×
Ad

ಹಸಿಕಸದಿಂದ ಗ್ಯಾಸ್ ಉತ್ಪಾದಿಸಲು ಗೇಲ್ ಸಂಸ್ಥೆ ಜೊತೆ ಒಪ್ಪಂದ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-10-16 21:57 IST

ಬೆಂಗಳೂರು, ಅ.16 : ಬೆಂಗಳೂರು ನಗರದಲ್ಲಿ ಉತ್ಪಾದನೆಯಾಗುವ ಸುಮಾರು 500 ಟನ್ ಹಸಿಕಸದಿಂದ ಗ್ಯಾಸ್ ಉತ್ಪಾದನೆ ಮಾಡಲು ಕೇಂದ್ರ ಸರಕಾರ ಸ್ವಾಮ್ಯದ ಗೇಲ್ ಸಂಸ್ಥೆಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.

ಗುರುವಾರ ವಿಧಾನಸೌಧದಲ್ಲಿ ಹಸಿಕಸದಿಂದ ಗ್ಯಾಸ್ ಉತ್ಪಾದನಾ ಘಟಕ ಸ್ಥಾಪನೆ ಕುರಿತು ಗೇಲ್ ಸಂಸ್ಥೆಯೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆ ಹಸ್ತಾಂತರಿಸಿ, ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

ಗೇಲ್ ಸಂಸ್ಥೆಯವರು 123 ಕೋಟಿ ರೂ.ವೆಚ್ಚದಲ್ಲಿ ಗ್ಯಾಸ್ ತಯಾರಿಕಾ ಘಟಕವನ್ನು ಸ್ಥಾಪನೆ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಈಗಾಗಲೇ ಸಂಸ್ಥೆಗೆ ಸ್ಥಳವನ್ನೂ ನೀಡಿದೆ. ಮೊದಲ ಬಾರಿಗೆ ಬೆಂಗಳೂರಿನಲ್ಲಿ ಈ ಪ್ರಯೋಗಕ್ಕೆ ಸರಕಾರ ಕೈ ಜೋಡಿಸಿದೆ. ಮುಂದಕ್ಕೂ ಹಲವಾರು ಒಪ್ಪಂದಗಳಿಗೆ ಈ ಸಂಸ್ಥೆಯ ಜೊತೆ ಒಡಂಬಡಿಕೆ ಮಾಡಿಕೊಳ್ಳಲು ಸಿದ್ಧವಿದ್ದೇವೆ ಎಂದು ಅವರು ತಿಳಿಸಿದರು.

ಇನ್ನು ಬಿಜೆಪಿ ನಾಯಕರು ಯಾರೂ ನನ್ನನ್ನು ಜೈಲಿಗೆ ಹೋಗು ಎಂದು ಹೇಳಿಲ್ಲ. ಈಗ ಇದರ ಬಗ್ಗೆ ಚರ್ಚೆ ಬೇಡ. ಈಗಾಗಲೇ ಇದೆಲ್ಲಾ ನಡೆದು 5ವರ್ಷಗಳೇ ಕಳೆದಿವೆ. ವಾಪಸ್ ನಮ್ಮ ಪಕ್ಷವೇ ಅಧಿಕಾರಕ್ಕೆ ಬಂದಿದೆ. ಎಲ್ಲರಿಗೂ ತಿಳಿದ ವಿಚಾರವನ್ನೇ ನಾನು ಮತ್ತೊಮ್ಮೆ ಹೇಳಿದ್ದೇನೆ. ಇದರಲ್ಲಿ ಕಟ್ಟುಕತೆ ಏನಿಲ್ಲ. ಅಧಿಕಾರಿಯ ಹೆಸರನ್ನು ಎಲ್ಲೆಂದರಲ್ಲಿ ಹೇಳುವುದಿಲ್ಲ. ಬಿಜೆಪಿಯವರು ಸದನದಲ್ಲಿ ಹೇಳಿ ಎಂದು ಪ್ರಶ್ನಿಸಲಿ ಅಲ್ಲಿ ಹೇಳುತ್ತೇನೆ. ಇದೆಲ್ಲಾ ದಾಖಲೆಗೆ ಹೋಗಬೇಕು. ಸದನದಲ್ಲಿ ಇರುವ ಶಾಸಕರಿಂದಲೇ ಯಾರು ಕರೆದಿದ್ದರು, ಯಾರು ಕರೆ ಮಾಡಿದ್ದರು ಎಂದು ಹೇಳಿಸುತ್ತೇನೆ ಎಂದು ಅವರು ಸವಾಲು ಹಾಕಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News