ಮುಡಾ ಹಗರಣ| ಲೋಕಾಯುಕ್ತ ಪೊಲೀಸರ ಬಿ ರಿಪೋರ್ಟ್ ಅಂಗೀಕರಿಸಿದ ವಿಶೇಷ ನ್ಯಾಯಾಲಯ; ಸಿಎಂ ಸಿದ್ದರಾಮಯ್ಯಗೆ ನಿರಾಳ
ಬೆಂಗಳೂರು: ಮುಡಾ ಅಕ್ರಮ ನಿವೇಶನ ಹಂಚಿಕೆ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿ ನಾಲ್ವರು ಆರೋಪಿಗಳಿಗೆ ಕ್ಲೀನ್ ಚಿಟ್ ನೀಡಿ ಲೋಕಾಯುಕ್ತ ಪೊಲೀಸರು ಸಲ್ಲಿಸಿದ್ದ ಬಿ ವರದಿಯನ್ನು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಅಂಗೀಕರಿಸಿದೆ. ಇದರಿಂದ, ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದ್ದ ಪ್ರಕರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರಿಗೆ ದೊಡ್ಡ ಮಟ್ಟದ ಯಶಸ್ಸು ದೊರೆತಂತಾಗಿದೆ.
ಪ್ರಕರಣದ ಎ1 ಆರೋಪಿ ಸಿಎಂ ಸಿದ್ದರಾಮಯ್ಯ, ಎ2 ಆರೋಪಿ ಪತ್ನಿ ಬಿ.ಎಂ. ಪಾರ್ವತಿ, ಎ3 ಆರೋಪಿ ಭಾವಮೈದುನ ಬಿ.ಎಂ. ಮಲ್ಲಿಕಾರ್ಜುನ ಸ್ವಾಮಿ ಹಾಗೂ ಎ4 ಆರೋಪಿ ವಿವಾದಿತ ಜಮೀನಿನ ಮೂಲ ಮಾಲೀಕ ಜೆ. ದೇವರಾಜು ಅವರಿಗೆ ಕ್ಲೀನ್‌ಚಿಟ್ ನೀಡಿ ಲೋಕಾಯುಕ್ತ ಪೊಲೀಸರು 2025ರ ಫೆಬ್ರವರಿ 20ರಂದು ಸಲ್ಲಿಸಿದ್ದ ಬಿ ವರದಿಯನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸಂತೋಷ್ ಗಜಾನನ್ ಭಟ್ ಅವರು ಬುಧವಾರ ಪುರಸ್ಕರಿಸಿದ್ದಾರೆ.
ಇದೇ ವೇಳೆ, ಪ್ರಕರಣ ಇತರ ಆರೋಪಿಗಳ ವಿರುದ್ಧ ತನಿಖಾಧಿಕಾರಿಗಳು ನಡೆಸುತ್ತಿರುವ ಹೆಚ್ಚಿನ ತನಿಖೆಯು ಮುಂದುವರಿಯುತ್ತದೆ ಮತ್ತು ತನಿಖೆ ಪೂರ್ಣಗೊಂಡ ನಂತರ ಅಂತಿಮ ವರದಿ ಸಲ್ಲಿಸಬೇಕು ಎಂದು ತನಿಖಾಧಿಕಾರಿಗಳಿಗೆ ನ್ಯಾಯಾಲಯ ನಿರ್ದೇಶಿಸಿದೆ. ಜತೆಗೆ, ಪ್ರಕರಣದ ತನಿಖಾಧಿಕಾರಿಯ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಜರುಗಿಸುವಂತೆ ಕೋರಿ ದೂರುದಾರ ಸ್ನೇಹಮಯಿ ಕೃಷ್ಣ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಾಲಯ ತಿರಸ್ಕರಿಸಿದೆ.
ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲಾಗಿದ್ದ ಕೇಸ್ ಡೈರಿ (ಸಿಡಿ) ಕಡತಗಳು ಹಾಗೂ ಅಂತಿಮ ವರದಿಯ ಕರಡು ಪ್ರತಿಯನ್ನು ಸಂಬಂಧಪಟ್ಟ ತನಿಖಾಧಿಕಾರಿಗೆ ಹಿಂತಿರುಗಿಸಲು ಕಚೇರಿಗೆ ನಿರ್ದೇಶಿಸಿರುವ ನ್ಯಾಯಾಲಯ, ಅಂತಿಮ ವರದಿ ಸಲ್ಲಿಕೆಗಾಗಿ ಪ್ರಕರಣವನ್ನು ಫೆಬ್ರವರಿ 9ಕ್ಕೆ ನಿಗದಿಪಡಿಸಿದೆ.