ದಿ. ಮಹಾಂತೇಶ್ ಬೀಳಗಿ ಪುತ್ರಿಗೆ ಸರಕಾರಿ ಉದ್ಯೋಗ| ಆದೇಶದ ಪ್ರತಿ ಹಸ್ತಾಂತರಿಸಿದ ಸಿಎಂ ಸಿದ್ದರಾಮಯ್ಯ
ಬೆಂಗಳೂರು, ಜ. 28: ರಸ್ತೆ ಅಪಘಾತದಲ್ಲಿ ನಿಧನರಾದ ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರ ಪುತ್ರಿ ಚೈತನ್ಯ ಬೀಳಗಿ ಅವರಿಗೆ ರಾಜ್ಯ ಸರಕಾರ ಅನುಕಂಪದ ಆಧಾರದ ಮೇಲೆ ಸರಕಾರಿ ಉದ್ಯೋಗ ನೀಡಿದೆ.
ಬುಧವಾರ ವಿಧಾನಸೌಧದಲ್ಲಿನ ಸಿಎಂ ಕಚೇರಿಯಲ್ಲಿ ಚೈತನ್ಯ ಬೀಳಗಿ ಅವರಿಗೆ ಸರಕಾರಿ ಉದ್ಯೋಗದ ಆದೇಶ ಪ್ರತಿ ಹಸ್ತಾಂತರಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ನಿಮ್ಮ ತಂದೆಯಂತೆಯೇ ಸಮಾಜಮುಖಿಯಾಗಿ ಕಾರ್ಯನಿರ್ವಹಿಸಬೇಕು’ ಎಂದು ಬೀಳಗಿಯವರ ಪುತ್ರಿಗೆ ಶುಭ ಹಾರೈಸಿದರು.
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಸರಕಾರದ ಅಧೀನ ಕಾರ್ಯದರ್ಶಿ ಮುಂದೆ ಹದಿನೈದು ದಿನಗಳಲ್ಲಿ ಕರ್ತವ್ಯಕ್ಕೆ ಹಾಜರಾಗತಕ್ಕದ್ದು ಎಂದು ಸೂಚಿಸಲಾಗಿದೆ. ಬೀಳಗಿ ಅವರು ಪುತ್ರಿ ಚೈತನ್ಯ ಬೀಳಗಿ ಅವರು ಸಚಿವಾಲಯದಲ್ಲಿ ಸಹಾಯಕ ಹುದ್ದೆಯನ್ನು ಪಡೆದಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಾಕಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ಹಿರಿಯ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಅವರು ಸೇವೆಯಲ್ಲಿರುವಾಗಲೇ ನಿಧನ ಹೊಂದಿದ ಹಿನ್ನೆಲೆಯಲ್ಲಿ ಅವರ ಪುತ್ರಿ ಚೈತನ್ಯಾ ಎಮ್. ಬೀಳಗಿ ಅವರಿಗೆ ಅನುಕಂಪದ ಆಧಾರದ ಮೇಲೆ ಸರಕಾರಿ ಉದ್ಯೋಗದ ನೇಮಕಾತಿ ಪತ್ರವನ್ನು ಹಸ್ತಾಂತರಿಸಿ, ತಂದೆಯಂತೆಯೇ ಸಮಾಜಮುಖಿಯಾಗಿ ಕರ್ತವ್ಯ ನಿರ್ವಹಿಸುವಂತೆ ಶುಭ ಕೋರಿದೆ’ ಎಂದು ಹೇಳಿದ್ದಾರೆ.
ಈ ವೇಳೆ ಕಾನೂನು ಸಚಿವ ಎಚ್.ಕೆ.ಪಾಟೀಲ್, ಬೃಹತ್ ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್, ಜವಳಿ ಸಚಿವ ಶಿವಾನಂದ ಪಾಟೀಲ್, ಕಾಂಗ್ರೆಸ್ ಪಕ್ಷದ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಸರಕಾರದ ಮುಖ್ಯ ಕಾರ್ಯದರ್ಶಿ ಡಾ.ಶಾಲಿನಿ ರಜನೀಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.