×
Ad

ನ್ಯಾಯಾಲಯದ ಆದೇಶ ಜಾರಿಗೆ ಲಂಚ: ಪೀಣ್ಯ ಪೊಲೀಸ್ ಠಾಣೆಯ ಕಾನ್‍ಸ್ಟೆಬಲ್ ಬಂಧನ

Update: 2023-06-30 20:51 IST

ಬಂಧಿತ ಕಾನ್ಸ್ಟೆಬಲ್ 

ಬೆಂಗಳೂರು, ಜೂ.30: ಕರಿಯೊಬನಹಳ್ಳಿಯಲ್ಲಿ ಕಟ್ಟಡ ಕಾಮಗಾರಿಗೆ ಅಡ್ಡಿಪಡಿಸದಂತೆ ನ್ಯಾಯಾಲಯ ನೀಡಿದ್ದ ಪ್ರತಿಬಂಧಕಾಜ್ಞೆಯನ್ನು ಜಾರಿಗೆ ತರಲು 1.5 ಲಕ್ಷ ರೂ. ಲಂಚ ಪಡೆಯುತ್ತಿದ್ದ ಪೀಣ್ಯ ಪೆÇಲೀಸ್ ಠಾಣೆಯ ವಿಶೇಷ ಘಟಕದ ಕಾನ್‍ಸ್ಟೆಬಲ್ ಮಾರೇಗೌಡ ಎನ್. ಅವರನ್ನು ಲೋಕಾಯುಕ್ತ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ನಾಗಸಂದ್ರ ಬಳಿಯ ನೆಲಗೆದರನಹಳ್ಳಿ ನಿವಾಸಿ ಗವಿರಾಜ್ ಗೌಡ ಎಂಬುವವರು ಬಿಬಿಎಂಪಿ ವಾರ್ಡ್ ಸಂಖ್ಯೆ 40ರ ವ್ಯಾಪ್ತಿಯ ಕರಿವೋಬನಹಳ್ಳಿಯಲ್ಲಿದ್ದ ತಮ್ಮ ನಿವೇಶನವೊಂದರ 20/40 ಚದರಡಿಯ ಭಾಗವನ್ನು ಟಿ.ದಾಸರಹಳ್ಳಿಯ ವಿದ್ಯಾನಗರ ನಿವಾಸಿ ದಿನೇಶ್ ಕೆ.ಎಲ್. ಅಲಿಯಾಸ್ ಅಭಿನವ್ ಎಂಬುವವರಿಗೆ ಮಾರಾಟ ಮಾಡಿದ್ದರು. ಅದರಲ್ಲಿ ದಿನೇಶ್ ಕೆ.ಎಲ್. ಕಟ್ಟಡ ನಿರ್ಮಾಣ ಕಾಮಗಾರಿ ಆರಂಭಿಸಿದ್ದರು.

ಕೋಕಿಲಾ ಮತ್ತು ಲಕ್ಷ್ಮಣ್ ರೆಡ್ಡಿ ಎಂಬುವವರು ಸದರಿ ನಿವೇಶನ ತಮ್ಮದೆಂದು ತಗಾದೆ ತೆಗೆದಿದ್ದರು. ಕಟ್ಟಡ ನಿರ್ಮಾಣವನ್ನು ಸ್ಥಗಿತಗೊಳಿಸುವಂತೆ ಒತ್ತಡ ಹೇರುತ್ತಿದ್ದರು. ದಿನೇಶ್ ಕೆ.ಎಲ್. ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು. ಪ್ರತಿವಾದಿಗಳಾದ ಕೋಕಿಲಾ ಮತ್ತು ಲಕ್ಷ್ಮಣ್ ರೆಡ್ಡಿ ನಿವೇಶನದ ಒಳಕ್ಕೆ ಪ್ರವೇಶಿಸದಂತೆ ನ್ಯಾಯಾಲಯ ತಾತ್ಕಾಲಿಕ ಪ್ರತಿಬಂಧಕಾಜ್ಞೆ ನೀಡಿತ್ತು.

ನ್ಯಾಯಾಲಯದ ಆದೇಶದೊಂದಿಗೆ ಪೀಣ್ಯ ಪೊಲೀಸ್ ಠಾಣೆಗೆ ದೂರು ನೀಡಿದ್ದ ಗವಿರಾಜ್, ಕಟ್ಟಡ ನಿರ್ಮಾಣ ಮುಂದುವರಿಸಲು ದಿನೇಶ್ ಕೆ.ಎಲ್. ಅವರಿಗೆ ರಕ್ಷಣೆ ಒದಗಿಸುವಂತೆ ಮನವಿ ಮಾಡಿದ್ದರು. ರಕ್ಷಣೆ ಒದಗಿಸಲು 3 ಲಕ್ಷ ರೂ. ಲಂಚ ನೀಡುವಂತೆ ಮಾರೇಗೌಡ ಎನ್. ಬೇಡಿಕೆ ಇಟ್ಟಿದ್ದರು. ಆ ಬಳಿಕ ಚೌಕಾಸಿ ನಡೆಸಿದ್ದು, 1.5 ಲಕ್ಷ ರೂ. ನೀಡಿದರೆ ರಕ್ಷಣೆ ಒದಗಿಸುವ ಭರವಸೆ ನೀಡಿದ್ದರು. ಈ ಕುರಿತು ಗವಿರಾಜ್ ಲೋಕಾಯುಕ್ತದ ಬೆಂಗಳೂರು ನಗರ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು ಎಂದು ಲೋಕಾಯುಕ್ತದ ಅಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಯ ಸೂಚನೆಯಂತೆ ಗವಿರಾಜ್ ಎಂಬುವರು ಹಣದೊಂದಿಗೆ ಶುಕ್ರವಾರ ಸಂಜೆ ಪೀಣ್ಯ ಠಾಣೆ ಬಳಿಯ ಕೆಫೆ ಒಂದರಲ್ಲಿ ಮಾರೇಗೌಡರನ್ನು ಭೇಟಿಯಾಗಿದ್ದಾರೆ. ಈ ವೇಳೆ ಆರೋಪಿಯು 1.5 ಲಕ್ಷ ರೂ. ಪಡೆಯುವಾಗ ದಾಳಿ ಮಾಡಿದ ಲೋಕಾಯುಕ್ತದ ಪೊಲೀಸರ ತಂಡ, ಮಾರೇಗೌಡ ಎನ್. ಅವರನ್ನು ಬಂಧಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News