ಸಿಎಂ, ಡಿಸಿಎಂ ವಿರುದ್ಧ ಅಪಪ್ರಚಾರ: ಬಿಜೆಪಿ ಜಾಲತಾಣಗಳ ವಿರುದ್ಧ ಕಾಂಗ್ರೆಸ್ ದೂರು
Photo Credit-Twitter@CMofKarnataka
ಬೆಂಗಳೂರು, ಅ.20: ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳ ವಿರುದ್ಧ ಸುಳ್ಳು ಕಪೋಲ ಕಲ್ಪಿತ ಹಾಗೂ ತೇಜೋವಧೆ ಮಾಡುವ ಮಾಹಿತಿಗಳನ್ನು ಹಂಚಿಕೊಳ್ಳುತ್ತಿರುವ ರಾಜ್ಯ ಬಿಜೆಪಿಯ ಸಾಮಾಜಿಕ ಜಾಲತಾಣಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ಕೆಪಿಸಿಸಿ ವಕ್ತಾರ ಎಲ್.ಸೂರ್ಯ ಮುಕುಂದರಾಜ್ ನಗರದ ಹೈಗ್ರೌಂಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಾಲ್ಕೈದು ದಿನಗಳ ಹಿಂದೆಯಷ್ಟೇ ನಡೆದ ಐಟಿ ದಾಳಿಯಲ್ಲಿ ಗುತ್ತಿಗೆದಾರರ ಮನೆಯಲ್ಲಿ ದೊರೆತ ಹಣವು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳಿಗೆ ಸೇರಿದ್ದು ಎಂಬಂತೆ ಬಿಂಬಿಸಿ ವ್ಯಂಗ್ಯ ಚಿತ್ರ ರಚಿಸಿ ಬಿಜೆಪಿ ತನ್ನ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿರುವುದು ಖಂಡನೀಯವಾಗಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ಅಧಿಕೃತ ಟ್ವಿಟರ್ ಖಾತೆಯನ್ನು ಸ್ಥಗಿತಗೊಳಿಸಿ ಕ್ರಮ ಕೈಗೊಳ್ಳಬೇಕೆಂದು ದೂರಿನಲ್ಲಿ ಒತ್ತಾಯಿಸಲಾಗಿದೆ.
ಐಟಿ ಇಲಾಖೆ ಹೊರಡಿಸಿರುವ ಮಾಧ್ಯಮ ಪ್ರಕಟನೆಯಲ್ಲಿ ಎಲ್ಲಿಯೂ ಕೂಡ ದಾಳಿಯಲ್ಲಿ ಸಿಕ್ಕ ಹಣವು ಸರಕಾರದ ಮಂತ್ರಿಗಳಿಗೆ ಅಥವಾ ಇಂಥವರಿಗೆ ಸಂಬಂಧಿಸಿದ್ದು ಎಂದು ಹೇಳಿಲ್ಲ. ತನಿಖೆ ಪೂರ್ಣಗೊಳ್ಳುವ ಮುನ್ನವೇ ರಾಜ್ಯ ಬಿಜೆಪಿ ಸಾಮಾಜಿಕ ಜಾಲತಾಣದಲ್ಲಿ ಸುಳ್ಳು ಮಾಹಿತಿಯನ್ನು ಹಂಚುವ ಮೂಲಕ ಸಾರ್ವಜನಿಕರಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.