ಮಾನವ-ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ : ಸಿಎಂ ಸಿದ್ದರಾಮಯ್ಯ
ಬೆಂಗಳೂರು : ಮಾನವ, ಆನೆ ಸಂಘರ್ಷ ತಡೆಯುವುದರಿಂದ ಜೀವ ಹಾನಿ, ಬೆಳೆ ಹಾನಿ ತಪ್ಪುತ್ತದೆ. ಈ ಮಹತ್ವದ ಉದ್ದೇಶದಿಂದಲೇ ರಾಜ್ಯದಿಂದ ನಾಲ್ಕು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಬುಧವಾರ ಇಲ್ಲಿನ ವಿಧಾನಸೌಧದ ಪೂರ್ವದ್ವಾರದಲ್ಲಿ ಅರಣ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಕರ್ನಾಟಕದಿಂದ ಆಂಧ್ರಪ್ರದೇಶಕ್ಕೆ ಕೃಷ್ಣ, ಅಭಿಮನ್ಯು, ರಂಜನ್ ಮತ್ತು ದೇವ ಎಂಬ ನಾಲ್ಕು ಆನೆಗಳ ಹಸ್ತಾಂತರ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಮಾನವ ಆನೆ ಸಂಘರ್ಷ ತಡೆಗಟ್ಟಲು ಅಕ್ಕ ಪಕ್ಕದ ರಾಜ್ಯಗಳ ಸಹಕಾರ ಅಗತ್ಯ ಎಂದು ನುಡಿದರು.
ದೇಶದಲ್ಲೇ ಆನೆ ಸಂಪತ್ತು ಹೆಚ್ಚಾಗಿರುವ ರಾಜ್ಯ ನಮ್ಮದು. ಅಷ್ಟೇ ಮಾತ್ರವಲ್ಲದೆ, 3,695 ಆನೆಗಳು ನಮ್ಮಲ್ಲಿವೆ. ಅಲ್ಲದೆ, ಮಾನವ, ಆನೆ ಸಂಘರ್ಷ ತಡೆಯುವುದರಿಂದ ಜೀವ ಹಾನಿ, ಬೆಳೆ ಹಾನಿ ತಪ್ಪುತ್ತದೆ. ಈ ಮಹತ್ವದ ಉದ್ದೇಶದಿಂದಲೇ ರಾಜ್ಯದಿಂದ ಆರು ಕುಮ್ಕಿ ಆನೆಗಳನ್ನು ಆಂಧ್ರಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ತಿಳಿಸಿದರು.
ಅರಣ್ಯ ಸಚಿವ ಈಶ್ವರ ಖಂಡ್ರೆ ಮಾತನಾಡಿ, ನೆರೆ ರಾಜ್ಯಗಳೊಂದಿಗೆ ಉತ್ತಮ ಬಾಂಧವ್ಯಕ್ಕೆ ಇಂದಿನ ಈ ಆನೆಗಳ ಹಸ್ತಾಂತರ ಸಹಕಾರಿಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆಯಲ್ಲಿಯೂ ಗಣನೀಯ ಸುಧಾರಣೆ ತರಲಾಗಿದೆ. ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ಎದುರಿಸಲು ಮರ ಬೆಳೆಸುವುದೊಂದೇ ಪರಿಹಾರ ಎಂಬುದನ್ನು ಮನಗಂಡು ಕಳೆದ 2 ವರ್ಷದಲ್ಲಿ 8.5 ಕೋಟಿ ಸಸಿಗಳನ್ನು ನೆಟ್ಟು ಪೋಷಿಸಲಾಗಿದೆ ಎಂದರು.
ಅರಣ್ಯ ಒತ್ತುವರಿ ತೆರವಿಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ. ಪಕ್ಷಿ ಸಂಕುಲದ ಉಳಿವಿಗಾಗಿ ಅವುಗಳ ಸಂತಾನೋತ್ಪತ್ತಿಯ ತಾಣವಾದ ಬೆಂಗಳೂರು ನಗರದ ಹೆಸರಘಟ್ಟ ಕೆರೆ ಮತ್ತು ಸುತ್ತಮುತ್ತಲಿನ ಅಪರೂಪದ ಹುಲ್ಲುಗಾವಲನ್ನು ಸಂರಕ್ಷಿಸಲು 5678 ಎಕರೆ ಪ್ರದೇಶವನ್ನು ಗ್ರೇಟರ್ ಹೆಸರಘಟ್ಟ ಸಂರಕ್ಷಿತ ಹುಲ್ಲುಗಾವಲು ಎಂದು ಘೋಷಿಸಲಾಗಿದೆ ಎಂದು ಹೇಳಿದರು.
ಹಸಿರು ಹೊದಿಕೆ ಹೆಚ್ಚಿಸಲು ಕಳೆದ 2 ವರ್ಷದ ಅವಧಿಯಲ್ಲಿ 15,000 ಎಕರೆಗೂ ಹೆಚ್ಚು ಸರ್ಕಾರಿ ಭೂಮಿಯನ್ನು ಅಧಿಸೂಚಿತ ಅರಣ್ಯವೆಂದು ಘೋಷಿಸಲಾಗಿದೆ. ಅರಣ್ಯ ಅಪರಾಧಗಳನ್ನು ಪರಿಣಾಮಕಾರಿಯಾಗಿ ತಡೆಯಲು ಮತ್ತು ತಪ್ಪಿತಸ್ಥರಿಗೆ ಶಿಕ್ಷೆ ಆಗುವುದನ್ನು ಖಚಿತಪಡಿಸಲು ಗರುಡಾಕ್ಷಿ ಎಂಬ ಆನ್‍ಲೈನ್ ಎಫ್‍ಐಆರ್ ವ್ಯವಸ್ಥೆ ಜಾರಿಗೆ ತರಲಾಗಿದೆ ಎಂದರು.
ಶತಮಾನಗಳ ಹಿಂದೆ ಬೆಂಗಳೂರಿನಲ್ಲಿ ಲಾಲ್ ಬಾಗ್, ಕಬ್ಬನ್ ಪಾರ್ಕ್ ನಿರ್ಮಾಣವಾಗಿತ್ತು. ಆದಾದ ನಂತರ ಅಂತಹ ಬೃಹತ್ ಉದ್ಯಾನ ಮತ್ತೊಂದು ನಿರ್ಮಾಣ ಆಗಿರಲಿಲ್ಲ. ಉದ್ಯಾನ ನಗರಿ ಎಂಬ ಬೆಂಗಳೂರು ಖ್ಯಾತಿ ಉಳಿಸಲು ಯಲಹಂಕ ಬಳಿಯ ಮಾದಪ್ಪನ ಹಳ್ಳಿಯ 153 ಎಕರೆ ಪ್ರದೇಶದಲ್ಲಿ ಬೃಹತ್ ಉದ್ಯಾನ ನಿರ್ಮಾಣ ಮಾಡಲಾಗುತ್ತಿದೆ, ಈ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ಅವರು ಉಲ್ಲೇಖಿಸಿದರು.
ಅರಣ್ಯ ಸಂರಕ್ಷಣೆ ಮತ್ತು ವನ್ಯಜೀವಿ ಸಂರಕ್ಷಣೆಗಾಗಿ ಸಿಬ್ಬಂದಿ ನೇಮಕಕ್ಕೆ ಆದ್ಯತೆ ನೀಡಲಾಗಿದೆ ಎಂದ ಈಶ್ವರ ಖಂಡ್ರೆ, ಜನರ ಅಮೂಲ್ಯ ಜೀವ ಮತ್ತು ಬೆಳೆ ಉಳಿಸಲು 2023ರ ಜೂನ್ ವರೆಗೆ ರಾಜ್ಯದಲ್ಲಿ 312.918 ಕಿ.ಮೀ ಮಾತ್ರ ರೈಲ್ವೆ ಬ್ಯಾರಿಕೇಡ್ ಅಳವಡಿಸಲಾಗಿತ್ತು. ಆದರೆ ಕಳೆದ 2 ವರ್ಷದಲ್ಲಿ 115.085 ಕಿ.ಮೀ ರೈಲ್ವೆ ಬ್ಯಾರಿಕೇಡ್ ಕಾಮಗಾರಿ ಪೂರ್ಣಗೊಳಿಸಲಾಗಿದ್ದು, ಇನ್ನೂ 102.5 ಕಿ.ಮೀ. ರೈಲ್ವೆ ಬ್ಯಾರಿಕೇಡ್ ಅಳವಡಿಕೆಗೆ ಅನುಮೋದನೆ ನೀಡಲಾಗಿದೆ ಎಂದು ವಿವರ ನೀಡಿದರು.
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಕೆ.ಜೆ.ಜಾರ್ಜ್, ದಿನೇಶ್ ಗುಂಡೂರಾವ್, ರಹೀಂ ಖಾನ್, ಭೈರತಿ ಸುರೇಶ್, ಶಾಸಕ ರಿಝ್ವಾನ್ ಆರ್ಶದ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್ ಸೇರಿದಂತೆ ಪ್ರಮುಖರಿದ್ದರು.
ಆಂಧ್ರಪ್ರದೇಶಕ್ಕೆ ಹಸ್ತಾಂತರಿಸಿರುವ ಆನೆಗಳ ವಿವರ..!
* 2022ರಲ್ಲಿ ಚಿಕ್ಕಮಗಳೂರಿನಲ್ಲಿ ಸೆರೆ ಹಿಡಿಯಲಾಗಿದ್ದ 15 ವರ್ಷದ ಕೃಷ್ಣ
* 2023ರಲ್ಲಿ ಹೊನ್ನಾಳಿಯಲ್ಲಿ ಸೆರೆ ಹಿಡಿಯಲಾದ 14 ವರ್ಷದ ಅಭಿಮನ್ಯು
* 2019ರಲ್ಲಿ ಕುಶಾಲನಗರದಲ್ಲಿ ಸೆರೆ ಹಿಡಿದ 39 ವರ್ಷದ ದೇವ
* ದುಬಾರೆ ಶಿಬಿರದಲ್ಲೇ ಜನಿಸಿದ 26 ವರ್ಷದ ರಂಜನ್
ಒಟ್ಟು 8 ಆನೆ..!
ಆಂಧ್ರಪ್ರದೇಶ ಒಟ್ಟು 8 ಆನೆ ನೀಡುವಂತೆ ಮನವಿ ಮಾಡಿದ್ದು, ಕರ್ನಾಟಕ 6 ಆನೆ ನೀಡಲು ಸಮ್ಮತಿಸಿದೆ. ಬುಧವಾರ 4 ಆನೆಗಳನ್ನು ವಿಧ್ಯುಕ್ತವಾಗಿ ಹಸ್ತಾಂತರಿಸಲಾಗಿದೆ.
ಆನೆಗಳಿಂದ ಆಂಧ್ರಪ್ರದೇಶದ ವಿಘ್ನ ನಿವಾರಣೆಯಾಗಲಿ: "ಆನೆ ವಿನಾಯಕನ ಸ್ವರೂಪ. ಆಂಧ್ರಪ್ರದೇಶದ ಎಲ್ಲ ವಿಘ್ನಗಳನ್ನು ನಿವಾರಣೆ ಮಾಡಲಿ ಎಂದು ತರಬೇತುಗೊಂಡ ಆನೆಗಳನ್ನು ಆ ಸರಕಾರದವರಿಗೆ ಹಸ್ತಾಂತರ ಮಾಡುತ್ತಿದ್ದೇವೆ"
-ಡಿ.ಕೆ.ಶಿವಕುಮಾರ್, ಉಪಮುಖ್ಯಮಂತ್ರಿ