×
Ad

ಪಂಚರಾಜ್ಯಗಳ ಜನರಿಗೆ ಕಾಂಗ್ರೆಸ್ 'ಸುಳ್ಳು ಗ್ಯಾರಂಟಿಗಳ' ಮಂಕುಬೂದಿ ಎರಚುತ್ತಿದೆ: ಎಚ್.ಡಿ.ಕುಮಾರಸ್ವಾಮಿ

Update: 2023-11-12 19:06 IST

ಬೆಂಗಳೂರು: ಕರ್ನಾಟಕದಲ್ಲಿ ಜಾರಿ ಮಾಡಿರುವ ಸುಳ್ಳುಪೊಳ್ಳಿನ ಗ್ಯಾರಂಟಿ ಯೋಜನೆಗಳನ್ನು ಇಡೀ ದೇಶಕ್ಕೆ ವಿಸ್ತರಿಸಿ ಜನರಿಗೆ ಮಂಕುಬೂದಿ ಎರಚಲು ಕಾಂಗ್ರೆಸ್ ಹುನ್ನಾರ ನಡೆಸಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಆರೋಪಿಸಿದ್ದಾರೆ. 

ರವಿವಾರ ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಕರೆಯಲಾಗಿದ್ದ ತುರ್ತು ಮಾಧ್ಯಮಗೋಷ್ಠಿಯಲ್ಲಿ ಮಾಜಿ ಮುಖ್ಯಮಂತ್ರಿಗಳು ಮಾತನಾಡಿದರು.

ನೆರೆಯ ತೆಲಂಗಾಣ ಸೇರಿ ವಿಧಾನಸಭೆ ಚುನಾವಣೆ ನಡೆಯುತ್ತಿರುವ ಐದೂ ರಾಜ್ಯಗಳ ಮತದಾರರು ಯಾವುದೇ ಕಾರಣಕ್ಕೂ ಕಾಂಗ್ರೆಸ್ ಸುಳ್ಳು ಭರವಸೆಗಳಿಗೆ ಮರುಳಾಗಬಾರದು ಎಂದು ನಾನು ಮನವಿ ಮಾಡುತ್ತೇನೆ. ಕರ್ನಾಟಕದಲ್ಲಿ ಈ ಗ್ಯಾರಂಟಿಗಳು ಸಂಪೂರ್ಣ ವಿಫಲಗೊಂಡು ಜನ ಹಿಡಿಶಾಪ ಹಾಕುತ್ತಿದ್ದಾರೆ ಎಂದು ಅವರು ದೂರಿದರು. 

'ಚುನಾವಣೆ ವೇಳೆ ಅಬ್ಬರದ ಪ್ರಚಾರ ಮಾಡಿ ಜನತೆ ದಿಕ್ಕುತಪ್ಪಿಸಿ ಕರ್ನಾಟಕದಲ್ಲಿ ಜಾರಿ ಮಾಡಿರುವ ʼಗೃಹಜ್ಯೋತಿʼ, ʼಗೃಹಲಕ್ಷ್ಮೀʼ, ʼಶಕ್ತಿʼ, ʼಅನ್ನಭಾಗ್ಯʼ ಗ್ಯಾರಂಟಿ ಯೋಜನೆಗಳು ಗುರಿ ಮುಟ್ಟಿಲ್ಲ. ಇನ್ನೊಂದು ಗ್ಯಾರಂಟಿ ʼಯುವನಿಧಿʼ ಐದು ತಿಂಗಳಾದರೂ ಜಾರಿ ಆಗಿಲ್ಲ. ಕರ್ನಾಟಕದ ಜನರಿಗೆ ಗ್ಯಾರಂಟಿ ಹೆಸರಿನಲ್ಲಿ ಕಿವಿಗೆ ಹೂ ಮುಡಿಸುತ್ತಿದೆ ಕಾಂಗ್ರೆಸ್. ಈಗ ಐದು ರಾಜ್ಯಗಳ ಜನರ ಕಿವಿಗೆ ಹೂ ಮುಡಿಸಲು ಹೊರಟಿದ್ದಾರೆ. ಚುನಾವಣೆ ನಡೆಯುತ್ತಿರುವ ರಾಜ್ಯಗಳ ಜನರಿಗೆ ಕಾಂಗ್ರೆಸ್ ಗ್ಯಾರಂಟಿಗಳ ಸಾಧಕ-ಬಾಧಕ ತಿಳಿಸುವುದು ನನ್ನ ಕರ್ತವ್ಯ' ಎಂದು ಕುಮಾರಸ್ವಾಮಿ ಹೇಳಿದರು.

ಕಾಂಗ್ರೆಸ್ ಪಕ್ಷವು ಕರ್ನಾಟಕದ ಟೆಂಪರರಿ ಸಿಎಂ (TCM), ಡೂಪ್ಲಿಕೇಟ್‌ ಸಿಎಂ (DCM) ಅವರನ್ನು ತೆಲಂಗಾಣಕ್ಕೆ ಕಳಿಸಿ ಜನರಿಗೆ ಸುಳ್ಳುಗಳನ್ನು ಹೇಳಿಸುತ್ತಿದೆ ಎಂದು ಅವರು ಆರೋಪಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News