×
Ad

ಮೈತ್ರಿ ಪಕ್ಷಗಳ ನಡುವೆ ಬಿಕ್ಕಟ್ಟು ಸೃಷ್ಟಿಸಲು ಕಾಂಗ್ರೆಸ್ ವಿಫಲ ಪ್ರಯತ್ನ: ಎಚ್.ಡಿ. ಕುಮಾರಸ್ವಾಮಿ

Update: 2026-06-20 21:07 IST

 ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ 

ಬೆಂಗಳೂರು: ವಿಧಾನ ಪರಿಷತ್ ಚುನಾವಣೆಯಲ್ಲಿ ನಡೆದ ಅಡ್ಡ ಮತದಾನದಿಂದ ಜೆಡಿಎಸ್ ಮತ್ತು ಬಿಜೆಪಿ ಮೈತ್ರಿಯಲ್ಲಿ ಬಿರುಕು ಉಂಟಾಗುವುದಿಲ್ಲ. ಈ ಚುನಾವಣೆ ಮುಂದಿನ ವಿಧಾನಸಭೆ ಚುನಾವಣೆಗೆ ದಿಕ್ಸೂಚಿಯೂ ಅಲ್ಲ ಹಾಗೂ ನಮ್ಮ ನಡುವೆ ಬಿಕ್ಕಟ್ಟು ಸೃಷ್ಟಿಸಲು ಕಾಂಗ್ರೆಸ್ ವಿಫಲ ಪ್ರಯತ್ನ ನಡೆಸುತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಶನಿವಾರ ಪಕ್ಷದ ರಾಜ್ಯ ಕಚೇರಿ ಜೆ.ಪಿ.ಭವನದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ನಮ್ಮ ಅಭ್ಯರ್ಥಿಯನ್ನು ನಿಲ್ಲಿಸುವುದಕ್ಕೆ ಮೊದಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹಾಗೂ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಆರ್.ಅಶೋಕ್ ಅವರೊಂದಿಗೆ ಚರ್ಚೆ ನಡೆಸಿ, ಅವರೆಲ್ಲರ ಸಹಮತದಿಂದ ಅಭ್ಯರ್ಥಿಯನ್ನು ಹಾಕಲಾಯಿತು. ಹೀಗಾಗಿ ನಮ್ಮ ಮೈತ್ರಿಯಲ್ಲಿ ಬಿರುಕು ಬರುವ ಪ್ರಶ್ನೆ ಇಲ್ಲ ಎಂದರು.

ಮೂರು ವರ್ಷಗಳಿಂದ ನಮ್ಮ ಶಾಸಕರಿಗೆ ಕ್ಷೇತ್ರಗಳಲ್ಲಿ ಸರಿಯಾಗಿ ಕೆಲಸಗಳು ಆಗಿಲ್ಲ. ಕಾರ್ಯಕರ್ತರು ಹಾಗೂ ಸಾರ್ವಜನಿಕರ ಒತ್ತಡದ ಕಾರಣಕ್ಕೆ ಜನರಿಗೆ ಮುಖ ತೋರಿಸುವುದು ಕಷ್ಟವಾಗುತ್ತಿದೆ ಎಂದು ಶಾಸಕರು ಹೇಳುತ್ತಿದ್ದಾರೆ. ಇದು ನಮ್ಮ ಪಕ್ಷದ ಶಾಸಕರ ಪರಿಸ್ಥಿತಿ ಅಷ್ಟೇ ಅಲ್ಲ, ಬಿಜೆಪಿ ಮತ್ತು ಕಾಂಗ್ರೆಸ್ ಶಾಸಕರ ಪರಿಸ್ಥಿತಿಯೂ ಇದೇ ಆಗಿದೆ. ಕಾಂಗ್ರೆಸ್ ಅಭ್ಯರ್ಥಿಗೆ ಮತ ಕೊಟ್ಟರೆ 50 ಕೋಟಿ ರೂ. ಕೊಡುತ್ತೇವೆ, ಜೊತೆಗೆ 100 ಕೋಟಿ ರೂ. ಅನುದಾನ ಕೊಡುತ್ತೇವೆಂದು ಆಮಿಷ ಒಡ್ಡಿದ್ದಾರೆ. ಆ ಆಮಿಷಗಳು ಚುನಾವಣೆಯಲ್ಲಿ ಕೆಲಸ ಮಾಡಿವೆ ಎಂದು ಅವರು ಆರೋಪ ಮಾಡಿದರು.

ಬಿಡದಿ ಟೌನ್ ಶಿಪ್ ಬಗ್ಗೆ ವಿಧಾನಸಭೆಯಲ್ಲಿ ಈ ಹಿಂದೆಯೇ ಚರ್ಚೆ ಆಗಿತ್ತು. ನನ್ನ ಕಾಲದಲ್ಲಿ ಐದು ಟೌನ್‍ಶಿಪ್ ಮಾಡುವ ವಿಚಾರದ ಬಗ್ಗೆ ವಿಸ್ತೃತ ಚರ್ಚೆ ನಡೆದಿತ್ತು. ಅದಕ್ಕೆ ಪ್ರತಿಯಾಗಿ ಕಾಂಗ್ರೆಸ್ ಸತ್ಯಶೋದನಾ ಸಮಿತಿ ಬೇರೆ ರಚಿಸಿತ್ತು. ಆ ಬಗ್ಗೆ ನಾನು ಅಂದಿನ ಮುಖ್ಯಮಂತ್ರಿ ಆಗಿ ಏನು ಹೇಳಿದ್ದೇನೆ ಎಂಬುದು ದಾಖಲೆಯಲ್ಲಿದೆ. ರೈತರ ಒಂದಿಂಚೂ ಫಲತ್ತಾದ ಭೂಮಿ ಸ್ವಾಧೀನ ಮಾಡುವ ವಿಚಾರ ಇಲ್ಲ ಎಂದಿದ್ದೇನೆ. ನಾಡಿದ್ದು ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಹೇಳುತ್ತೇನೆ. ಆಗ ನನ್ನ ಜತೆ ಇದ್ದು, ಈ ಯೋಜನೆಯನ್ನು ವಿರೋಧಿಸಿದವರು ಇವತ್ತು ಬೇರೆ ಪಕ್ಷದಲ್ಲಿದ್ದು ಮಾತು ಬದಲಿಸುತ್ತಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News