×
Ad

2025ನೆ ಸಾಲಿನ ಜನಸಂದಣಿ ನಿಯಂತ್ರಣ ವಿಧೇಯಕ ಮಂಡನೆ; 7 ವರ್ಷಗಳವರೆಗೆ ಜೈಲು, ಒಂದು ಕೋಟಿ ರೂ.ವರೆಗೆ ದಂಡ ವಿಧಿಸಲು ಅವಕಾಶ

Update: 2025-08-20 21:49 IST

ಸಾಂದರ್ಭಿಕ ಚಿತ್ರ

ಬೆಂಗಳೂರು: ಆರ್‌ಸಿಬಿ ವಿಜಯೋತ್ಸವದ ಸಂದರ್ಭದಲ್ಲಿ ಸಂಭವಿಸಿದ ಕಾಲ್ತುಳಿತ ದುರಂತದಿಂದಾಗಿ ಎಚ್ಚೆತ್ತುಕೊಂಡಿರುವ ಸರಕಾರ, ಕಾನೂನು ಬಾಹಿರವಾಗಿ ಗುಂಪುಗೂಡುವುದನ್ನು ಪ್ರತಿಬಂಧಿಸಲು ಮತ್ತು ಅಪರಾಧ ದಂಡನೆಗಾಗಿ ಉಪಬಂಧಗಳನ್ನು ಕಲ್ಪಿಸಲು 2025ನೆ ಸಾಲಿನ ಕರ್ನಾಟಕ ಜನಸಂದಣಿ ನಿಯಂತ್ರಣ(ಕಾರ್ಯಕ್ರಮಗಳು ಮತ್ತು ಗುಂಪು ಗೂಡುವ ಸ್ಥಳಗಳಲ್ಲಿ ಜನಸಂದಣಿ ನಿರ್ವಹಣೆ) ವಿಧೇಯಕವನ್ನು ಮಂಡಿಸಿದೆ.

ಬುಧವಾರ ವಿಧಾನಸಭೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಮಂಡಿಸಿದ ಈ ವಿಧೇಯಕದಲ್ಲಿ ಯಾವುದೆ ಅನುಮತಿ ಪಡೆಯದೆ ಕಾರ್ಯಕ್ರಮ ಅಥವಾ ಸಮಾರಂಭವನ್ನು ಯಾರಾದರೂ ಆಯೋಜಿಸಿದಲ್ಲಿ ಅಥವಾ ಆಯೋಜಿಸಲು ಪ್ರಯತ್ನಿಸಿದಲ್ಲಿ, ದುಷ್ಪ್ರೇರಣೆ ಮಾಡಿದಲ್ಲಿ, ಕನಿಷ್ಠ ಮೂರು ವರ್ಷಗಳು ಮತ್ತು ಏಳು ವರ್ಷಗಳ ಅವಧಿಯವರೆಗೆ ವಿಸ್ತರಿಸಬಹುದಾದ ಕಾರಾವಾಸ ಅಥವಾ ಒಂದು ಕೋಟಿ ರೂ.ವರೆಗಿನ ದಂಡ ಅಥವಾ ಅವೆರಡನ್ನು ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಸುಳ್ಳು ವದಂತಿಗಳು, ಹೇಳಿಕೆಗಳು, ಕೃತ್ಯಗಳನ್ನು ಸೃಷ್ಟಿಸುವ ಮೂಲಕ ಅಥವಾ ಸಾಮೂಹಿಕ ಹಿಂಸಾಚಾರದ ಬೆದರಿಕೆ, ಸ್ವತ್ತಿನ ನಾಶ ಅಥವಾ ಇತರ ಕಾನೂನು ಬಾಹಿರ ಕೃತ್ಯಗಳನ್ನು ಒಳಗೊಂಡಂತೆ ಯಾವುದೇ ಶಾಂತಿ ಭಂಗವನ್ನು ಉಂಟು ಮಾಡುವ, ಕ್ರಮಬದ್ಧ ಜನಸಂದಣಿಗೆ ತೊಂದರೆಯುಂಟು ಮಾಡಲು ಪ್ರೇರೇಪಿಸುವವರಿಗೆ ಮೂರು ವರ್ಷಗಳವರೆಗೆ ವಿಸ್ತರಿಸಬಹುದಾದ ಕಾರಾವಾಸ, ಐವತ್ತು ಸಾವಿರ ರೂ.ದಂಡ ವಿಧಿಸಲು ಅವಕಾಶ ಕಲ್ಪಿಸಲಾಗಿದೆ.

ಜನಸಂದಣಿ ವಿಪತ್ತಿಗೆ ಕಾರಣರಾಗುವ ವ್ಯಕ್ತಿ ಅಥವಾ ವ್ಯಕ್ತಿಗಳ ಕೃತ್ಯ, ನಿರ್ಲಕ್ಷ್ಯ, ಅಜಾಗರೂಕತೆಯು ಸ್ವತ್ತು ಅಥವಾ ಜೀವಹಾನಿಗೆ ಕಾರಣವಾದರೆ, ಆತನ ವಿರುದ್ಧ ದೈಹಿಕಗಾಯಗಳಿಗಾಗಿ ಕನಿಷ್ಠ ಮೂರು ವರ್ಷ ಮತ್ತು ಏಳುವರ್ಷಗಳವರೆಗಿನ ಕಾರಾವಾಸ ಹಾಗೂ ಪ್ರಾಣಹಾನಿ ಪ್ರಕರಣಗಳಿಗೆ ಕನಿಷ್ಠ 10 ವರ್ಷಗಳಿಂದ ಜೀವಾವಧಿ ಶಿಕ್ಷೆಗೆ ಗುರಿಯಾಗಿಸಲು ವಿಧೇಯಕದಲ್ಲಿ ಅವಕಾಶ ಕಲ್ಪಿಸಲಾಗಿದೆ.

ಕಾರ್ಯಕ್ರಮ ಅಥವಾ ಗುಂಪುಗೂಡುವ ಸ್ಥಳದ ವ್ಯಾಪ್ತಿಯ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ ಮತ್ತು ಅದಕ್ಕಿಂತ ಮೇಲಿನ ದರ್ಜೆಯ ಅಧಿಕಾರಿಗಳು ಜನಸಂದಣಿ ನಿಯಂತ್ರಣ ಮತ್ತು ನಿರ್ವಹಣೆಯ ಪ್ರಾಧಿಕಾರಿಯಾಗಿರುತ್ತಾರೆ. ಕಾರ್ಯಕ್ರಮ ಅಥವಾ ಸಮಾರಂಭ ಆಯೋಜಿಸುವವರು ಇವರಿಂದ ಅನುಮತಿ ಪಡೆಯಬೇಕು.

ಜನಸಂದಣಿ ಏಳು ಸಾವಿರಕ್ಕಿಂತ ಕಡಿಮೆಯಿದ್ದರೆ ಪೊಲೀಸ್ ಠಾಣೆಯ ಉಸ್ತುವಾರಿ ಅಧಿಕಾರಿ, ಏಳು ಸಾವಿರಕ್ಕಿಂತ ಹೆಚ್ಚು ಮತ್ತು ಐವತ್ತು ಸಾವಿರಕ್ಕಿಂತ ಕಡಿಮೆ ಜನಸಂದಣಿ ಇದ್ದರೆ, ಆ ಅಧಿಕಾರ ವ್ಯಾಪ್ತಿಯಲ್ಲಿನ ಪೊಲೀಸ್ ಉಪ ಅಧೀಕ್ಷಕರು, ಐವತ್ತು ಸಾವಿರಕ್ಕಿಂತ ಹೆಚ್ಚಿದ್ದರೆ ಪೊಲೀಸ್ ಅಧೀಕ್ಷಕ ಅಥವಾ ಪೊಲೀಸ್ ಆಯುಕ್ತರು ಆಯೋಜಕರ ಅರ್ಜಿಯ ಮೇರೆಗೆ ಸೂಕ್ತ ವಿಚಾರಣೆ ಬಳಿಕ ಅನುಮತಿ ನೀಡಬಹುದು.

ಆಯೋಜಕರು ಉದ್ದೇಶಿತ ಕಾರ್ಯಕ್ರಮ ಅಥವಾ ಸಮಾರಂಭದ ಪೂರ್ಣ ವಿವರಗಳೊಂದಿಗೆ 10 ದಿನಗಳ ಮೊದಲು ಅರ್ಜಿ ಸಲ್ಲಿಸಬೇಕು. ಜನಸಂದಣಿ ಸುಗಮ ಸಂಚಾರಕ್ಕಾಗಿ ಅಳವಡಿಸಿಕೊಂಡಿರುವ ಕ್ರಮಗಳ ವಿವರ ಒದಗಿಸಬೇಕು. ಸಾರ್ವಜನಿಕ ಅಥವಾ ಖಾಸಗಿ ಸ್ವತ್ತಿಗೆ ಹಾನಿ ಉಂಟಾದರೆ ಅದರ ನಷ್ಟ ಭರಿಸಲು ಆಯೋಜಕರು ಬದ್ಧವಾಗಿರಬೇಕು. ಜನಸಂದಣಿ ವಿಪತ್ತಿನಿಂದಾಗಿ ಮಾನವ ಪ್ರಾಣಹಾನಿಯನ್ನು ಒಳಗೊಂಡಂತೆ ಸಂಭವಿಸುವ ಯಾವುದೆ ಕಾನೂನು ಬಾಹಿರ ಘಟನೆಗೆ ಆಯೋಜಕರು ಹೊಣೆಗಾರರಾಗಿರಬೇಕು.

ಜನಸಂದಣಿಯ ಸುರಕ್ಷತೆಗಾಗಿ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಲೋಕೋಪಯೋಗಿ ಇಲಾಖೆ, ಪೊಲೀಸ್(ಸಂಚಾರಿ) ಇಲಾಖೆ ಮುಂತಾದ ಇತರ ಇಲಾಖೆಗಳಿಂದ ಪಡೆದ ನಿರಾಕ್ಷೇಪಣಾ ಪ್ರಮಾಣಪತ್ರದ ಕುರಿತು ಅನುಮತಿ ನೀಡುವ ಪ್ರಾಧಿಕಾರಿ ವಿಚಾರಣೆ ನಡೆಸಬೇಕು.

ಇತರ ವಿಧೇಯಕಗಳು:

2025ನೆ ಸಾಲಿನ ಕರ್ನಾಟಕ ಅಕ್ರಮ ಗಣಿಗಾರಿಕೆ ಮತ್ತು ಅಪರಾಧದ ಉತ್ಪತ್ತಿಗಳಿಂದಾದ ಸ್ವತ್ತನ್ನು ವಶಪಡಿಸಿಕೊಳ್ಳುವುದಕ್ಕಾಗಿ ಮತ್ತು ಜಪ್ತಿಗಾಗಿ ವಸೂಲಾತಿ ಆಯುಕ್ತರ ನೇಮಕಾತಿ ವಿಧೇಯಕ.

2025ನೆ ಸಾಲಿನ ಕರ್ನಾಟಕ ಸಾಂಪ್ರದಾಯಿಕ ಅಲೆಮಾರಿ ಕುರಿಗಾಹಿಗಳ(ಕ್ಷೇಮಾಭಿವೃದ್ಧಿ ಕ್ರಮಗಳು ಮತ್ತು ದೌರ್ಜನ್ಯಗಳ ವಿರುದ್ಧ ರಕ್ಷಣೆ) ವಿಧೇಯಕ

2025ನೆ ಸಾಲಿನ ಕರ್ನಾಟಕ ಲಿಫ್ಟ್‍ಗಳ, ಎಸ್ಕಲೇಟರ್ ಗಳ ಮತ್ತು ಪ್ಯಾಸೆಂಜರ್ ಕನ್ವೇಯರ್‍ಗಳ(ತಿದ್ದುಪಡಿ) ವಿಧೇಯಕ

2025ನೆ ಸಾಲಿನ ಕರ್ನಾಟಕ ಭೂ ಕಂದಾಯ(ಎರಡನೆ ತಿದ್ದುಪಡಿ) ವಿಧೇಯಕವನ್ನು ವಿಧಾನಸಭೆಯಲ್ಲಿ ಮಂಡಿಸಲಾಯಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News