×
Ad

ಪರಸ್ಪರ ಸಮ್ಮತಿಯಿದ್ದರೂ ವಿಚ್ಛೇದನಕ್ಕೆ 18 ತಿಂಗಳು ಕಾಯಬೇಕು: ಹೈಕೋರ್ಟ್

Update: 2023-12-07 20:57 IST

Photo: PTI

ಬೆಂಗಳೂರು: ಹಿಂದೂ ವಿವಾಹ ಕಾಯಿದೆಯಡಿ ಪರಸ್ಪರ ಸಮ್ಮತಿಯ ಮೇರೆಗೆ ದಂಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರೂ ವಿಚಾರಣಾ ನ್ಯಾಯಾಲಯ ಅರ್ಜಿಯನ್ನು ಏಕಾಏಕಿ ವಜಾಗೊಳಿಸದೆ 18 ತಿಂಗಳು ಕಾಯಬೇಕಾಗುತ್ತದೆ ಎಂದು ಹೈಕೋರ್ಟ್ ಆದೇಶಿಸಿದೆ.

ದಂಪತಿ ವಿಚ್ಛೇದನ ಕೋರಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಮಾಡಿರುವ ಹೈಕೋರ್ಟ್ ವಿಭಾಗೀಯಪೀಠ, ದಂಪತಿಗೆ ಬೆಂಗಳೂರು ಮಧ್ಯಸ್ಥಿಕೆ ಕೇಂದ್ರಕ್ಕೆ ತೆರಳುವಂತೆ ನಿರ್ದೇಶನ ನೀಡಿತು.

ಇದರ ಜತೆಗೆ ಮಧ್ಯಸ್ಥಿಕೆ ಕೇಂದ್ರವು ವಿಚಾರಣಾ ನ್ಯಾಯಾಲಯಕ್ಕೆ ಮಧ್ಯಸ್ಥಿಕೆ ವರದಿಯನ್ನು ಸಲ್ಲಿಸಬೇಕು. ಆ ವರದಿ ಆಧರಿಸಿ ವಿಚಾರಣಾ ನ್ಯಾಯಾಲಯ ಕಾನೂನು ಪ್ರಕಾರ ವಿಚ್ಛೇದನ ಅರ್ಜಿಯನ್ನು ಇತ್ಯರ್ಥಪಡಿಸಬಹುದು ಎಂದು ತಿಳಿಸಿದೆ. ಅಲ್ಲದೆ, ಪಕ್ಷಗಾರರ ಮನವಿ ಇಲ್ಲದೆ ವಿಚಾರಣಾ ನ್ಯಾಯಾಲಯ ತನ್ನಷ್ಟಕ್ಕೆ ತಾನೇ ಅರ್ಜಿ ವಜಾಗೊಳಿಸಬಾರದು ಎನ್ನುವುದನ್ನೂ ಸಹ ಪೀಠ ಹೇಳಿದೆ.

ಹಿಂದೂ ವಿವಾಹ ಕಾಯಿದೆ ಸೆಕ್ಷನ್ 13ಬಿ ಅನ್ವಯ, ದಂಪತಿಗಳು ಅರ್ಜಿ ಸಲ್ಲಿಸುವ ಮುನ್ನ ಒಂದು ವರ್ಷ ಪ್ರತ್ಯೇಕವಾಗಿ ವಾಸವಿರಬೇಕು. ಪಕ್ಷಗಾರರು ಜೊತೆಯಲ್ಲಿ ವಾಸ ಮಾಡುವಂತಿಲ್ಲ. ಇಬ್ಬರೂ ಪರಸ್ಪರ ವಿವಾಹ ಸಂಬಂಧ ಮುರಿದುಕೊಳ್ಳಲು ಒಪ್ಪಿರಬೇಕು. ಅರ್ಜಿ ಸಲ್ಲಿಸಿದ ಆರು ತಿಂಗಳವರೆಗೆ ಅವರು ಆ ಅರ್ಜಿಯನ್ನು ನ್ಯಾಯಾಲಯ ಮುಂದೆ ಮಂಡಿಸುವಂತಿಲ್ಲ ಎಂದು ಪೀಠ ತಿಳಿಸಿದೆ.

ಆದರೆ, ಈ ಪ್ರಕರಣದಲ್ಲಿ ಅರ್ಜಿಯನ್ನು ವಿಚಾರಣಾ ನ್ಯಾಯಾಲಯ ಕೇವಲ 9 ತಿಂಗಳಿಗೆ ವಜಾಗೊಳಿಸಿದೆ. ನಿಗದಿಯಂತೆ ಪ್ರಕರಣದ ಇತ್ಯರ್ಥಕ್ಕೆ 18 ತಿಂಗಳು ಕಾಲಾವಕಾಶ ಇದೆ. ಆದರೆ ಅದಕ್ಕೂ ಮುನ್ನ ವಿಚಾರಣಾ ನ್ಯಾಯಾಲಯ ಸೆಕ್ಷನ್ 13 ಬಿ(2) ಅನ್ನು ಪಾಲನೆ ಮಾಡಿಲ್ಲ. ಹೀಗಾಗಿ, ವಿಚಾರಣಾ ನ್ಯಾಯಾಲಯ ತಪ್ಪೆಸಗಿದೆ ಎಂದು ನ್ಯಾಯಪೀಠ ಹೇಳಿತು.

ಪ್ರಕರಣವೇನು?: ಅರ್ಜಿದಾರ ದಂಪತಿ 2020ರ ನ.27ರಂದು ಮದುವೆಯಾಗಿದ್ದರು. 2021ರ ಸೆಪ್ಟಂಬರ್ ತಿಂಗಳಿನಿಂದ ಪ್ರತ್ಯೇಕವಾಗಿ ಜೀವನ ನಡೆಸುತ್ತಿದ್ದರು. ಇಬ್ಬರು ವಿವಾಹ ಬಂಧನ ತೊಡೆದುಕೊಳ್ಳಲು ಹಿಂದೂ ವಿವಾಹ ಕಾಯ್ದೆ ಸೆಕ್ಷನ್ 13 ಬಿ ಅನ್ವಯ, ತಮ್ಮಿಬ್ಬರ ನಡುವಿನ ಸಂಬಂಧ ಮುರಿದುಬಿದ್ದಿದ್ದು, ಪರಸ್ಪರ ಒಪ್ಪಿಗೆ ಮೇರೆಗೆ ವಿವಾಹ ವಿಚ್ಛೇದನ ಪಡೆದುಕೊಳ್ಳುವುದಾಗಿ ಅರ್ಜಿ ಸಲ್ಲಿಸಿದ್ದರು.

ದಂಪತಿ ಪರಸ್ಪರ ಒಪ್ಪಿಗೆ ಮೇಲೆ ವಿಚ್ಛೇದನ ಪಡೆಯುವುದಾಗಿ ಹೇಳಿದ್ದರು. ಆದರೆ ನ್ಯಾಯಾಲಯ ಮತ್ತೆ ಒಂದುಗೂಡುವ ಸಾಧ್ಯತೆಗಳ ಬಗ್ಗೆ ಪರಿಶೀಲನೆ ಮಾಡಿ ಎಂದು ಪ್ರಕರಣವನ್ನು ಮಧ್ಯಸ್ಥಿಕೆ ಕೇಂದ್ರಕ್ಕೆ ವರ್ಗಾಯಿಸಿತ್ತು. ಮಧ್ಯಸ್ಥಿಕೆದಾರರು ಇಬ್ಬರ ನಡುವೆ ಸಹಮತ ಮೂಡಿಸಿ ಮತ್ತೆ ಒಗ್ಗೂಡಿಸಲು ಪ್ರಯತ್ನಿಸಿದರಾದರೂ ಅದು ಫಲ ನೀಡಲಿಲ್ಲ.

ಈ ನಡುವೆ ಇಬ್ಬರೂ ಮಧ್ಯಸ್ಥಿಗೆ ಗೈರು ಹಾಜರಾಗಿದ್ದರು. ಹೀಗಾಗಿ, ಮಧ್ಯಸ್ಥಿಕೆ ಕೇಂದ್ರ ವರದಿಯನ್ನು ಸಲ್ಲಿಸಿತ್ತು. ಅದನ್ನು ಆಧರಿಸಿ ವಿಚಾರಣಾ ನ್ಯಾಯಾಲಯ, ದಂಪತಿಗೆ ಈ ಪ್ರಕರಣವನ್ನು ಮುನ್ನಡೆಸಲು ಆಸಕ್ತಿ ಇಲ್ಲ ಎಂದು ದಾಖಲಿಸಿ ಪ್ರಕರಣ ರದ್ದುಗೊಳಿಸಿತ್ತು. ಇದನ್ನು ಪ್ರಶ್ನಿಸಿ ಇಬ್ಬರೂ ಹೈಕೋರ್ಟ್‍ನಲ್ಲಿ ಮೇಲ್ಮನವಿ ಸಲ್ಲಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News