×
Ad

ಧರ್ಮಸ್ಥಳ ಪ್ರಕರಣ | ಹೈಕೋರ್ಟ್ ಮೆಟ್ಟಿಲೇರಿದ 'ದಿ ನ್ಯೂಸ್ ಮಿನಿಟ್' ವೆಬ್ ಪೋರ್ಟಲ್

Update: 2025-08-06 20:38 IST

ಬೆಂಗಳೂರು : ವಿದ್ಯಾರ್ಥಿನಿ ಸೌಜನ್ಯಾ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಹಾಗೂ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತು ಹಾಕಲಾಗಿದೆ ಎನ್ನಲಾದ ಆರೋಪ ಪ್ರಕರಣಕ್ಕೆ ಸಂಬಂಧಿಸಿದ ಪ್ರತ್ಯೇಕ ಎರಡು ಮಾಧ್ಯಮಗಳ ನಿರ್ಬಂಧ ಆದೇಶಗಳನ್ನು ಆಧರಿಸಿ 'ದಿ ನ್ಯೂಸ್ ಮಿನಿಟ್' ವೆಬ್‌ಪೋರ್ಟಲ್‌ನ ವರದಿಗಾರಿಕೆಗೆ ಅಡ್ಡಿಪಡಿಸುತ್ತಿರುವುದನ್ನು ಪ್ರಶ್ನಿಸಿ ವೆಬ್‌ ಪೋರ್ಟಲ್‌ನ ಮಾಲೀಕತ್ವ ಹೊಂದಿರುವ ಸ್ಪಂಕ್ ಲೇನ್ ಮೀಡಿಯಾ ಪ್ರೈವೇಟ್‌ ಲಿಮಿಟೆಡ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆಯ ಸಿಬ್ಬಂದಿ ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿದ ಬೆಂಗಳೂರಿನ 6ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್ ನ್ಯಾಯಾಲಯ ಮಾರ್ಚ್‌ 22ರಂದು ಹೊರಡಿಸಿರುವ ಏಕಪಕ್ಷೀಯ ಪ್ರತಿಬಂಧಕಾದೇಶವನ್ನೂ ʼನ್ಯೂಸ್‌ ಮಿನಿಟ್‌ʼ ಪ್ರಶ್ನಿಸಿದೆ. ಅರ್ಜಿಗಳು ಮುಂದಿನ ವಾರದಲ್ಲಿ ಹೈಕೋರ್ಟ್ ನ್ಯಾಯಪೀಠದ ಮುಂದೆ ವಿಚಾರಣೆಗೆ ಬರುವ ಸಾಧ್ಯತೆ ಇದೆ.

ಪ್ರಕರಣದಲ್ಲಿ ʼನ್ಯೂಸ್‌ ಮಿನಿಟ್‌ʼ ಪಕ್ಷಕಾರವಾಗಿಲ್ಲದಿದ್ದರೂ ದೂರುದಾರರು 'ಜಾನ್‌ ದಿಯೋ' ವರ್ಗೀಕರಣ ಉಲ್ಲೇಖಿಸಿ ನಿರ್ದಿಷ್ಟ ಲೇಖನ ಮತ್ತು ಟ್ವೀಟ್‌ ತೆಗೆಯುವಂತೆ ನೋಟಿಸ್‌ ಜಾರಿ ಮಾಡಿದ್ದರು.

ಜಾನ್‌ ದಿಯೋ ವರ್ಗೀಕರಣದಡಿ ನ್ಯಾಯಾಲಯವು ನಿರ್ದಿಷ್ಟ ಸಮಯದಲ್ಲಿ ವ್ಯಕ್ತಿಯ ಗುರುತು ತಿಳಿಯದಿದ್ದರೂ ಅವರ ವಿರುದ್ಧ ಆದೇಶ ಮಾಡಲು ಅವಕಾಶವಿದೆ. ಈ ಪ್ರಕರಣದಲ್ಲಿ ನ್ಯೂಸ್‌ ಮಿನಿಟ್‌ ಪಕ್ಷಕಾರರಲ್ಲದಿದ್ದರೂ, ಸುದ್ದಿಯಲ್ಲಿನ ವಿಚಾರವು ಮಾನಹಾನಿಯಾಗದ ಹೊರತಾಗಿಯೂ ಕಾನೂನು ಪ್ರಕ್ರಿಯೆಯಲ್ಲಿ ಸಿಲುಕುವುದನ್ನು ತಪ್ಪಿಸಲು ಮತ್ತು ಪೂರ್ವಾಗ್ರಹಕ್ಕೆ ಅವಕಾಶ ಮಾಡಿಕೊಡಬಾರದು ಎಂದು ನ್ಯೂಸ್‌ ಮಿನಿಟ್‌ ತಾತ್ಕಾಲಿಕವಾಗಿ ಅದನ್ನು ತೆಗೆದಿತ್ತು. ಇಷ್ಟೆಲ್ಲವಾದರೂ ಇನ್ನೊಂದು ವಿಡಿಯೊ ಡಿಲೀಟ್‌ ಮಾಡಿಸಲು ದೂರುದಾರರು ಮತ್ತೆ ಮಾರ್ಚ್‌ 22ರ ಆದೇಶ ಉಲ್ಲೇಖಿಸಿದ್ದರು.

ಈ ಆದೇಶ ಅನುಪಾಲಿಸಲು ನಿರಾಕರಿಸಿದ್ದ ನ್ಯೂಸ್‌ ಮಿನಿಟ್‌, ಏಕಪಕ್ಷೀಯ ಪ್ರತಿಬಂಧಕಾದೇಶದಲ್ಲಿ ಉಲ್ಲೇಖವಾಗಿಲ್ಲ. ಅಲ್ಲದೇ, ಆಕ್ಷೇಪಿತ ವಿಡಿಯೊ ಸುದ್ದಿ ಮೂಲಗಳನ್ನು ಖಚಿತಪಡಿಸಿದ್ದಾಗಿದೆ. ಜತೆಗೆ ಎಫ್‌ಐಆರ್‌ ಸಂಬಂಧ ಅಧಿಕಾರಿಗಳು ಹೇಳಿಕೆ ನೀಡಿದ್ದು, ಇದರಲ್ಲಿ ಗೃಹ ಸಚಿವರ ಹೇಳಿಕೆಯೂ ಸೇರಿದೆ ಎಂದು ವಾದಿಸಿದೆ. ತಮ್ಮ ವಾದ ಆಲಿಸದೇ ಜಾನ್‌ ದಿಯೊ ವರ್ಗೀಕರಣವನ್ನು ಆಧರಿಸಿ ವಿಡಿಯೊ ತೆಗೆಯಲು ಒತ್ತಾಯಿಸುವ ಮೂಲಕ ತಮಗೆ ಕಿರುಕುಳ ನೀಡಲಾಗುತ್ತಿದೆ ಎಂದು ನ್ಯೂಸ್‌ ಮಿನಿಟ್‌ ಅರ್ಜಿಯಲ್ಲಿ ಆರೋಪಿಸಿದೆ.

ಇನ್ನೊಂದು ಪ್ರತ್ಯೇಕ ಅರ್ಜಿಯಲ್ಲಿ ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿರುವ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿ.ಹರ್ಷೇಂದ್ರ ಕುಮಾರ್ ವಿರುದ್ಧ ಯಾವುದೇ ಮಾನಹಾನಿ ವಿಷಯ ಪ್ರಸಾರ/ಪ್ರಕಟ ಮಾಡದಂತೆ ಹೊರಡಿಸಿದ್ದ ಏಕಪಕ್ಷೀಯ ಪ್ರತಿಬಂಧಕಾದೇಶವನ್ನೂ ನ್ಯೂಸ್‌ ಮಿನಿಟ್‌ ಪ್ರಶ್ನಿಸಿದೆ. ವಿಚಾರಣಾ ನ್ಯಾಯಾಲಯದ ಆದೇಶವು ವಾಕ್‌ ಸ್ವಾತಂತ್ರ್ಯ ಕಸಿಯುವಂತಿದ್ದು, ಅರ್ಜಿದಾರರಿಗೆ ಸಂವಿಧಾನದ ಪರಿಚ್ಛೇದ 19ರ ಅಡಿ ದೊರೆತಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಮಾನಹಾನಿ ದಾವೆಯ ಬೆದರಿಕೆಯೊಡ್ಡುವ ಮೂಲಕ ಈಗಾಗಲೇ ಪ್ರಕಟಿಸಿರುವ ಸುದ್ದಿ ತೆಗೆಯಲು ಮತ್ತು ಮುಂದೆ ವರದಿಗಾರಿಕೆ ನಿರ್ಬಂಧಕ್ಕೆ ಪ್ರಯತ್ನಿಸುತ್ತಿದ್ದಾರೆ ಎಂದಿರುವ ನ್ಯೂಸ್ ಮಿನಿಟ್, ಇತ್ತೀಚೆಗೆ ಕುಡ್ಲ ರ‍್ಯಾಂಪೇಜ್‌ ಪ್ರಕರಣದಲ್ಲಿ ಏಕಪಕ್ಷೀಯ ಪ್ರತಿಬಂಧಕಾದೇಶ ವಜಾಗೊಳಿಸಿರುವ ಹೈಕೋರ್ಟ್‌ ಆದೇಶವನ್ನು ಆಧರಿಸಿ, ತಮಗೂ ಅದೇ ರೀತಿಯ ಪರಿಹಾರ ನೀಡುವಂತೆ ಅರ್ಜಿಯಲ್ಲಿ ಮನವಿ ಮಾಡಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News