ವಿಧಾನ ಪರಿಷತ್‌ನಲ್ಲಿ ಸದನದ ಬಾವಿಗಿಳಿದು ವಿಪಕ್ಷದ ಸದಸ್ಯರಿಂದ ಧರಣಿ
ಬೆಂಗಳೂರು, ಜ.28: ಬುಧವಾರ ವಿಧಾನ ಪರಿಷತ್‍ನಲ್ಲಿ ರಾಜ್ಯಪಾಲರ ಭಾಷಣ ಕುರಿತು ಆಡಳಿತ ಪಕ್ಷದ ಸದಸ್ಯರು ಮಂಡಿಸಿದ ವಂದನಾ ನಿರ್ಣಯವನ್ನು ವಿರೋಧಿಸಿ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಧರಣಿಯನ್ನು ಮುಂದುವರೆಸಿದರು.
ಮಂಗಳವಾರ ನಡೆದ ಕಲಾಪದಲ್ಲಿ ರಾಜ್ಯಪಾಲರ ಭಾಷಣ ಕುರಿತ ವಂದನಾ ನಿರ್ಣಯದ ಮೇಲೆ ಕಾಂಗ್ರೆಸ್ ಸದಸ್ಯ ಐವಾನ್ ಡಿಸೋಜಾ ಚರ್ಚೆ ಆರಂಭಿಸಿದ್ದರು. ಹೀಗಾಗಿ ಬುಧವಾರದಂದು ಬೇರೆ ಸದಸ್ಯರು ಚರ್ಚೆ ಮುಂದುವರೆಸಲು ಹೋದಾಗ, ರಾಜ್ಯಪಾಲರ ಭಾಷಣ ಕುರಿತು ಖಂಡನೆ ವ್ಯಕ್ತಪಡಿಸಿದ ಸಂಬಂಧ ಆಡಳಿತ ಪಕ್ಷವು ವಿರೋಧ ವ್ಯಕ್ತಪಡಿಸಬೇಕು ಎಂದು ವಿಪಕ್ಷ ಸದಸ್ಯರು ಧರಣಿ ನಡೆಸಿದರು.
ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ‘ರಾಜ್ಯಪಾಲರು ಭಾಷಣ ಮಾಡಿಲ್ಲ ಎಂದಾದ ಮೇಲೆ, ವಂದನೆ ನಿರ್ಣಯ ಹೇಗಾಗುತ್ತದೆ? ಆಡಳಿತ ಪಕ್ಷದವರು ಮಾಡುತ್ತಿರುವುದು ವಂದನಾ ನಿರ್ಣಯವೋ ಅಥವಾ ಖಂಡನಾ ನಿರ್ಣಯವೋ? ಮೊದಲು ಸ್ಪಷ್ಟಪಡಿಸಬೇಕು’ ಎಂದು ಒತ್ತಾಯಿಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ರಾಷ್ಟ್ರಪತಿ ಹಾಗೂ ರಾಜ್ಯಪಾಲರನ್ನು ಟೀಕೆಗೆ ಒಳಪಡಿಸುವಂತಿಲ್ಲ. ಇದು ಎರಡೂ ಪಕ್ಷದ ಸದಸ್ಯರಿಗೆ ಅನ್ವಯಿಸಲಿದ್ದು, ನಿಯಮಗಳಲ್ಲಿ ಉಲ್ಲೇಖವಾಗಿದೆ. ಹೀಗಾಗಿ ಈ ಬಗ್ಗೆ ಗಮನಹರಿಸಬೇಕು. ನಿಯಮ ಮೀರಿದರೆ ಶಿಸ್ತು ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ನೀಡಿದರು.
ಸದನದ ಬಾವಿಗಿಳಿದು ಧರಣಿ ಮುಂದುವರೆಸಿದ್ದ ವಿಪಕ್ಷಗಳ ನಡೆಯನ್ನು ಕಾಂಗ್ರೆಸ್ ಸದಸ್ಯರು ಟೀಕಿಸಿದರು. ಸದನ ಹತೋಟಿಗೆ ಬಾರದಿರುವುದನ್ನು ಕಂಡು ಸಭಾಪತಿ ಬಸವರಾಜ ಹೊರಟ್ಟಿ ಕಲಾಪವನ್ನು ಮುಂದೂಡಿ, ಆಡಳಿತ ಹಾಗೂ ಪ್ರತಿಪಕ್ಷ ನಾಯಕರೊಡನೆ ತಮ್ಮ ಕೊಠಡಿಯಲ್ಲಿ ಹೊರಟ್ಟಿ ಸಂಧಾನ ಸಭೆ ನಡೆಸಿದರು. ಆದರೆ ಮತ್ತೆ ಕಲಾಪ ಆರಂಭವಾಗುತ್ತಿದ್ದಂತೆ ವಿಪಕ್ಷ ಸದಸ್ಯರು ಸದನದ ಬಾವಿಗಿಳಿದು ಧರಣಿ ಮುಂದುವರೆಸಿದರು.
ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ‘ಸಭಾ ನಾಯಕರು ಹೇಳಿರುವ ಖಂಡನಾ ನಿರ್ಣಯ ಪದವನ್ನು ಕಡತದಿಂದ ತೆಗೆಯುವಂತೆ ಆದೇಶಿಸಿದರು. ಈ ವೇಳೆ ಗದ್ದಲ ಹೆಚ್ಚಾದ ಹಿನ್ನೆಲೆಯಲ್ಲಿ ಸದನವನ್ನು ಮಂದೂಡಲಾಯಿತು.