ʼಧರ್ಮಸ್ಥಳ ದೂರಿʼನ ತನಿಖೆಯು ಹೈಕೋರ್ಟ್ ಮೇಲ್ವಿಚಾರಣೆಯಲ್ಲಿಯೇ ನಡೆಯಲಿ : ವಕೀಲರಿಂದ ಹೈಕೋರ್ಟ್ ಗೆ ಪಿಐಎಲ್
ಕರ್ನಾಟಕ ಹೈಕೋರ್ಟ್
ಬೆಂಗಳೂರು: ʼಧರ್ಮಸ್ಥಳ ಸರಣಿ ಹತ್ಯೆ ಆರೋಪʼ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣದ ತನಿಖೆಯನ್ನು ಪಕ್ಷಪಾತವಿಲ್ಲದೆ, ಮುಕ್ತ ಮತ್ತು ನ್ಯಾಯಯುತ ರೀತಿಯಲ್ಲಿ ನಡೆಸಲಾಗುತ್ತಿಲ್ಲ. ಹಾಗಾಗಿ ಹೈಕೋರ್ಟ್ ಮೇಲ್ವಿಚಾರಣೆಯಲ್ಲಿ ಪ್ರಕರಣದ ತನಿಖೆ ನಡೆಯಬೇಕು ಎಂದು ವಕೀಲರಾದ ಶ್ರೀರಾಮ್ ಟಿ.ನಾಯಕ್, ಗಣೇಶ್ ಪ್ರಸಾದ್ ಬಿ.ಎಸ್., ಗಣೇಶ್ ವಿ. ಮತ್ತು ಪೊನ್ನಣ್ಣ ಕೆ.ಎ ಅವರು ಕರ್ನಾಟಕ ಹೈಕೋರ್ಟ್ ಗೆ ಸೋಮವಾರ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ಜುಲೈ 3, 2025ರಂದು ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 39/2025 ದೂರ ದಾಖಲಾಗಿದೆ. ದೂರಿನಲ್ಲಿ ʼದೂರುದಾರʼ ಹೇಳಿರುವಂತೆ 1995 ರಿಂದ 2014ರ ನಡುವಿನ ಅವಧಿಯಲ್ಲಿ ನೂರಾರು ಅಪ್ರಾಪ್ತೆಯರು, ಮಹಿಳೆಯರನ್ನು ಅತ್ಯಾಚಾರ, ಕೊಲೆ ಮತ್ತು ಕ್ರೂರ ಚಿತ್ರಹಿಂಸೆ ಕೊಟ್ಟು ಶವಗಳನ್ನು ಧರ್ಮಸ್ಥಳದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಹೂಳಲಾಗಿದೆ ಅಥವಾ ಸುಟ್ಟು ಹಾಕಲಾಗಿದೆ. ಭಿಕ್ಷುಕರನ್ನೂ ಹತ್ಯೆ ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ದೂರುದಾರನು ತನಿಖಾ ಅಧಿಕಾರಿಗಳಿಗೆ, ಒಂದು ಶವದ ಅಸ್ಥಿಪಂಜರದ ಅವಶೇಷಗಳು ಹಾಗೂ ಸಮಾಧಿ ಸ್ಥಳದ ಚಿತ್ರಗಳನ್ನೂ ನೀಡಿದ್ದು, ತನಗೆ ಮತ್ತು ತನ್ನ ಕುಟುಂಬಕ್ಕೆ ಜೀವಭಯವಿರುವ ಹಿನ್ನೆಲೆಯಲ್ಲಿ 2018ರ ಸಾಕ್ಷಿ ರಕ್ಷಣಾ ಯೋಜನೆಯಡಿಯಲ್ಲಿ ರಕ್ಷಣೆ ಒದಗಿಸುವಂತೆಯೂ ಮನವಿ ಮಾಡಿದ್ದಾರೆ ಎಂದು ಪಿಐಎಲ್ ನಲ್ಲಿ ಉಲ್ಲೇಖಿಸಲಾಗಿದೆ.
ಪ್ರಕರಣವು ಸಾಮಾನ್ಯ ಅಪರಾಧವಲ್ಲ, ಇದು ವ್ಯವಸ್ಥಿತ, ದೊಡ್ಡ ಮಟ್ಟದ ಅಪರಾಧವಾಗಿದ್ದು, ನೂರಾರು ಮಂದಿ ಬಲಿಯಾದ ಶಂಕೆಯಿದೆ. ಆರೋಪಿಗಳು ರಾಜಕೀಯ, ಧಾರ್ಮಿಕ ಹಾಗೂ ಸಾಮಾಜಿಕವಾಗಿ ಪ್ರಭಾವಿ ವ್ಯಕ್ತಿಗಳು ಎಂದು ಆತನ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಅವರು ರಾಜ್ಯದಾದ್ಯಂತ ತಮ್ಮ ಅನುಯಾಯಿಗಳನ್ನು ಹೊಂದಿದ್ದು, ತನಿಖಾ ಪ್ರಕ್ರಿಯೆ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತಿದ್ದಾರೆ ಎಂದು ಹೈಕೋರ್ಟ್ ರಿಜಿಸ್ಟ್ರಾರ್ ಗೆ ಸಲ್ಲಿಸಿರುವ ಅರ್ಜಿಯಲ್ಲಿ ನಾಲ್ವರು ವಕೀಲರು ತಿಳಿಸಿದ್ದಾರೆ.
ಅಪರಾಧದ ಮಾಹಿತಿಯು ಬಹಳ ಗಂಭೀರವಾಗಿದ್ದು DNA ಪರೀಕ್ಷೆ, ಹಿಂದಿನ FIRಗಳ ಪರಿಶೀಲನೆ ಮುಂತಾದ ಕ್ರಮಗಳು ತಕ್ಷಣ ಕೈಗೊಳ್ಳಬೇಕಾದರೂ, FIR ದಾಖಲಾಗಿ 17 ದಿನಗಳಾದರೂ ಶವಗಳನ್ನು ಹೊರತೆಗೆದು ವೈದ್ಯಕೀಯ ಪರೀಕ್ಷೆಯನ್ನೂ ನಡೆಸಿಲ್ಲ. ಯಾವುದೇ ಆರೋಪಿಗಳನ್ನು ಬಂಧಿಸುವ ಪ್ರಯತ್ನವೂ ನಡೆದಿಲ್ಲ. ಇದು ಉದ್ದೇಶಿತ ವಿಳಂಬವೆಂದು ವಕೀಲರು ಆಕ್ಷೇಪಿಸಿದ್ದಾರೆ.
ಬಿಜೆಪಿ ಮುಖಂಡರು ಮತ್ತು ಸಚಿವರು ಪ್ರಕರಣದ ಕುರಿತು ನೀಡಿದ ಹೇಳಿಕೆಗಳು ತನಿಖೆಯ ನೈತಿಕತೆಗೆ ಧಕ್ಕೆ ತರುತ್ತಿವೆ. ಎಂಎಲ್‌ಸಿ ಸಿ.ಟಿ. ರವಿ ಪ್ರಸ್ತುತ ಪ್ರಕರಣವು ಧರ್ಮಸ್ಥಳದ ಪ್ರತಿಷ್ಠೆ ಹಾಳು ಮಾಡಲು ಬಳಸಲಾಗುತ್ತಿದೆ ಎಂದು ಹೇಳಿದ್ದಾರೆ. ಶಾಸಕ ಅರವಿಂದ್ ಬೆಲ್ಲದ್ ಅವರು ದೂರು ಆಧಾರರಹಿತ ಎಂದು ಟೀಕಿಸಿದ್ದಾರೆ.
ಇದೇ ವೇಳೆ, FIR ದಾಖಲಾದ ತಕ್ಷಣ ಗೃಹ ಸಚಿವ ಜಿ.ಪರಮೇಶ್ವರ್ ಅವರನ್ನು ಧರ್ಮಸ್ಥಳದ ಪ್ರಮುಖ ವ್ಯಕ್ತಿಯೊಬ್ಬರು ಭೇಟಿ ಮಾಡಿದ್ದರು. ವೈದ್ಯಕೀಯ ಕಾಲೇಜಿಗೆ ಸಂಬಂಧಿಸಿದ ವಿಚಾರವಾಗಿ ʼಪ್ರಮುಖ ವ್ಯಕ್ತಿʼ ತಮ್ಮನ್ನು ಭೇಟಿಯಾಗಿದ್ದಾರೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಹೇಳಿಕೆ ನೀಡಿದ್ದಾರೆ. ಆದರೆ ಡಾ.ಜಿ.ಪರಮೇಶ್ವರ್ ಅವರು ನಿರ್ವಹಿಸುತ್ತಿರುವುದು ಪೊಲೀಸ್ ಇಲಾಖೆಗೆ ಸಂಬಂಧಿತ ಗೃಹಖಾತೆ. ವೈದ್ಯಕೀಯ ಶಿಕ್ಷಣ ಸಂಬಂಧಿತ ಖಾತೆಯಲ್ಲ.
ಇದು ತನಿಖೆಯನ್ನು ನ್ಯಾಯಯುತ ಮತ್ತು ಮುಕ್ತ ರೀತಿಯಲ್ಲಿ ನಡೆಸುವಲ್ಲಿ ತನಿಖಾ ಪ್ರಾಧಿಕಾರದ ಮೇಲೆ ಪ್ರಭಾವ ಉಂಟುಮಾಡುತ್ತದೆ. ರಾಜ್ಯದ ಸಚಿವರೇ ಆರೋಪಿಗಳಿಗೆ ನೇರವಾಗಿ ಅಥವಾ ಪರೋಕ್ಷವಾಗಿ ಬೆಂಬಲ ನೀಡುತ್ತಿರುವಾಗ, ಮುಕ್ತ ಮತ್ತು ನ್ಯಾಯಯುತ ತನಿಖೆಯನ್ನು ಹೇಗೆ ನಡೆಸಬಹುದು? ಪ್ರಭಾವಿ ಆರೋಪಿಗಳು ಅಧಿಕಾರದಲ್ಲಿರುವವರಿಗೆ ತನಿಖೆಯ ದಿಕ್ಕು ತಪ್ಪಿಸಲು ಹಣ ಅಥವಾ ಪ್ರಭಾವ ಬಳಸಿದರೆ, ಅತ್ಯಾಚಾರ ಮತ್ತು ಕೊಲೆಯಂತಹ ಅಮಾನವೀಯ ಕೃತ್ಯಗಳಿಗೆ ಒಳಗಾದ ಜನರಿಗೆ ನ್ಯಾಯ ನಿರಾಕರಿಸಿದಂತಾಗುತ್ತದೆ ಎಂದು ವಕೀಲರು ತಮ್ಮ ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ದೂರುದಾರನ ಹೇಳಿಕೆಯು ಕೆಲವು ವ್ಯಕ್ತಿಗಳಿಗೆ ಪೋಲೀಸರ ಮೂಲಕ ಹಂಚಲ್ಪಟ್ಟಿದೆ. ಈ ಬೆಳವಣಿಗೆಯು ಪ್ರಕರಣವನ್ನು ತನಿಖೆ ಮಾಡುತ್ತಿರುವ ಅಧಿಕಾರಿಗಳ ನೈತಿಕತೆಯ ಹಾಗೂ ಜವಾಬ್ದಾರಿತನದ ಮೇಲೆ ಗಂಭೀರ ಶಂಕೆಯನ್ನು ಮೂಡಿಸಿದೆ. ಪ್ರಕರಣದಲ್ಲಿ ಆರೋಪಿಗಳ ಹೆಸರುಗಳು ಇನ್ನೂ ಅಧಿಕೃತವಾಗಿ ಬಹಿರಂಗವಾಗದಿದ್ದರೂ, ಅವರು ರಾಜ್ಯದಾದ್ಯಂತ ವ್ಯಾಪಕ ಅನುಯಾಯಿಗಳನ್ನು ಹೊಂದಿರುವ ಪ್ರಭಾವಿ ವ್ಯಕ್ತಿಗಳೆಂದು ವರದಿಗಳು ಸೂಚಿಸುತ್ತಿವೆ. ಈ ಹಿನ್ನೆಲೆಯು ತನಿಖೆಯ ಪ್ರಗತಿಯ ಮೇಲೆ ನೇರವಾಗಿ ಪ್ರಭಾವ ಬೀರುತ್ತಿದೆ ಎಂದು ವಕೀಲರು ಆರೋಪಿಸಿದ್ದಾರೆ.
ಅಪರಾಧದ ಗಂಭೀರತೆ, ಪ್ರಭಾವಿ ವ್ಯಕ್ತಿಗಳು ಭಾಗಿಯಾಗಿರುವ ಶಂಕೆ ಮತ್ತು ಸಾಕ್ಷ್ಯ ನಾಶದ ಸಾಧ್ಯತೆಯ ಹಿನ್ನಲೆಯಲ್ಲಿ, ನ್ಯಾಯದ ಹಿತದೃಷ್ಟಿಯಿಂದ ತನಿಖೆಯ ಮೇಲ್ವಿಚಾರಣೆಗೆ ಹೈಕೋರ್ಟ್ ತಕ್ಷಣದಿಂದ ಮಧ್ಯಪ್ರವೇಶ ಮಾಡಬೇಕು ಹಾಗು ತನಿಖೆಯ ಮೇಲೆ ನಿಗಾ ಇಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ. ಇದನ್ನು ಅವರು ಸಾರ್ವಜನಿಕ ಹಿತಾಸಕ್ತಿ ಅರ್ಜಿಯಲ್ಲಿ ಉಲ್ಲೇಖಿಸಿದ್ದಾರೆ.