ಪ್ರಿಯಾಂಕ್ ಖರ್ಗೆ

ಬೆಂಗಳೂರು: ಬಿಜೆಪಿ ಹಾಗೂ ಅದರ ನಾಯಕರು ಎದುರಿಸುತ್ತಿರುವ ಸ್ಥಿತಿ ದುರದೃಷ್ಟವೋ, ಸಂದಿಗ್ಧತೆಯೋ ಅಥವಾ ರಾಜಕೀಯ ದಿವಾಳಿತನವೋ ಎಂಬ ಪ್ರಶ್ನೆ ಮೂಡಿದೆ. ದುರದೃಷ್ಟಕರವೆಂದರೆ ಬಿಜೆಪಿಯವರು ಜೆಡಿಎಸ್ ಮತ್ತು ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಮರ್ಥಿಸಿಕೊಳ್ಳಬೇಕಾದ ಪರಿಸ್ಥಿತಿ ಬಂದಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಆರ್.ಅಶೋಕ್ ಅವರನ್ನು ಪ್ರಶ್ನಿಸಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ಅವರು ದಲಿತರ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿದಾಗ ನಿಮ್ಮ ದಲಿತಪರ ಕಾಳಜಿ ಎಲ್ಲಿತ್ತು? ನಿಮ್ಮ ಶಾಸಕರು ನನ್ನನ್ನು ‘ಕಾನ್ವೆಂಟ್ ದಲಿತ’ ಅಥವಾ ‘ಪೈಲ್ಸ್’ ಎಂದು ಕರೆದಾಗ ನೀವು ಎಲ್ಲಿದ್ದಿರಿ? ಚಲುವಾದಿ ನಾರಾಯಣಸ್ವಾಮಿ ಅವರು ನನ್ನನ್ನು ನಾಯಿ ಎಂದು ಕರೆದಾಗ ನಿಮ್ಮ ಸಂಸ್ಕಾರ ಎಲ್ಲಿ ಅಡಗಿತ್ತು? ಎಂದು ಪ್ರಶ್ನಿಸಿದ್ದಾರೆ.

ಚಿತ್ತಾಪುರ ಕ್ಷೇತ್ರದ ನಿಮ್ಮ ಅಭ್ಯರ್ಥಿ ನನ್ನ ಕುಟುಂಬವನ್ನು ಮುಗಿಸುವುದಾಗಿ ಬೆದರಿಕೆ ಹಾಕಿದಾಗ ನಿಮ್ಮ ನೈತಿಕತೆ ಎಲ್ಲಿತ್ತು? ಆರೆಸ್ಸೆಸ್‌ ಕಾರ್ಯಕರ್ತರು ನನಗೆ ಕೊಲೆ ಬೆದರಿಕೆ ಹಾಕಿದಾಗ ನಿಮ್ಮ ಪ್ರಜ್ಞೆಗೆ ಏನಾಗಿತ್ತು? ಬಿಜೆಪಿ ಸಂಸದರು ದಲಿತರಿಗೂ ಆರೆಸ್ಸೆಸ್‌ ಗೂ ಏನು ಸಂಬಂಧ ಎಂದು ಪ್ರಶ್ನಿಸಿದಾಗ ನೀವು ಎಲ್ಲಿದ್ದಿರಿ? ಈ ಎಲ್ಲ ಹೇಳಿಕೆಗಳಿಗೆ ನಿಮ್ಮ ಸಮ್ಮತಿ ಮತ್ತು ಬೆಂಬಲ ಇದೆಯೇ ಎಂದು ಅಶೋಕ್ ಅವರನ್ನು ಪ್ರಿಯಾಂಕ್ ಖರ್ಗೆ ಪ್ರಶ್ನಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದ ಮಹಿಳೆಯರ ಪರವಾಗಿ ನೀವು ಏಕೆ ಮಾತನಾಡಲಿಲ್ಲ? ಸೂರಜ್ ರೇವಣ್ಣ ಅವರ ವಿಚಾರದಲ್ಲಿ ನಿಮ್ಮ ಅಭಿಪ್ರಾಯವೇನು? ನಿಮ್ಮ ಪ್ರಜ್ಞೆ ಆಯ್ದ ವ್ಯಕ್ತಿಗಳ ವಿರುದ್ಧ ಮಾತ್ರವೇ ಜಾಗೃತವಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ.

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಬಿಜೆಪಿಯ ಹಿರಿಯ ನಾಯಕ ಬಿ.ಎಸ್. ಯಡಿಯೂರಪ್ಪ ಅವರ ಕುರಿತು ಬಳಸಿದ್ದ ಪದಗಳು ನಾಗರಿಕ ಸಮಾಜ ಕೇಳುವಂತಿದ್ದವೇ? ಅವು ಯಾರಿಗಾದರೂ ಅಥವಾ ಯಾವುದೇ ಸಮುದಾಯಕ್ಕೆ ನೋವುಂಟು ಮಾಡಲಿಲ್ಲವೇ? ಎಂದು ಪ್ರಶ್ನಿಸಿರುವ ಅವರು, ಆ ಹೇಳಿಕೆಯನ್ನು ಮತ್ತೊಮ್ಮೆ ಕೇಳುವಂತೆ ಸೂಚಿಸಿದ್ದಾರೆ.

ಜೆಡಿಎಸ್ ಮತ್ತು ಕುಮಾರಸ್ವಾಮಿ ಅವರನ್ನು ಸಮರ್ಥಿಸಿಕೊಳ್ಳುತ್ತಿರುವ ಬಿಜೆಪಿಗರಿಗೆ ಅವರ ಪಕ್ಷ, ಪಿತೃಸಂಘ, ನಾಯಕರು ಹಾಗೂ ನಾಡಿನ ವಿವಿಧ ಸಮುದಾಯಗಳ ಕುರಿತು ಮಾಡಿರುವ ಅವಮಾನಗಳು ಗೌಣವಾಗಿವೆ. ಇದು ಬಿಜೆಪಿಯ ರಾಜಕೀಯ ದೌರ್ಬಲ್ಯವಲ್ಲದೆ ಬೇರೇನೂ ಅಲ್ಲ ಎಂದು ಪ್ರಿಯಾಂಕ್ ಖರ್ಗೆ ತಮ್ಮ ಪೋಸ್ಟ್‌ನಲ್ಲಿ ಟೀಕಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor