ಬಸ್ ಟಿಕೆಟ್ ದರ ಏರಿಕೆ ಬೆನ್ನಲ್ಲೇ ಮಾಸಿಕ ಬಸ್ ಪಾಸ್ ದರವೂ ಹೆಚ್ಚಳ : ನ.7ರಿಂದ ಜಾರಿ
ಸಾಂದರ್ಭಿಕ ಚಿತ್ರ
ಬೆಂಗಳೂರು: ಬಸ್ ಪ್ರಯಾಣ ದರ ಏರಿಕೆ ಬೆನ್ನಲ್ಲೇ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಮಾಸಿಕ ಬಸ್ ಪಾಸ್ ದರಗಳನ್ನೂ ಪರಿಷ್ಕರಿಸಿದೆ. ಪರಿಷ್ಕೃತ ದರಗಳು ನ.7ರಿಂದ ಜಾರಿಗೆ ಬರಲಿವೆ.
ನಿಗಮವು ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಿವಿಧ ವರ್ಗದ ಮಾಸಿಕ ಪಾಸ್‌ಗಳನ್ನು ವಿತರಿಸುತ್ತಿದೆ. ಪ್ರಯಾಣಿಕರ ಬಸ್ ಟಿಕೆಟ್ ದರ ಪರಿಷ್ಕರಣೆಯಾದ ಹಿನ್ನೆಲೆಯಲ್ಲಿ ನಿಗಮದ ಆರ್ಥಿಕ ಹಿತದೃಷ್ಟಿಯಿಂದ ಮಾಸಿಕ ಪಾಸ್‌ಗಳ ದರಗಳನ್ನೂ ಪರಿಷ್ಕರಿಸಲು ತೀರ್ಮಾನಿಸಲಾಗಿದೆ ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ವೇಗದೂತ ಹಾಗೂ ಸಾಮಾನ್ಯ ಸೇವೆಗಳ ಗ್ರಾಮಾಂತರ ಮಾರ್ಗಗಳ ಮಾಸಿಕ ಪಾಸ್‌ಗಳ ದರಗಳ ಜೊತೆಗೆ ಮೈಸೂರು, ಹಾಸನ, ತುಮಕೂರು ಮತ್ತು ಮಂಗಳೂರು ನಗರಗಳಲ್ಲಿ ವಿತರಿಸುವ ಮಾಸಿಕ ಪಾಸ್‌ಗಳ ದರಗಳನ್ನೂ ಪರಿಷ್ಕರಿಸಲಾಗಿದೆ. ಪರಿಷ್ಕೃತ ದರಗಳ ವಿವರಗಳನ್ನು ಅನುಬಂಧ-1 ಮತ್ತು ಅನುಬಂಧ-2ರಲ್ಲಿ ನೀಡಲಾಗಿದೆ.
ನ.7ರಿಂದ ಪರಿಷ್ಕೃತ ದರಗಳು ಜಾರಿಗೆ ಬರಲಿದ್ದು, ಪ್ರಸ್ತುತ ದಾಸ್ತಾನಿನಲ್ಲಿರುವ ಮಾಸಿಕ ಪಾಸ್‌ಗಳಿಗೆ ಸಾಮಾನ್ಯ ಸ್ಥಾಯಿ ಆದೇಶ ಸಂಖ್ಯೆ 798/2019ರಲ್ಲಿ ತಿಳಿಸಿರುವಂತೆ ಮರುಮುದ್ರೆ (ರೀ-ಸ್ಟ್ಯಾಂಪಿಂಗ್) ಹಾಕಿ ವಿತರಿಸಲು ಸೂಚಿಸಲಾಗಿದೆ. ಹೆಚ್ಚಿನ ಮುಖಬೆಲೆಯ ಪಾಸ್‌ಗಳನ್ನು ಕಡಿಮೆ ಮುಖಬೆಲೆಗೆ ಮರುಮುದ್ರೆ ಹಾಕುವ ಮೂಲಕ ವಿತರಿಸಬೇಕು. ಉಳಿದಂತೆ, ಹಿಂದಿನ ಆದೇಶದಲ್ಲಿನ ಇತರೆ ಎಲ್ಲ ನಿಯಮಾವಳಿಗಳು ಮುಂದುವರಿಯಲಿವೆ.
ಸುತ್ತೋಲೆಯನ್ನು ಜಾರಿಗೊಳಿಸಿದ ಬಗ್ಗೆ ಅನುಸರಣಾ ವರದಿ ಸಲ್ಲಿಸುವಂತೆಯೂ ನಿಗಮ ಸೂಚಿಸಿದೆ.