ಗೀತಾ/ ಶಿವಶಂಕರಪ್ಪ ಸಾಹುಕಾರ್

ಬೆಂಗಳೂರು : KPSC ನೇಮಕಾತಿ ಅಕ್ರಮ ಪ್ರಕರಣ ಸಂಬಂಧ ನಿನ್ನೆ(ಅ.6) ಈ.ಡಿಯಿಂದ ಬಂಧಿತರಾಗಿದ್ದ KPSC ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಹಾಗೂ ಸದಸ್ಯೆ ಬಿ.ವಿ ಗೀತಾ ರನ್ನು 13 ದಿನಗಳ ಈ.ಡಿ ಕಸ್ಟಡಿಗೆ ನೀಡಿ ಸಿಸಿಎಚ್ ನಾಲ್ಕನೇ ನ್ಯಾಯಾಲಯ ಆದೇಶ ಮಾಡಿದೆ.

ಬಂಧಿತರಾಗಿದ್ದ ಇಬ್ಬರನ್ನು ಇಂದು(ಅ.7) ಈ.ಡಿ ಅಧಿಕಾರಿಗಳು ನ್ಯಾಯಾಲಯಕ್ಕೆ ಹಾಜರುಪಡಿಸಿ ಕಸ್ಟಡಿಗೆ ಕೇಳಿದ್ದರು. ಈ ವೇಳೆ ಶಿವಶಂಕರಪ್ಪ ಸಾಹುಕಾರ್ ಹಾಗೂ ಬಿವಿ ಗೀತಾ ಅನಾರೋಗ್ಯದ ಕಾರಣ ಹೇಳಿ ಮಧ್ಯಂತರ ಜಾಮೀನಿಗೆ ಅರ್ಜಿ ಸಲ್ಲಿಸಿದ್ದರು. ಆದರೆ ಮಧ್ಯಂತರ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನ್ಯಾಯಾಧೀಶರು 13 ದಿನಗಳ ಕಸ್ಟಡಿಗೆ ನೀಡಿ ತನಿಖೆಗೆ ಸಹಕರಿಸುವಂತೆ ಸೂಚಿಸಿದರು.

ನಾಳೆ ಕನ್ನಾಳೆ ಜಾಮೀನು ಅರ್ಜಿ ವಿಚಾರಣೆ :

ಇನ್ನೂ ಇದೇ ಕೆಪಿಎಸ್‌ಸಿ ಅಕ್ರಮದಲ್ಲಿ ಬಂಧಿತನಾಗಿರುವ ಬಸವರಾಜ್ ಕನ್ನಾಳೆ ಜಾಮೀನು ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ನಾಳೆ ನಡೆಸಲಿದೆ. ಇಂದು ಬಸವರಾಜ್ ಕನ್ನಾಳೆ ಪರವಾಗಿ ಹಾಜರಾಗಿದ್ದ ವಕೀಲ ಅರುಣ್ ಶ್ಯಾಂ ಕನ್ನಾಳೆ ಇಂದು ಹೆಣ್ಣು ಮಗುವಿಗೆ ತಂದೆಯಾಗಿದ್ದಾರೆ. ಈ ವಿಚಾರವನ್ನು ಮಾನವೀಯತೆ ದೃಷ್ಟಿಯಲ್ಲಿ ನೋಡಿ ಜಾಮೀನು ನೀಡಬೇಕು ಎಂದರು.

ಇದಕ್ಕೆ ಎಸ್ಪಿಪಿ ಜಗದೀಶ್, ಕನ್ನಾಳೆ ದೇಶವನ್ನು ಬಿಟ್ಟು ಹೋಗಲು ಸಿದ್ದವಾಗಿದ್ದರು. ದೆಹಲಿಯಲ್ಲಿ ಅವರನ್ನು ಬಂಧನ ಮಾಡಲಾಗಿದೆ. ಹೀಗಾಗಿ ಜಾಮೀನು ನೀಡಬಾರದು ಎಂದರು. ಇದರ ವಿಚಾರಣೆಯನ್ನು ನಾಳೆಗೆ ನ್ಯಾಯಮೂರ್ತಿ ವಿಶ್ವಜಿತ್ ಶೆಟ್ಟಿ ಅವರಿದ್ದ ಪೀಠ ಮುಂದೂಡಿತು.

ಜ್ಞಾನೇಂದ್ರ ಕುಮಾರ್, ಶಾಂತಾ ಹೊಸಮನಿಗಿಲ್ಲ ಜಾಮೀನು :

ಇನ್ನೂ ಇದೇ ವೇಳೆ ಐಎಎಸ್ ಅಧಿಕಾರಿ ಜ್ಞಾನೇಂದ್ರ ಗಂಗ್ವಾರ್ ಜಾಮೀನು ಅರ್ಜಿ ಹಾಗೂ ಕೆಪಿಎಸ್‌ಸಿ ಸದಸ್ಯೆ ಶಾಂತಾ ಹೊಸಮನಿ ನಿರೀಕ್ಷಣಾ ಜಾಮೀನು ಅರ್ಜಿಯನ್ನು ಪೀಠ ಮುಂದಿನ‌ ವಾರಕ್ಕೆ ಮುಂದೂಡಿತು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor