ಬೆಂಗಳೂರು : ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಧಾನಮಂಡಲ ಅಧಿವೇಶನಕ್ಕೂ ಮೊದಲೇ ಮಹಿಳೆಯೊಬ್ಬರನ್ನು ಸಚಿವ ಸಂಪುಟದಲ್ಲಿ ಸಚಿವರನ್ನಾಗಿ ನೇಮಕ ಮಾಡಲಾಗುವುದು ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ಗ್ಯಾರಂಟಿ ಯೋಜನೆಗಳ ಕುರಿತು ಫಲಾನುಭವಿಗಳೊಂದಿಗೆ ಸಭೆಯಲ್ಲಿ ಪ್ರಸ್ತಾಪಿಸಿದ ಅವರು, ಮಹಿಳೆಯೊಬ್ಬರು ಖಚಿತವಾಗಿ ಸಚಿವ ಸಂಪುಟ ಸೇರುತ್ತಾರೆ. ಈ ಪ್ರಕ್ರಿಯೆ ಬೆಳಗಾವಿಯಲ್ಲಿ ನಡೆಯುವ ಚಳಿಗಾಲದ ವಿಧಾನಮಂಡಲ ಅಧಿವೇಶನಕ್ಕೂ ಮುಂಚೆಯ ನಡೆಯಲಿದೆ ಎಂದು ತಿಳಿಸಿದರು.

ಗೃಹಲಕ್ಷ್ಮೀ ದುರುಪಯೋಗ ತಡೆ: ಇತ್ತೀಚೆಗೆ ಗೃಹಜ್ಯೋತಿ ಯೋಜನೆಯ ಕುರಿತು ಸಮೀಕ್ಷೆ ನಡೆಸಲಾಯಿತು. ಈ ಸಂದರ್ಭದಲ್ಲಿ ಯೋಜನೆಯಲ್ಲೂ ದುರುಪಯೋಗ ಆಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಒಂದು ಲಕ್ಷಕ್ಕೂ ಹೆಚ್ಚು ಮೃತರ ಖಾತೆಗೆ ಹಣ ಹೋಗುತ್ತಿರುವುದು, ಇತರ ರಾಜ್ಯದ ಮಹಿಳೆಯರು ಈ ಸೌಲಭ್ಯದ ದುರುಪಯೋಗ ಪಡೆದಿರುವುದು ಗೊತ್ತಾಗಿದೆ. ಬಾಗಲಕೋಟೆಯ ಫಲಾನುಭವಿಯ ವಿವರ ಪರಿಶೀಲಿಸಿದಾಗ ಮೊಬೈಲ್ ಸಂಖ್ಯೆ ಒಂದು ಊರಿನದ್ದು, ಹಣ ಬೇರೆಯವರಿಗೆ ತಲುಪುತ್ತಿರುವ ವ್ಯತ್ಯಾಸಗಳು ಗಮನಕ್ಕೆ ಬಂದಿವೆ. ಈ ಹಿನ್ನೆಲೆಯಲ್ಲಿ ಗೃಹಲಕ್ಷ್ಮೀ ನಮೂನೆ ಸಿದ್ಧಪಡಿಸಲಾಗಿದೆ. ಆಗ ಮಹಿಳೆಯರು ತಮ್ಮದೇ ದೂರವಾಣಿ ಸಂಖ್ಯೆ ನಮೂದಿಸಬೇಕು ಎಂದು ಮನವಿ ಮಾಡಿದರು.

ಮೀಟರ್ ಬಡ್ಡಿ ಕಡಿವಾಣ: ಕೆಲವರು ಬೆಳಗ್ಗೆ ಮಾರುಕಟ್ಟೆಗೆ ಹೋಗುವಾಗ 2 ಸಾವಿರ ರೂಪಾಯಿ ಸಾಲ ಪಡೆದು, ಸಂಜೆ ಹಣ ಹಿಂದಿರುಗಿಸುವಾಗ ಶೇ.10 ರಷ್ಟು ನೀಡುವಂತಹ ಅತಿಯಾದ ಬಡ್ಡಿ ವ್ಯವಹಾರ ನಡೆಸುತ್ತಿದ್ದಾರೆ. ಶೇ.5-10 ರೂಪಾಯಿಗಳ ಲೆಕ್ಕದಲ್ಲಿ ಬಡ್ಡಿ ವಸೂಲಿ ಮಾಡುವ ಪದ್ಧತಿಯೂ ಇದೆ. ಇಂತಹ ವ್ಯವಹಾರಗಳಿಂದ ಜನರು ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದಲ್ಲದೆ, ಅಪರಾಧ ಪ್ರಕರಣಗಳೂ ಹೆಚ್ಚಾಗುತ್ತಿವೆ. ಆದರೆ, ಸಂತ್ರಸ್ತರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಹೀಗಾಗಿ, ಇಂತಹ ವ್ಯವಹಾರಗಳಿಗೆ ಒಳಗಾಗದಂತೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದೇನೆ. ಅಗತ್ಯಬಿದ್ದರೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಚೀಟಿ ವ್ಯವಹಾರದಲ್ಲಿ ಹಲವು ಸಮಸ್ಯೆಗಳಿವೆ. ಕೊನೆಯಲ್ಲಿ ಹಣ ಕಟ್ಟಿದವರಿಗೆ ಹಣ ಸಿಗದೆ ಹೋಗುವ ಸಾಧ್ಯತೆಯಿದ್ದು, ನಂತರ ಕಾನೂನು ಸಮಸ್ಯೆಗಳು ಎದುರಾಗುತ್ತವೆ. ಹೀಗಾಗಿ, ಇಂತಹ ವ್ಯವಹಾರಗಳಿಂದ ದೂರವಿರುವಂತೆ ಜನರಿಗೆ ಎಚ್ಚರಿಕೆ ನೀಡುತ್ತಿದ್ದೇನೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor