×
Ad

ನ.1ರ ಒಳಗಾಗಿ ಜಿಬಿಎ ಪಾಲಿಕೆಗಳ ಚುನಾವಣೆ ಪೂರ್ವಭಾವಿ ಸಿದ್ಧತೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-08-06 22:09 IST

ಬೆಂಗಳೂರು : "ನವೆಂಬರ್ 1 ರ ಒಳಗಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಐದು ಪಾಲಿಕೆಗಳ ಚುನಾವಣೆ ಪೂರ್ವಸಿದ್ಧತೆ ಮಾಡಲಾಗುವುದು. ನೋಂದಣಿ ನಿಯಮಗಳನ್ನು ಯಾವ ರೀತಿ ರೂಪಿಸಬೇಕು ಎಂಬ ಬಗ್ಗೆ ಚುನಾವಣಾ ಆಯೋಗದ ಅಭಿಪ್ರಾಯ ಕೇಳಲಾಗುವುದು" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕೆಪಿಸಿಸಿ ಕಚೇರಿಯಲ್ಲಿ ಪಕ್ಷದ ಮುಖಂಡರ ಸಭೆಯ ನಂತರ ಶಿವಕುಮಾರ್ ಅವರು ಮಾಧ್ಯಮಗಳಿಗೆ ಬುಧವಾರ ಪ್ರತಿಕ್ರಿಯೆ ನೀಡಿದರು.

"ಚುನಾವಣೆಯ ಮತದಾನದ ಹಕ್ಕನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂದು ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಮಾರ್ಗದರ್ಶನ ನೀಡಿದ್ದೇವೆ. ಬ್ಲಾಕ್ ಅಧ್ಯಕ್ಷರು ಹಾಗೂ ಶಾಸಕರನ್ನು ಕರೆದು ಮತ್ತೊಂದು ಸುತ್ತಿನ ಸಭೆ ನಡೆಸಲಾಗುವುದು" ಎಂದರು.

ಮುಖ್ಯಮಂತ್ರಿಯವರು ಇಂಡಿಯಾ ಒಕ್ಕೂಟ ಸಭೆಗೆ ತೆರಳುತ್ತಿರುವ ಬಗ್ಗೆ ಕೇಳಿದಾಗ, "ಇಂಡಿಯಾ ಒಕ್ಕೂಟದ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳಿಗೆ ಆಹ್ವಾನ ಬಂದಿದೆ. ನಾನು ಇಲ್ಲಿ ಪ್ರತಿಭಟನೆ ಸಭೆ ಸಿದ್ಧತೆಯ ಉಸ್ತುವಾರಿ ನೋಡಬೇಕು. ಅದಕ್ಕಾಗಿ ಇಲ್ಲೇ ಇರುತ್ತೇನೆ" ಎಂದರು.

"ಪ್ರತಿಯೊಂದು ಸಂದರ್ಭದಲ್ಲಿ ಬೆಂಗಳೂರು ಮತ್ತು ಕರ್ನಾಟಕ ಈ ದೇಶಕ್ಕೆ ಪ್ರಬಲ ಸಂದೇಶವನ್ನು ನೀಡಿವೆ. ಇಂಡಿಯಾ ಒಕ್ಕೂಟ ಸಹ ಜನ್ಮ ತಳೆದಿದ್ದು ಬೆಂಗಳೂರಿನಲ್ಲಿ. ಕೋರ್ಟ್ ಆದೇಶ ಪಾಲನೆ ಮಾಡಬೇಕು ಎಂದು ಐತಿಹಾಸಿಕ ಸ್ಥಳವಾದ ಸ್ವಾತಂತ್ರ ಉದ್ಯಾನದಲ್ಲಿ ಮತಗಳ್ಳತನದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ" ಎಂದರು.

"ಸಚಿವರು, ಶಾಸಕರು ಹಾಗೂ ಪರಾಜಿತ ಅಭ್ಯರ್ಥಿಗಳು ಸೇರಿದಂತೆ ಬೆಂಗಳೂರು ಹೊರತುಪಡಿಸಿ ಪ್ರತಿ ಜಿಲ್ಲೆಯಿಂದ 50 ಜನ ಕಾರ್ಯಕರ್ತರು ಹಾಗೂ ನಾಯಕರು ಪ್ರತಿಭಟನೆಯಲ್ಲಿ ಭಾಗವಹಿಸಬೇಕು ಎಂದು ತಿಳಿಸಿದ್ದೇವೆ" ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News