×
Ad

ದೇಶದ ನಾಲ್ಕನೇ ದೊಡ್ಡ ಆರ್ಥಿಕತೆಯನ್ನು ಹೊಂದಿರುವ ರಾಜ್ಯ ನಮ್ಮದು : ಸಿಎಂ ಸಿದ್ದರಾಮಯ್ಯ

Update: 2025-08-01 21:17 IST

ಹೊಸದಿಲ್ಲಿ: ಕರ್ನಾಟಕ ಕೇವಲ ಸಾಂಸ್ಕೃತಿಕ ಕೇಂದ್ರವಾಗಿಲ್ಲ. ಬದಲಿಗೆ ಅದೊಂದು ಆರ್ಥಿಕ ಶಕ್ತಿಕೇಂದ್ರ. 337 ಬಿಲಿಯನ್ ಡಾಲರ್ ಜಿಎಸ್‍ಡಿಪಿ ಹೊಂದಿರುವ ನಾವು ಭಾರತದ ನಾಲ್ಕನೇ ದೊಡ್ಡ ಆರ್ಥಿಕತೆಯನ್ನು ಹೊಂದಿದ್ದು, ರಾಷ್ಟ್ರದ ಜಿಡಿಪಿಗೆ ಶೇ.9ರಷ್ಟು ಕೊಡುಗೆಯನ್ನು ನೀಡುತ್ತಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಶುಕ್ರವಾರ ಹೊಸದಿಲ್ಲಿಯ ಐಟಿಸಿ ಮೌರ್ಯ ಹೊಟೇಲ್‍ನಲ್ಲಿ ರಾಜ್ಯ ಸರಕಾರದ ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಹಾಗೂ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ವತಿಯಿಂದ ಪ್ರಸಕ್ತ ಸಾಲಿನ ನವೆಂಬರ್ 18-20ರವರೆಗೆ ನಡೆಯಲಿರುವ ‘ಬೆಂಗಳೂರು ಟೆಕ್ ಸಮ್ಮಿಟ್-2025’ ಅಂಗವಾಗಿ ವಿವಿಧ ದೇಶಗಳ ಪ್ರತಿನಿಧಿಗಳು, ರಾಯಭಾರಿಗಳೊಂದಿಗೆ ಆಯೋಜಿಸಿದ್ದ ‘ಬ್ರಿಡ್ಜ್ ಟು ಬೆಂಗಳೂರು’ ಉನ್ನತಮಟ್ಟದ ಸಂವಾದ ಕಾರ್ಯಕ್ರಮವನ್ನು ಉದ್ದೇಶಿಸಿ ಅವರು ಮಾತನಾಡಿದರು.

ನಮ್ಮ ರಾಜಧಾನಿ ಬೆಂಗಳೂರು ಜಾಗತಿಕ ಟೆಕ್ ನಾಯಕನಾಗಿದ್ದು, ಪ್ರಪಂಚದಾದ್ಯಂತ ಪ್ರತಿಷ್ಠಿತ 15 ಸ್ಟಾರ್ಟ್ ಅಪ್ ಪರಿಸರ ವ್ಯವಸ್ಥೆಗಳಲ್ಲಿ ಒಂದು ಎಂದು ಗುರುತಿಸಲ್ಪಟ್ಟಿದೆ. 18 ಸಾವಿರಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಗಳಿಗೆ ಬೆಂಗಳೂರು ನೆಲೆಯಾಗಿದ್ದು, 50ಕ್ಕೂ ಹೆಚ್ಚು ಯೂನಿಕಾರ್ನ್‍ಗಳು ಮತ್ತು ಭಾರತದ ಶೇ.40ರಷ್ಟು ಸಾಮರ್ಥ್ಯ ಕೇಂದ್ರಗಳು, ಬಾಷೆ, ಇಂಟೆಲ್ ಮತ್ತು ಎಸ್‍ಎಪಿ ಕಂಪನಿಗಳ ಆರ್ ಅಂಡ್ ಡಿ ಕೇಂದ್ರಗಳನ್ನು ಹೊಂದಿದೆ ಎಂದು ಮುಖ್ಯಮಂತ್ರಿ ಹೇಳಿದರು.

ನಮ್ಮ ಬಿಯಾಂಡ್ ಬೆಂಗಳೂರು ಯೋಜನೆಯು ಮೈಸೂರು, ಮಂಗಳೂರು, ಹುಬ್ಬಳ್ಳಿ- ಧಾರವಾಡ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಬೆಳವಣಿಗೆಯನ್ನು ಪಸರಿಸುತ್ತಿದ್ದು, ಪ್ರತಿ ಪ್ರದೇಶವೂ ಏಳಿಗೆಯಾಗುವುದನ್ನು ಖಾತ್ರಿಪಡಿಸುತ್ತಿದೆ. ಕರ್ನಾಟಕದ ಯಶಸ್ಸು ಅದರ ಜನ ಹಾಗೂ ನೀತಿಗಳಿಂದಾಗಿ ದೊರೆತಿದೆ. ನಿಪುಣ ಕರ್ನಾಟಕ ಕಾರ್ಯಕ್ರಮಗಳ ಮೂಲಕ ನಾವು ಒಂದು ಲಕ್ಷಕ್ಕೂ ಹೆಚ್ಚು ಯುವಜನರಿಗೆ ಮೈಕ್ರೋಸಾಫ್ಟ್ ಮತ್ತು ಅಕ್ಸೆಂಚರ್ ನಂತಹ ಜಾಗತಿಕ ಸಂಸ್ಥೆಗಳ ಪಾಲುದಾರಿಕೆಯೊಂದಿಗೆ ಎಐ, ಸೈಬರ್ ಸೆಕ್ಯುರಿಟಿ ಮತ್ತು ಜೈವಿಕ ತಂತ್ರಜ್ಞಾನ ಕೌಶಲ್ಯಗಳಲ್ಲಿ ತರಬೇತಿ ನೀಡುತ್ತಿದ್ದೇವೆ ಎಂದು ಸಿದ್ದರಾಮಯ್ಯ ಹೇಳಿದರು.

ನಮ್ಮ ಶೈಕ್ಷಣಿಕ ಮತ್ತು ಸಂಶೋಧನಾ ಸಂಸ್ಥೆಗಳಾದ ಭಾರತೀಯ ವಿಜ್ಞಾನ ಸಂಸ್ಥೆ, ಐಐಎಂ ಬೆಂಗಳೂರು ಮತ್ತು ನ್ಯಾಷನಲ್ ಲಾ ಸ್ಕೂಲ್ ಆಫ್ ಇಂಡಿಯಾ ಯೂನಿವರ್ಸಿಟಿ ಸಂಸ್ಥೆಗಳನ್ನು ಜ್ಞಾನ ಮತ್ತು ನಾವೀನ್ಯತಾ ಕ್ಷೇತ್ರಗಳಿಗೆ ಅವು ನೀಡಿರುವ ಕೊಡುಗೆಗಳಿಗಾಗಿ ಜಾಗತಿಕವಾಗಿ ಗುರುತಿಸಲ್ಪಟ್ಟಿವೆ ಎಂದು ಅವರು ತಿಳಿಸಿದರು.

ಎಲೆಕ್ಟ್ರಾನಿಕ್ಸ್, ಅನಿಮೇಷನ್, ಗೇಮಿಂಗ್, ಗ್ರೀನ್ ಹೈಡ್ರೋಜನ್, ಪ್ರವಾಸೋದ್ಯಮ ಮತ್ತು ವಿದ್ಯುತ್ ಚಲನೆಗಳಲ್ಲಿ ಕರ್ನಾಟಕದ ಮುಂದಾಲೋಚನೆಯುಳ್ಳ ನೀತಿಗಳು ಸುಸ್ಥಿರ ಅಭಿವೃದ್ಧಿಗೆ ಸದೃಢ ಪರಿಸರ ವ್ಯವಸ್ಥೆಯನ್ನು ಒದಗಿಸುತ್ತದೆ. 2017 ರಲ್ಲಿ ಪ್ರಾರಂಭಿಸಲಾದ ಜಾಗತಿಕ ನಾವಿನ್ಯತಾ ಮೈತ್ರಿಯು ಕರ್ನಾಟಕವನ್ನು ವಿಶ್ವದೊಂದಿಗೆ ಬೆಸೆಯುವ ಸಂಪರ್ಕಸೇತುವಾಗಿದೆ ಎಂದು ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.

2018ರಲ್ಲಿ ವಿಶ್ವದ ಹತ್ತು ದೇಶದೊಂದಿಗಿನ ಮೈತ್ರಿ ಈಗ 35 ದೇಶಗಳಿಗೆ ವಿಸ್ತರಿಸಿದ್ದು, ಜರ್ಮನಿ, ಆಸ್ಟ್ರೇಲಿಯಾ, ಯುಕೆ, ಯುಎಸ್, ಜಪಾನ್, ಇಸ್ರೇಲ್, ಫ್ರಾನ್ಸ್, ಸೌತ್ ಕೊರಿಯಾ, ಫಿನ್‍ಲ್ಯಾಂಡ್ ಮತ್ತು ಸ್ವಿಟ್ಜರ್‍ಲ್ಯಾಂಡ್ ದೇಶಗಳು ಮೈತ್ರಿಯಲ್ಲಿವೆ. ಶಿಕ್ಷಣ, ಸಂಶೋಧನೆ, ಸ್ಮಾರ್ಟ್ ಸಿಟಿ, ಶುದ್ಧ ಇಂಧನ, ಪ್ರವಾಸೋದ್ಯಮ ಮತ್ತು ವ್ಯಾಪಾರಗಳಲ್ಲಿ ನಮ್ಮೊಂದಿಗೆ ಸಹಯೋಗ ಬೆಳೆಸಲು ಆಹ್ವಾನಿಸುತ್ತೇವೆ. ನಮ್ಮ ಜನರು ಹಾಗೂ ನಮ್ಮ ವಿಶ್ವಕ್ಕೆ ಲಾಭದಾಯಕವಾಗಿ ಪರಿಣಮಿಸುವ ಪರಿಹಾರಗಳನ್ನು ಒಟ್ಟಾಗಿ ಕಂಡುಕೊಳ್ಳೋಣ ಎಂದು ಅವರು ಕರೆ ನೀಡಿದರು.

ಕರ್ನಾಟಕವು, ಭಾರತದ ಐಟಿ ಕ್ಷೇತ್ರದ ರಫ್ತಿಗೆ ಸುಮಾರು 64 ಬಿಲಿಯನ್ ಡಾಲರ್ ನಷ್ಟು ಕೊಡುಗೆ ನೀಡಿದೆ. ಇದು ರಾಷ್ಟ್ರದ ಒಟ್ಟು ರಫ್ತಿನ ಮೂರನೇ ಒಂದು ಭಾಗವಾಗಿದೆ. ಎಐ ಕ್ಲಸ್ಟರ್ಸ್, ವಿದ್ಯುನ್ಮಾನ ಪಾರ್ಕ್ ಮತ್ತು ಜೈವಿಕ ನಾವಿನ್ಯತಾ ಹಬ್ ಗಳಲ್ಲಿ ರಾಜ್ಯ ಮುಂಚೂಣಿಯಲ್ಲಿದೆ. ಭವಿಷ್ಯದ ಡಿಜಿಟಲ್ ವಿಷಯಗಳಿಗೆ ಸನ್ನದ್ಧವಾಗುವತ್ತ ಕರ್ನಾಟಕವು ದೇಶದಲ್ಲಿಯೇ ಪ್ರಥಮ ರಾಜ್ಯವಾಗಿದ್ದು, ಅನಿಮೇಶನ್, ವಿಶುಯಲ್ ಎಫೆಕ್ಟ್ಸ್, ಗೇಮಿಂಗ್ ಮತ್ತು ಕಾಮಿಕ್ಸ್ ವಿಭಾಗದ ಉತ್ಕೃಷ್ಟತಾ ಕೇಂದ್ರವನ್ನು ಹೊಂದಿದೆ ಎಂದು ಸಿದ್ದರಾಮಯ್ಯ ವಿವರಿಸಿದರು.

ಸ್ಟಾರ್ಟ್ ಅಪ್ಸ್, ಜಾಗತಿಕ ಕಂಪನಿಗಳು, ವಿಶ್ವವಿದ್ಯಾಲಯಗಳು ಹಾಗೂ ನೀತಿನಿರೂಪಕರು ಒಟ್ಟಿಗೆ ಕಾರ್ಯನಿರ್ವಹಿಸುವಂತಹ ಪರಿಸರ ವ್ಯವಸ್ಥೆಯನ್ನು ಈ ಪ್ರಯತ್ನಗಳು ರೂಪಿಸಲಿವೆ. ನ.18ರಿಂದ 20 ರವರೆಗೆ ಬೆಂಗಳೂರು ಅಂತರ್ ರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ನಡೆಯಲಿರುವ ಬೆಂಗಳೂರು ಟೆಕ್ ಸಮಿಟ್‍ನಲ್ಲಿ ನಮ್ಮ ಈ ಯೋಜನೆಗಳಿಗೆ ಶಕ್ತಿ ತುಂಬಲಿವೆ ಎಂದು ಮುಖ್ಯಮಂತ್ರಿ ವಿಶ್ವಾಸ ವ್ಯಕ್ತಪಡಿಸಿದರು.

‘ಭವಿಷ್ಯೋದಯ’ ಎಂಬ ವಿಷಯವನ್ನು ಆಧರಿಸಿದ ಸಮಿಟ್ ನಲ್ಲಿ, ಕೃತಕ ವಿಜ್ಞಾನ, ಸೆಮಿಕಂಡಕ್ಟರ್ಸ್, ಆರೋಗ್ಯ ಹಾಗೂ ಹವಾಮಾನ ತಂತ್ರಜ್ಞಾನಗಳಲ್ಲಿ ಅನ್ವೇಷಣೆಗಳನ್ನು ಕೈಗೊಳ್ಳಲಾಗುವುದು. ಈ ವರ್ಷ ಸಮಿಟ್ ನಲ್ಲಿ ವಿಶ್ವದ 60 ದೇಶಗಳ ಸುಮಾರು 1200 ಪ್ರದರ್ಶಕರು, 600 ಭಾಷಣಕಾರರು ಹಾಗೂ 1 ಲಕ್ಷ ಜನರು ಭಾಗವಹಿಸುವ ನಿರೀಕ್ಷೆಯಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಕರ್ನಾಟಕ ಮತ್ತು ವಿಶ್ವದೊಂದಿಗಿನ ಬಾಂಧವ್ಯವನ್ನು ಬಲಪಡಿಸಲು ನಾವೆಲ್ಲ ಇಲ್ಲಿ ಸೇರಿದ್ದೇವೆ. ಈ ಮಾತುಕತೆಯು ಕೇವಲ ತಂತ್ರಜ್ಞಾನಕ್ಕೆ ಮಾತ್ರ ಸೀಮತವಾಗಿರದೇ ವ್ಯಾಪಾರ, ಪ್ರವಾಸೋದ್ಯಮ, ಶಿಕ್ಷಣ, ಸುಸ್ಥಿರತೆ ಮತ್ತು ನಾವೀನ್ಯತೆಯಲ್ಲಿ ಶಾಶ್ವತ ಪಾಲುದಾರಿಕೆಗಳನ್ನು ಸೃಷ್ಠಿಸುವ ಬಗ್ಗೆಯೂ ಚರ್ಚಿಸಲಿದೆ ಎಂದು ಮುಖ್ಯಮಂತ್ರಿ ಹೇಳಿದರು.

‘ಬೆಂಗಳೂರು ಟೆಕ್ ಸಮ್ಮಿಟ್ 2025’ಕ್ಕೆ ಈ ಸಂವಾದ ಕಾರ್ಯಕ್ರಮ ಮುನ್ನಡಿಯಾಗಿದೆ. ಇದು ನಾವೀನ್ಯತೆಗೆ ಏಷ್ಯಾದಲ್ಲಿಯೆ ಮುಂಚೂಣಿಯಲ್ಲಿರುವ ವೇದಿಕೆ. ಅದಕ್ಕೂ ಮಿಗಿಲಾಗಿ ಸಂಪರ್ಕ, ಸಹಯೋಗ ಮತ್ತು ಹಂಚಿಕೊಳ್ಳಬಹುದಾದ ಭವಿಷ್ಯವನ್ನು ರೂಪಿಸಲು ಇದೊಂದು ಸದಾವಕಾಶ ಎಂದು ಸಿದ್ದರಾಮಯ್ಯ ಹೇಳಿದರು.

ಸಂವಾದ ಕಾರ್ಯಕ್ರಮದಲ್ಲಿ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಇಲಾಖೆಯ ಸಚಿವ ಪ್ರಿಯಾಂಕ್ ಖರ್ಗೆ ಸೇರಿದಂತೆ ಇನ್ನಿತರ ಪ್ರಮುಖರು ಉಪಸ್ಥಿತರಿದ್ದರು.

ಕರ್ನಾಟಕ ಎಲ್ಲರನ್ನೊಳಗೊಳ್ಳುವ ಅಭಿವೃದ್ಧಿಯಲ್ಲಿ ಬದ್ಧತೆ ಹೊಂದಿದೆ. ನಮ್ಮ ಹೊಸ ನಾವಿನ್ಯಾತಾ ಜಿಲ್ಲೆಗಳಾದ ಬೆಂಗಳೂರು, ಮೈಸೂರು ಹಾಗೂ ಬೆಳಗಾವಿ ಯಲ್ಲಿ ಸಂಶೋಧನೆ ಹಾಗೂ ಉದ್ಯೋಗದಲ್ಲಿ ಪ್ರಗತಿ ಕಾಣಲಿವೆ. ಮಂಗಳೂರಿನಲ್ಲಿ ಫಿನ್ ಟೆಕ್ ಯೋಜನೆ ಹಾಗೂ ಹುಬ್ಬಳ್ಳಿ ಧಾರವಾಡದಲ್ಲಿ ಡ್ರೋನ್ ಅಭಿವೃದ್ಧಿ ಯೋಜನೆಗಳು ನಮ್ಮ ಸಮತೋಲಿತ ಬೆಳವಣಿಗೆಯಲ್ಲಿನ ದೂರದೃಷ್ಟಿಯನ್ನು ಬಿಂಬಿಸುತ್ತದೆ.

ಸಿದ್ದರಾಮಯ್ಯ, ಮುಖ್ಯಮಂತ್ರಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News