ಬೆಂಗಳೂರು : “ದಸರಾ ಮುಗಿದು ದೀಪಾವಳಿ ಬಂದಿದೆ. ರೈತರು ಬಿಕ್ಕಟ್ಟಿನಲ್ಲಿದ್ದಾರೆ. ಅವರ ಬದುಕಿಗೆ ಬೆಳಕು ನೀಡಬೇಕು ಎಂಬ ತೀರ್ಮಾನಕ್ಕೆ ಸರ್ಕಾರ ಬದ್ಧವಾಗಿದೆ. ಬರಪೀಡಿತ ರೈತರಿಗೆ ತಲಾ 5,000 ರೂ. ಪರಿಹಾರ ನೀಡಲು ಸರ್ಕಾರ ತೀರ್ಮಾನಿಸಿದೆ. ಈಗ ಮೊದಲ ಹಂತದಲ್ಲಿ 2500 ರೂ. ಅನ್ನು ಡಿಬಿಟಿ ಮೂಲಕ ನೇರವಾಗಿ ರೈತರಿಗೆ ತಲುಪಿಸಲಾಗುತ್ತಿದೆ. ಉಳಿದ 2500 ರೂ. ಅನ್ನು ಮುಂದಿನ ದಿನಗಳಲ್ಲಿ ಬಿಡುಗಡೆ ಮಾಡಲಾಗುವುದು” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ತಿಳಿಸಿದರು.

ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಶಿವಕುಮಾರ್ ಅವರು ಯಾದಗಿರಿ ಜಿಲ್ಲೆಯ 1,06,462 ರೈತರಿಗೆ, ಪ್ರತಿ ರೈತರಿಗೆ ರೂ. 2,500 ರಂತೆ ಮೊದಲ ಕಂತಿನ ಇನ್‌ಪುಟ್ ಸಬ್ಸಿಡಿ ಮೊತ್ತ ರೂ. 17.43 ಕೋಟಿಯನ್ನು ಗುರುವಾರ ಬಿಡುಗಡೆ ಮಾಡಿ ಮಾತನಾಡಿದರು.

ಶೀಘ್ರವೇ ಎರಡನೇ ಕಂತಿನ ಪರಿಹಾರ ಬಿಡುಗಡೆ

“ಇದರ ಜೊತೆಗೆ, 15 ಜಿಲ್ಲೆಗಳಿಗೆ ಪಾವತಿ ಕಡತಗಳ ತಯಾರಿಕೆ ಪ್ರಕ್ರಿಯೆಯಲ್ಲಿದೆ. ಉತ್ತರ ಕನ್ನಡ, ಕೋಲಾರ, ಕೊಪ್ಪಳ, ಚಾಮರಾಜನಗರ, ಧಾರವಾಡ, ಬಳ್ಳಾರಿ, ಬೀದರ್, ಬೆಂಗಳೂರು ನಗರ, ಹಾವೇರಿ, ಬೆಂಗಳೂರು ದಕ್ಷಿಣ, ದಾವಣಗೆರೆ, ದಕ್ಷಿಣ ಕನ್ನಡ, ಕಲಬುರಗಿ, ಮಂಡ್ಯ ಮತ್ತು ವಿಜಯನಗರ. ಎಲ್ಲಾ ಜಿಲ್ಲೆಗಳಲ್ಲಿರುವ ಅರ್ಹ ರೈತರಿಗೆ ಮೊದಲ ಕಂತಿನ ಇನ್‌ಪುಟ್ ಸಬ್ಸಿಡಿಯನ್ನು ಆದಷ್ಟು ಶೀಘ್ರವಾಗಿ ವಿತರಿಸಲಾಗುವುದು. ಮುಂದಿನ 15-20 ದಿನಳಲ್ಲಿ 2ನೇ ಕಂತಿನ ಮೊತ್ತವನ್ನು ಬಿಡುಗಡೆ ಮಾಡಲಾಗುವುದು. ರೈತರ ಬದುಕು ಹಸನು ಮಾಡಬೇಕು ಎಂಬ ನಿಲುವಿಗೆ ಸರ್ಕಾರ ಬದ್ಧವಾಗಿದೆ. ಸರ್ಕಾರದ ಪರಿಹಾರದಿಂದ ಸಂಪೂರ್ಣ ನೆರವಾಗುತ್ತದೆ ಎಂದು ಹೇಳಲಾಗುವುದಿಲ್ಲ. ಆದರೆ ಸ್ವಲ್ಪ ಮಟ್ಟಿಗಿನ ನೆರವು ಒದಗಿಸಲಾಗುತ್ತಿದೆ” ಎಂದರು.

“ಪರಿಷ್ಕೃತ ಮಾನದಂಡಗಳ ಪ್ರಕಾರ ಬಾಕಿ ಉಳಿದಿರುವ ಅನುಮೋದಿತ ಇನ್‌ಪುಟ್ ಸಬ್ಸಿಡಿಯನ್ನು, ಅನ್ವಯವಾಗುವ ಅರ್ಹತಾ ಮಾನದಂಡಗಳಿಗೆ ಒಳಪಟ್ಟು, ಎನ್‌ಡಿಆರ್‌ಎಫ್‌ನಿಂದ ಅಗತ್ಯ ಅನುದಾನವು ದೊರೆತ ತಕ್ಷಣವೇ ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲಾಗುತ್ತದೆ. ನಮ್ಮ ಬದುಕಿನ ಅನುಭವದಲ್ಲಿ ಇಷ್ಟು ದೊಡ್ಡ ಭೀಕರ ಬರಗಾಲ ನಾವು ಯಾರೂ ಕೇಳಿಲ್ಲ. ಕೇಂದ್ರ ಸರ್ಕಾರ ಮುನ್ಸೂಚನೆ ಕೊಟ್ಟರು ಕೂಡ ಕೃಷ್ಣಾ ಬಿಟ್ಟು ಬೇರೆ ಯಾವ ಅಣೆಕಟ್ಟು ತುಂಬಿಲ್ಲ” ಎಂದು ತಿಳಿಸಿದರು.

ಕಾನೂನಿನ ಚೌಕಟ್ಟಿನಲ್ಲಿಯೇ ಬರಪೀಡಿತ ತಾಲ್ಲೂಕುಗಳ ಘೋಷಣೆ

“ಜಂಟಿ ಬೆಳೆ ಹಾನಿ ಮೌಲ್ಯಮಾಪನ ವರದಿಯ ಪ್ರಕಾರ ರಾಜ್ಯದಲ್ಲಿ 57.93 ಲಕ್ಷ ಹೆಕ್ಟೇರ್‌ ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿದೆ. ಈ ವಿಪತ್ತಿನಿಂದ ರೈತರು ಕಂಗೆಟ್ಟಿದ್ದಾರೆ. 226 ತಾಲ್ಲೂಕುಗಳು ಬರಪೀಡಿತ ಎಂದು ಘೋಷಣೆ ಮಾಡುವಾಗ ಕೇಂದ್ರ ಸರ್ಕಾರದ ಮಾರ್ಗಸೂಚಿಯಂತೆ ಯಾರ ಒತ್ತಡಕ್ಕೂ ಮಣಿಯದೆ ನೇರವಾಗಿ ಪರಿಶೀಲಿಸಿ ವರದಿ ತಯಾರು ಮಾಡಲಾಗಿದೆ. ಕಾನೂನು ಪ್ರಕಾರವೇ ಕಂದಾಯ ಸಚಿವರು, ಡಿಸಿಎಂ ಅವರ ಅನುಮೋದನೆ ಪಡೆದು ನಾನು ಬರಪೀಡಿತ ತಾಲ್ಲೂಕುಗಳ ಘೋಷಣೆ ಮಾಡಿದ್ದೇನೆ” ಎಂದರು.

ವಿರೋಧ ಪಕ್ಷಗಳಿಗೆ ರಾಜಕಾರಣ ಮುಖ್ಯ

“ಕೇಂದ್ರ ಸರ್ಕಾರ ಕಳುಹಿಸಿದ್ದ ಮೂರು ತಂಡಗಳೂ ರಾಜ್ಯದ ಬರ ಪೀಡಿತ ಪ್ರದೇಶಗಳನ್ನು ಭೇಟಿ ಮಾಡಿವೆ. ನಾವು ಕೂಡ ವಿರೋಧ ಪಕ್ಷಗಳೊಂದಿಗೆ ಚರ್ಚೆ ಮಾಡಬೇಕೆಂದರೂ ಅವರಿಗೆ ರಾಜಕಾರಣ ಮುಖ್ಯವಾಯಿತು. ರೈತರ ಹಿತ ಕಾಪಾಡಲು ಮೂರು ವಿಭಾಗಗಳಿಗೆ ಭೇಟಿ ಮಾಡಿ ಶಕ್ತಿ ತುಂಬುವ ಕೆಲಸ ಮಾಡಿದ್ದೇವೆ” ಎಂದರು

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor