×
Ad

ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಸಲ್ಲಿಕೆ : ಡಿಸಿಎಂ ಡಿ.ಕೆ.ಶಿವಕುಮಾರ್

Update: 2025-11-18 21:22 IST

ಬೆಂಗಳೂರು: ಸುಪ್ರೀಂ ಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಮೇಕೆದಾಟು ಯೋಜನೆಗೆ ಹೊಸದಾಗಿ ಡಿಪಿಆರ್ ಅನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.

ಮಂಗಳವಾರ ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಮೇಕೆದಾಟು ಯೋಜನೆ ಅನುಷ್ಠಾನ ಕುರಿತು ಅಧಿಕಾರಿಗಳ ಸಭೆ ಹಾಗೂ ಕಾವೇರಿ ನೀರಾವರಿ ನಿಗಮ ನಿರ್ದೇಶಕರ ಮಂಡಳಿ ಸಭೆ ಬಳಿಕ ಮಾಧ್ಯಮಗಳ ಪ್ರಶ್ನೆಗಳಿಗೆ ಅವರು ಪ್ರತಿಕ್ರಿಯೆ ನೀಡಿದರು.

ಕಾವೇರಿ ನೀರಾವರಿ ನಿಗಮ ಮಂಡಳಿ ಸಭೆ ಮಾಡಲಾಗಿದೆ. ಇದಕ್ಕೆ ಮೊದಲು, ಮೇಕೆದಾಟು ಯೋಜನೆ ಕುರಿತ ಸುಪ್ರೀಂ ಕೋರ್ಟ್ ತೀರ್ಪು ನಂತರ ಈ ಯೋಜನೆಯನ್ನು ಹೇಗೆ ಮುಂದಕ್ಕೆ ತೆಗೆದುಕೊಂಡು ಹೋಗಬೇಕು ಎಂದು ಚರ್ಚೆ ಮಾಡಿದ್ದೇವೆ ಎಂದು ಅವರು ಹೇಳಿದರು.

ಡಿಪಿಆರ್ ಮರುಸಲ್ಲಿಕೆ ಮಾಡಬೇಕಿದೆ. ಇದರಲ್ಲಿ ಯೋಜನೆ ಸಂಪೂರ್ಣ ವಿವರ, ಎಷ್ಟು ಅರಣ್ಯ ಪ್ರದೇಶ ಮುಳುಗಡೆಯಾಗಲಿದೆ ಎಂದು ಮಾಹಿತಿ ನೀಡಬೇಕು. ಮೇಕೆದಾಟು ಯೋಜನೆ ಕಚೇರಿಯನ್ನು ಹಾರೋಬೆಲೆಯಲ್ಲಿ ಆರಂಭಿಸಿದ್ದೇವೆ. ಮಂಡ್ಯಕ್ಕೆ ಹತ್ತಿರವಾಗುವಂತೆ ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಸಿಇ, ಸಿಸಿಎಫ್ ಅವರನ್ನೊಳಗೊಂಡ ಪ್ರತ್ಯೇಕ ಕಚೇರಿ ಆರಂಭಿಸಲು ತೀರ್ಮಾನಿಸಿದ್ದೇವೆ. ಇದಕ್ಕೆ ಅಗತ್ಯ ಸಿಬ್ಬಂದಿ ಒದಗಿಸಲು ಸಿದ್ಧತೆ ಮಾಡಲಾಗುವುದು" ಎಂದು ಶಿವಕುಮಾರ್ ತಿಳಿಸಿದರು.

ಮತ್ತೆ ಹೊಸದಾಗಿ ಡಿಪಿಆರ್ ಮಾಡಬೇಕೇ, ಇದನ್ನು ಜಲ ಆಯೋಗದ ಮುಂದೆ ಮಂಡಿಸುವಿರಾ ಅಥವಾ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಮುಂದೆ ಮಂಡಿಸುತ್ತೀರಾ ಎಂದು ಕೇಳಿದ ಪ್ರಶ್ನೆಗೆ ಉತ್ತರಿಸಿದ ಉಪ ಮುಖ್ಯಮಂತ್ರಿ, "ಈ ಹಿಂದೆ ಸಲ್ಲಿಸಿದ್ದ ಡಿಪಿಆರ್ ತಿರಸ್ಕರಿಸಿದ್ದರು. ಹೀಗಾಗಿ ಅದರಲ್ಲಿದ್ದ ಲೋಪದೋಷಗಳನ್ನು ಸರಿಪಡಿಸಿ ಹೊಸದಾಗಿ ಡಿಪಿಆರ್ ಸಲ್ಲಿಸುತ್ತೇವೆ. ಕಾನೂನು ಪ್ರಕಾರ ಯಾರ ಮುಂದೆ ಮಂಡಿಸಬೇಕೋ ಅವರ ಮುಂದೆ ಮಂಡಿಸುತ್ತೇವೆ" ಎಂದರು.

ತುಮಕೂರಿಗೆ ಮೆಟ್ರೋ ಸಾಧ್ಯತೆಗಳ ಬಗ್ಗೆ ಅಧ್ಯಯನ:

ತುಮಕೂರು ಮೆಟ್ರೋ ಮಾರ್ಗಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಶಿವಕುಮಾರ್, ಅಲ್ಲಿನ ಜನಪ್ರತಿನಿಧಿಗಳು ನನ್ನ ಬಳಿ ಬಂದು ಮನವಿ ಮಾಡಿದಾಗ ನಾನು ಅದರ ಸಾಧ್ಯತೆಗಳ ಬಗ್ಗೆ ತಿಳಿಯಲು ಮುಂದಾಗಿದ್ದೇವೆ. ಇದರಲ್ಲಿ ಟೀಕೆ ಮಾಡುವಂತಹದ್ದು ಏನಿದೆ? ನಮ್ಮ ಗೃಹ ಸಚಿವರು ಸೇರಿದಂತೆ ಕೆಲವರು ಖಾಸಗಿ ಹಾಗೂ ಸಾರ್ವಜನಿಕ ಸಹಭಾಗಿತ್ವದಲ್ಲಿ ಮಾಡಬೇಕು ಎಂದು ಹೇಳುತ್ತಿದ್ದಾರೆ. ಇದಕ್ಕೆ ಯಾರಾದರೂ ಬಂಡವಾಳ ಹಾಕಲು ಮುಂದೆ ಬರುತ್ತಾರಾ? ಬಂದರೆ ಯಾವೆಲ್ಲಾ ಮಾರ್ಗ ಇವೆ ಎಂದು ಅಧ್ಯಯನ ಮಾಡಬೇಕಿದೆ. ಯಾರಾದರೂ ಚಂದ್ರಲೋಕಕ್ಕೆ ಹೋಗಬೇಕು ಎಂದರೆ ಅದು ಸಾಧ್ಯವೇ, ಇಲ್ಲವೇ ಎಂದು ಪರಿಶೀಲಿಸಬೇಕಲ್ಲವೇ" ಎಂದು ತಿಳಿಸಿದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News