲಾಗಿದ್ದು, SIR ಪ್ರಕ್ರಿಯೆ ರದ್ದುಗೊಳಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು.
ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಪ್ರಕಾಶ್ ರಾಜ್, ನಾವು ಯಾವುದೇ ರಾಜಕೀಯ ಪಕ್ಷವಲ್ಲ. ನಾವು ಈ ದೇಶದ ಪ್ರಜೆಗಳು. ಇದು ನಮ್ಮ ಹಕ್ಕಿಗಾಗಿ ನಡೆಯುತ್ತಿರುವ ಹೋರಾಟ. ಎಸ್‍ಐಆರ್‌ನಿಂದ ಮತದಾನದ ಹಕ್ಕು ಕಳೆದುಕೊಂಡವರನ್ನು ಭೇಟಿ ಮಾಡಿ ಅವರಿಗೆ ಆಗಿರುವ ಅನ್ಯಾಯವನ್ನು ಕಂಡಿದ್ದೇನೆ. ಚುನಾವಣಾ ಆಯೋಗ ಚುನಾವಣಾ ಪಟ್ಟಿಯನ್ನು ಸ್ವಚ್ಛ ಮಾಡುತ್ತಿಲ್ಲ, ನಮ್ಮನ್ನು ಪಟ್ಟಿಯಿಂದ ತೆಗೆಯಲು ಬಂದಿದೆ. ಒಟ್ಟಿನಲ್ಲಿ ಈ ಜ್ಞಾನೇಶ್ ಕುಮಾರ್ ಹೋದರೆ ಮತ್ತೊಬ್ಬ ಅಜ್ಞಾನೇಶ್ ಬರುತ್ತಾನೆ. ನಮಗೆ ಎಸ್‍ಐಆರ್ ರದ್ದಾಗಬೇಕು. ಜ್ಞಾನೇಶ್ ವಿಚಾರಣೆ ನಡೆಯಬೇಕು, ಅವರ ಮೇಲೆ ಮೊಕದ್ದಮೆ ದಾಖಲಾಗಬೇಕು ಎಂದು ಆಗ್ರಹಿಸಿದರು.
ಎಸ್‍ಐಆರ್ ರದ್ದುಗೊಳಿಸಿ ಜನರ ಘನತೆ ಮತ್ತು ಹಕ್ಕನ್ನು ಮರಳಿಸುವವರೆಗೆ ಹೋರಾಟ ಮುಂದುವರಿಯಲಿದೆ. ನಾವು ಶಾಂತಿಯುತವಾಗಿ ರಸ್ತೆಯಲ್ಲಿ ನಿಂತು ಹೋರಾಟ ನಡೆಸುವುದಾಗಿ ಪ್ರಕಾಶ್ ರಾಜ್ ಘೋಷಿಸಿದರು.
ಪ್ರತಿಭಟನೆಯಲ್ಲಿ ಖ್ಯಾತ ಯೂಟ್ಯೂಬರ್ ಧ್ರುವ ರಾಠಿ ಮಾತನಾಡಿ, ʼವೋಟ್ ಚೋರಿ ಆಗುತ್ತಿದೆ ಎನ್ನುವುದಕ್ಕೆ ನಾನು ಮೂರು ಸಾಕ್ಷಿಗಳನ್ನು ನೀಡುತ್ತೇನೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ ಉತ್ತರಿಸಬೇಕು. ವೋಟ್ ಚೋರಿಗೆ ಸಾಕ್ಷಿಯಾಗಿ ಪಶ್ಚಿಮ ಬಂಗಾಳದಲ್ಲಿ ಸುಮಾರು 70 ಲಕ್ಷ ಜನರ ಹೆಸರುಗಳನ್ನು ತೆಗೆದುಹಾಕಲಾಗಿತ್ತು. ಅವರು ಮೊದಲು ಮತದಾರರ ಪಟ್ಟಿಯಲ್ಲಿದ್ದರೂ ಚುನಾವಣಾ ಸಂದರ್ಭದಲ್ಲಿ ಪಟ್ಟಿಯಲ್ಲಿ ಇರಲಿಲ್ಲ, ಚುನಾವಣೆಯ ಬಳಿಕ ಮತ್ತೆ ಪಟ್ಟಿಯಲ್ಲಿ ಕಾಣಿಸಿಕೊಂಡರು ಎಂದು ಅವರು ಹೇಳಿದರು.
CJP ಮುಖಂಡರಾದ ಅಭಿಜೀತ್ ದೀಪ್ಕೆ, ಸೌರವ್ ದಾಸ್, ಅಶುತೋಷ್ ರಾಂಕಾ ಪ್ರತಿಭಟನೆಯಲ್ಲಿ ಭಾಗವಹಿಸಿ, ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು.