ಕರ್ನಾಟಕದ ಪೆಟ್ರೋಲ್ನಲ್ಲಿ ಗರಿಷ್ಠ ಶೇ.31.2ರಷ್ಟು ಎಥೆನಾಲ್ ಮಿಶ್ರಣ ಪತ್ತೆ: ಸಚಿವ ರಿಝ್ವಾನ್ ಅರ್ಶದ್
► "ಇ20 ಹೆಸರಿನಲ್ಲಿ ಪೆಟ್ರೋಲ್ನಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣ" ► ಲ್ಯಾಬ್ ಪರೀಕ್ಷೆಗಳಿಂದ ಮಾಹಿತಿ ಬಹಿರಂಗ
ರಿಝ್ವಾನ್ ಅರ್ಶದ್/ ಸಾಂದರ್ಭಿಕ ಚಿತ್ರ (Image by rawpixel.com on Magnific)
ಬೆಂಗಳೂರು : ಕರ್ನಾಟಕ ರಾಜ್ಯದ ಪೆಟ್ರೋಲ್ ಬಂಕ್ಗಳಲ್ಲಿ ಮಾರಾಟವಾಗುತ್ತಿರುವ ಪೆಟ್ರೋಲ್ನಲ್ಲಿ ಶೇ.31.2ರ ವರೆಗೆ ಎಥೆನಾಲ್ ಮಿಶ್ರಣವಿರುವುದು ಕಂಡುಬಂದಿದೆ. ಈ ಮಿತಿಮೀರಿದ ಅಕ್ರಮ ಮಿಶ್ರಣದಿಂದಾಗಿ ವಾಹನ ಸವಾರರಲ್ಲಿ ಆತಂಕ ಮನೆಮಾಡಿದೆ.
ಶುಕ್ರವಾರ ವಿಕಾಸಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿ ಅಂಕಿ-ಅಂಶ ಬಹಿರಂಗಪಡಿಸಿದ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ರಿಝ್ವಾನ್ ಅರ್ಶದ್, ಎಲ್ಲ ಪ್ರಮುಖ ಇಂಧನ ಕಂಪೆನಿಗಳಿಂದ ಸಂಗ್ರಹಿಸಲಾದ ಪೆಟ್ರೋಲ್ ಮಾದರಿಗಳ ಲ್ಯಾಬ್ ಪರೀಕ್ಷೆಯಲ್ಲಿ ಗರಿಷ್ಠ ಶೇ.31.2ರವರೆಗೆ ಎಥೆನಾಲ್ ಮಿಶ್ರಣವಿರುವುದು ಪತ್ತೆಯಾಗಿದೆ. ಕರ್ನಾಟಕದ ಪೆಟ್ರೋಲ್ ಬಂಕ್ಗಳಲ್ಲಿ ಇ20 ಹೆಸರಿನಲ್ಲಿ ಪೆಟ್ರೋಲ್ನಲ್ಲಿ ಮಿತಿಮೀರಿದ ಎಥೆನಾಲ್ ಮಿಶ್ರಣ ಮಾಡಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ರಾಜ್ಯದ ಆಹಾರ, ನಾಗರಿಕ ಸರಬರಾಜು, ಗ್ರಾಹಕರ ವ್ಯವಹಾರಗಳು ಮತ್ತು ಕಾನೂನು ಮಾಪನಶಾಸ್ತ್ರ ಇಲಾಖೆಯು ಕರ್ನಾಟಕದಲ್ಲಿ ಲಭ್ಯವಿರುವ ಪ್ರಮುಖ ಬ್ರಾಂಡ್ಗಳ ಪೆಟ್ರೋಲ್ ಗುಣಮಟ್ಟ ತಪಾಸಣೆ ನಡೆಸಿತ್ತು. ಈ ಪರೀಕ್ಷೆಗಾಗಿ ಬೆಂಗಳೂರು, ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ರಾಮನಗರ, ಮಂಗಳೂರು ಮತ್ತು ತುಮಕೂರಿನಿಂದ ಒಟ್ಟು 63 ಪೆಟ್ರೋಲ್ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಈ ಮಾದರಿಗಳಲ್ಲಿ ಶೇ.20ಕ್ಕಿಂತ ಹೆಚ್ಚಿನ ಎಥೆನಾಲ್ ಮಿಶ್ರಣವಿರುವುದು ಕಂಡುಬಂದಿದೆ. ಇದರಲ್ಲಿ ಐಒಸಿಎಲ್ ಪೆಟ್ರೋಲ್ನಲ್ಲಿ ಶೇ.31.2ರಷ್ಟು ಮತ್ತು ಎಚ್ಪಿಸಿಎಲ್ ಪೆಟ್ರೋಲ್ನಲ್ಲಿ ಶೇ.30.5ರಷ್ಟು ಎಥೆನಾಲ್ ಇರುವುದು ಕಂಡುಬಂದಿದೆ ಎಂದು ರಿಝ್ವಾನ್ ಅರ್ಶಾದ್ ವಿವರಿಸಿದರು.
ಪೆಟ್ರೋಲ್ ಮಾದರಿಗಳನ್ನು ಮೊದಲು ತೈಲ ಕಂಪೆನಿಗಳ ಸ್ವಂತ ಲ್ಯಾಬ್ಗಳಿಗೆ(ಐಒಸಿಎಲ್ ಮತ್ತು ಬಿಪಿಸಿಎಲ್) ಕಳುಹಿಸಿದಾಗ ಎಥೆನಾಲ್ ಪ್ರಮಾಣವನ್ನು ಪರೀಕ್ಷಿಸುವುದು ಕಡ್ಡಾಯವಾಗಿದ್ದರೂ, ಆ ಲ್ಯಾಬ್ಗಳು ವರದಿಯಲ್ಲಿ ಎಥೆನಾಲ್ ಶೇಕಡಾವಾರು ನಮೂದಿಸದೆ ಮುಚ್ಚಿಟ್ಟವು. ಈ ಗಂಭೀರ ಮಾಹಿತಿಯನ್ನು ಗೌಪ್ಯವಾಗಿಡುವುದು ತೈಲ ಕಂಪೆನಿಗಳು ಗ್ರಾಹಕರಿಗೆ ಮೋಸ ಮತ್ತು ಮಿತಿಮೀರಿದ ಎಥೆನಾಲ್ ಮಿಶ್ರಣವನ್ನು ಮರೆಮಾಚಲು ಪ್ರಯತ್ನಿಸುತ್ತಿವೆ. ಹೀಗಾಗಿ, ಎನ್.ಎ.ಬಿ.ಎಲ್ ಮಾನ್ಯತೆ ಪಡೆದ ಖಾಸಗಿ ಪ್ರಯೋಗಾಲಯಗಳಿಗೆ ಕಳುಹಿಸಲಾದ ಮಾದರಿಗಳಲ್ಲಿ ಅಕ್ರಮ ಎಥೆನಾಲ್ ಮಿಶ್ರಣವಿರುವುದು ಪತ್ತೆಯಾಗಿದೆ ಎಂದು ಸಚಿವರು ತಿಳಿಸಿದರು.
ಗ್ರಾಹಕರಿಗೆ ಆರ್ಥಿಕ ಹೊರೆ: ಭಾರತದಲ್ಲಿ ಪ್ರತಿವರ್ಷ 6,200 ಕೋಟಿ ಲೀಟರ್ ಇಂಧನ ಬಳಕೆಯಾಗುತ್ತದೆ. ಲೀಟರ್ಗೆ 100 ರೂ.ನಂತೆ ಶೇ.10ರಷ್ಟು ಮೈಲೇಜ್ ಕಡಿಮೆಯಾದರೆ, ಈ ಮಿತಿಮೀರಿದ ಮಿಶ್ರಣದಿಂದ ಗ್ರಾಹಕರ ಮೇಲೆ ವಾರ್ಷಿಕ 62,000 ಕೋಟಿ ರೂ. ಆರ್ಥಿಕ ಹೊರೆ ಬೀಳುತ್ತದೆ. ಇಂತಹ ಇಂಧನ ಬಳಕೆಗೆ ಹೊಂದಿಕೊಳ್ಳದ ವಾಹನಗಳ ಫಿಲ್ಟರ್, ಪ್ಯೂಯಲ್ ಪಂಪ್, ಇಂಜೆಕ್ಟರ್, ಪೈಪ್(ಹೋಸ್) ಹಾಗೂ ಸೀಲ್ಗಳು ಹಾನಿಗೊಳಗಾಗುತ್ತವೆ. ಇದರಿಂದಾಗಿ ವಾಹನಗಳ ರಿಪೇರಿಗಾಗಿ ಹೆಚ್ಚುವರಿಯಾಗಿ 39,000 ಕೋಟಿ ವೆಚ್ಚವಾಗುತ್ತದೆ ಎಂದು ಅವರು ವಿವರಿಸಿದರು.
ಒಟ್ಟಾರೆ, ಪ್ರತಿಯೊಬ್ಬ ಗ್ರಾಹಕರ ಮೇಲೆ ಪರೋಕ್ಷವಾಗಿ ವರ್ಷಕ್ಕೆ ಬರೋಬ್ಬರಿ 1.01 ಲಕ್ಷ ಕೋಟಿಯಷ್ಟು ಹೊರೆ ಬೀಳುತ್ತಿದೆ. ಈ ಅಪಾಯ ಕೇವಲ ಹಳೆಯ ವಾಹನಗಳಿಗೆ ಮಾತ್ರ ಸೀಮಿತವಲ್ಲ. ದೇಶದಲ್ಲಿರುವ 35 ಕೋಟಿ ವಾಹನಗಳ ಪೈಕಿ ಶೇ.99ರಷ್ಟು ವಾಹನಗಳು ಇ20ಗಿಂತ ಹೆಚ್ಚಿನ ಇಂಧನ ಸಂಯೋಜನೆಗೆ ತಕ್ಕಂತೆ ಸಿದ್ಧಗೊಂಡಿಲ್ಲ. ಎಪ್ರಿಲ್ 2023ರ ನಂತರ ಮಾರುಕಟ್ಟೆಗೆ ಬಂದ ವಾಹನಗಳೂ ಗರಿಷ್ಠ ಇ20ವರೆಗೆ ಮಾತ್ರ ಪ್ರಮಾಣೀಕರಿಸಲ್ಪಟ್ಟಿವೆ. ದೇಶದ ಸುಮಾರು 1 ಲಕ್ಷ ಇಂಧನ ಕೇಂದ್ರಗಳಿಂದ ಕಡಿಮೆ ಎಥೆನಾಲ್ ಮಿಶ್ರಣದ ಪೆಟ್ರೋಲ್ ಅನ್ನು ಸಂಪೂರ್ಣವಾಗಿ ಹಿಂಪಡೆದಿರುವುದರಿಂದ, ಸಾರ್ವಜನಿಕರಿಗೆ ಯಾವುದೇ ಪರ್ಯಾಯ ಇಂಧನದ ಆಯ್ಕೆಯೂ ಉಳಿದಿಲ್ಲ ಎಂದು ರಿಝ್ವಾನ್ ಅರ್ಶದ್ ತಿಳಿಸಿದರು.
ಎಥೆನಾಲ್ ಮಿಶ್ರಣದಿಂದ ವಿದೇಶಿ ವಿನಿಮಯ ಉಳಿತಾಯವಾಗುತ್ತದೆ ಎಂದು ಕೇಂದ್ರ ಸರಕಾರ ಪ್ರತಿಪಾದಿಸುತ್ತಿದೆ. ಆದರೆ, ಅದರ ಲಾಭ ಗ್ರಾಹಕರಿಗೆ ತಲುಪಿಲ್ಲ. ಐಒಸಿಎಲ್, ಬಿಪಿಸಿಎಲ್ ಮತ್ತು ಎಚ್ಪಿಸಿಎಲ್ ಕಂಪೆನಿಗಳ ಒಟ್ಟು ಲಾಭ 77,821 ಕೋಟಿ ರೂ. (2025-26ರ ಆರ್ಥಿಕ ವರ್ಷ) ಇತ್ತು. ಜೊತೆಗೆ, ಆಟೋಮೊಬೈಲ್ ಕಂಪೆನಿಗಳಿಗೆ ಬರುವ ಲಾಭದಲ್ಲಿ ಸುಮಾರು ಶೇ.50ರಷ್ಟು ಸರ್ವಿಸ್ ಮತ್ತು ಸ್ಪೇರ್ ಪಾರ್ಟ್ಸ್ ಗಳ ಮಾರಾಟದಿಂದಲೇ ಬರುತ್ತದೆ. ತೈಲ ಕಂಪೆನಿಗಳು ದಾಖಲೆ ಮಟ್ಟದ ಲಾಭ ಗಳಿಸುತ್ತಿದ್ದರೆ, ಅತ್ತ ಮೈಲೇಜ್ ನಷ್ಟ ಮತ್ತು ವಾಹನ ದುರಸ್ತಿಯ ರೂಪದಲ್ಲಿ ಸಾಮಾನ್ಯ ಗ್ರಾಹಕರೇ ಈ ನಷ್ಟವನ್ನು ಅನುಭವಿಸುತ್ತಿದ್ದಾರೆ ಎಂದು ರಿಝ್ವಾನ್ ಅರ್ಶದ್ ದೂರಿದರು.
ಪ್ರಸ್ತುತ ಪೆಟ್ರೋಲ್ ಬಂಕ್ಗಳಲ್ಲಿ ಬಳಕೆಯಲ್ಲಿರುವ ಹೆಚ್ಚಿನ ಇಂಧನ ಡಿಸ್ಪೆನ್ಸಿಂಗ್ ಯೂನಿಟ್ಗಳು ಕೇವಲ ಎಥೆನಾಲ್ ಮಿಶ್ರಣಕ್ಕೆ ಮಾತ್ರ ಸರಿಹೊಂದುವಂತೆ ವಿನ್ಯಾಸಗೊಂಡಿವೆ. ಹೆಚ್ಚಿನ ಪ್ರಮಾಣದ ಎಥೆನಾಲ್ ಮಿಶ್ರಣವನ್ನು ಅಗತ್ಯವಿರುವ ಮೂಲಸೌಕರ್ಯ ಹಾಗೂ ಸಂಬಂಧಿತ ವ್ಯವಸ್ಥೆಗಳನ್ನು ಸಮರ್ಪಕವಾಗಿ ಮೇಲ್ದರ್ಜೆಗೇರಿಸದಿರುವುದು ಗಂಭೀರ ಆತಂಕವನ್ನು ಹುಟ್ಟುಹಾಕಿದೆ. ಅಂತಿಮವಾಗಿ ಇದರ ಪರಿಣಾಮವನ್ನು ಗ್ರಾಹಕರೇ ಎದುರಿಸಬೇಕಾಗಿದೆ ಎಂದು ರಿಝ್ವಾನ್ ಅರ್ಶದ್ ಟೀಕಿಸಿದರು.
ಶೇ.20ರ ಕಾನೂನುಬದ್ಧ ಮಿತಿಗಿಂತ ಹೆಚ್ಚಿನ ಎಥೆನಾಲ್ ಬೆರೆತ ಪೆಟ್ರೋಲ್ ಸರಬರಾಜು ಮಾಡುತ್ತಿರುವ ಐಒಸಿಎಲ್, ಬಿಪಿಸಿಎಲ್, ಎಚ್ಪಿಸಿಎಲ್ ಮತ್ತು ಸಂಬಂಧಿತ ಕಂಪೆನಿಗಳ ವಿರುದ್ಧ ಕೇಂದ್ರ ಸರಕಾರ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಹಾಗೆಯೇ, ಕರ್ನಾಟಕಕ್ಕೆ ಪೂರೈಕೆಯಾಗುವ ಪ್ರತಿಯೊಂದು ಹನಿಯ ಇಂಧನದ ಮಿಶ್ರಣ ಮಟ್ಟವನ್ನು ಪಾರದರ್ಶಕವಾಗಿ ದಾಖಲಿಸಿ, ಪಂಪ್-ಮಟ್ಟದ ಸಮಗ್ರ ಲೆಕ್ಕಪರಿಶೋಧನಾ ವರದಿಯನ್ನು ಸಾರ್ವಜನಿಕವಾಗಿ ಪ್ರಕಟಿಸಬೇಕು. ತೈಲ ಕಂಪೆನಿಗಳ ಅಕ್ರಮದಿಂದ ಹಾನಿಗೊಳಗಾದ ಪ್ರತಿ ವಾಹನ ಮಾಲಕನಿಗೂ ಕಡ್ಡಾಯವಾಗಿ ನಷ್ಟ ಪರಿಹಾರ ದಕ್ಕಬೇಕು ಎಂದು ರಿಝ್ವಾನ್ ಅರ್ಶದ್ ಒತ್ತಾಯಿಸಿದರು.
ಸುದ್ದಿಗೋಷ್ಠಿಯಲ್ಲಿ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೇಂದ್ರ ವಾಸ್ತವಾಂಶ ಬಹಿರಂಗಪಡಿಸಲಿ: ‘ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಹಾಗೂ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯಗಳು ಇ20 ಬಗೆಗೆ ವಾಸ್ತವಾಂಶವನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಬೇಕು. ಅಕ್ರಮ ಮಿಶ್ರಣದ ಕುರಿತು ನಿಖರ ಸಾಕ್ಷಾಧಾರಗಳು ದಾಖಲೆ ಸಮೇತ ಲಭ್ಯವಿದ್ದು, ಗ್ರಾಹಕರಿಗೆ ವಾಸ್ತವವಾಗಿ ಪೂರೈಕೆಯಾಗುತ್ತಿರುವ ಎಥೆನಾಲ್ ಮಿಶ್ರಣದ ನೈಜ ಪ್ರಮಾಣವನ್ನು ಕೇಂದ್ರ ಸರಕಾರವು ಯಾವುದೇ ಮುಚ್ಚುಮರೆಯಿಲ್ಲದೆ ಜನತೆಯ ಮುಂದಿಡಬೇಕು’
-ರಿಝ್ವಾನ್ ಅರ್ಶದ್ ಆಹಾರ ಸಚಿವ