ಬೆಂಗಳೂರು : ‘ಹಾಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ನಡೆಸಿದ ‘ಸ್ಟಿಂಗ್ ಆಪರೇಷನ್'ನಿಂದಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿ ಸ್ಥಾನದಿಂದ ಕೆಳಗೆ ಇಳಿದಿದ್ದಾರೆ’ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ  ಆರೋಪ ಮಾಡಿದ್ದಾರೆ.

ಬುಧವಾರ ಜೆಡಿಎಸ್ ಪಕ್ಷದ ಕೇಂದ್ರ ಕಚೇರಿ ಜೆಪಿ ಭವನದಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ದೇವರಾಜು ಅರಸು ಅವರಿಗಿಂತ ಹೆಚ್ಚಿನ ಅವಧಿಗೆ ರಾಜ್ಯದಲ್ಲಿ ಮುಖ್ಯಮಂತ್ರಿಯಾದರು. ಅಹಿಂದಾ ವರ್ಗಕ್ಕೆ ದೊಡ್ಡ ನಾಯಕರು. ಅವರ ಮೇಲಿನ ಪ್ರೀತಿಗೆ ಅಭಿಮಾನಿಗಳು ಅವರ ವಿಗ್ರಹವನ್ನು ಸ್ಥಾಪಿಸಿದ್ದಾರೆ. ಅಂತಹ ವ್ಯಕ್ತಿ ಡಿ.ಕೆ.ಶಿವಕುಮಾರ್ ಅವರ ಸ್ಟಿಂಗ್ ಆಪರೇಷನ್‍ಗೆ ಬಲಿಯಾದರು ಎಂದು ದೂರಿದರು.

ಶಿವಕುಮಾರ್ ಮಾಡಿದ ಸ್ಟಿಂಗ್ ಆಪರೇಷನ್ ನಿಂದಾಗಿ ಕಾಂಗ್ರೆಸ್ ಹೈಕಮಾಂಡ್ ಅತ್ಯಂತ ಅಪಮಾನಕಾರಿಯಾಗಿ ಸಿದ್ದರಾಮಯ್ಯ ಅವರನ್ನು ಸಿಎಂ ಹುದ್ದೆಯಿಂದ ಇಳಿಸಿತು.ಡಿ.ಕೆ.ಶಿವಕುಮಾರ್ ಅವರ ಜತೆ ಒಂದು ಸುದ್ದಿವಾಹಿನಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಶಾಮೀಲಾದ ಪರಿಣಾಮ ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ಕಿತ್ತು ಹಾಕಲಾಯಿತು. ಸಂಪುಟ ವಿಸ್ತರಣೆ ಬಗ್ಗೆ ಚರ್ಚೆ ನಡೆಸಲು ಕರೆದಿದ್ದಾರೆ ಎಂದು ನಂಬಿ ಹೊಸದಿಲ್ಲಿಗೆ ಹೋಗಿದ್ದ ಸಿದ್ದರಾಮಯ್ಯ ಅವರಿಗೆ ಸ್ಟಿಂಗ್ ಆಪರೇಷನ್ ವಿಷಯ ತಿಳಿಸಿ ರಾಜೀನಾಮೆ ಪಡೆದುಕೊಳ್ಳಲಾಯಿತು ಎಂದು ಕುಮಾರಸ್ವಾಮಿ ಅವರು ಆಪಾದಿಸಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಹುದ್ದೆಯಿಂದ ಕೆಳಗಿಳಿಯುವಂತೆ ಸಿದ್ದರಾಮಯ್ಯ ಅವರ ಮೇಲೆ ಒತ್ತಡ ಹೇರಲಾಯಿತು ಎಂದ ಅವರು, ಅವರ ವಿರುದ್ಧ ವ್ಯವಸ್ಥಿತ ಸಂಚು ನಡೆದಿದೆ. ಅವರ ರಾಜೀನಾಮೆ ಪಡೆದ ರೀತಿ ಸರಿಯಲ್ಲ. ಅಂತಹ ಹಿರಿಯ ನಾಯಕನನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಳ್ಳಲಿಲ್ಲ. ಇದೆಲ್ಲವನ್ನೂ ಯಾರು ಮಾಡಿದ್ದಾರೆ? ಇದರ ಹಿಂದೆ ಯಾರು ಇದ್ದಾರೆ? ಯಾವ ಮಾಧ್ಯಮ ಸಂಸ್ಥೆ ಇದೆ ಎಂಬುದು ಎಲ್ಲರಿಗೂ ಗೊತ್ತಿದೆ ಎಂದು ಅವರು ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ಕೆಲವರು ನನ್ನೊಂದಿಗೆ ಈ ವಿಚಾರ ಹಂಚಿಕೊಂಡಿದ್ದಾರೆ. ತಮಗೂ ಇದೇ ರೀತಿಯ ಪರಿಸ್ಥಿತಿ ಎದುರಾಗಬಹುದು ಎಂದು ಭಾವಿಸಿ ಎಂದು ಸಚಿವ ಸಂಪುಟ ಸಭೆಯಲ್ಲಿ ಅವರು ತಮ್ಮ ಸಹೋದ್ಯೋಗಿಗಳಿಗೆ ಎಚ್ಚರಿಕೆಯಿಂದ ಇರುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಅವರಿಗೆ ಈಗ ಗುಪ್ತಚರ ಮಾಹಿತಿ ಲಭ್ಯವಾಗಿದೆ. ಸ್ಟಿಂಗ್ ಮಾಡಿರುವುದು ಅವರು, ರಮೇಶ್ ಜಾರಕಿಹೊಳಿ, ರಾಜಣ್ಣ ಅವರ ಕತೆ ಮುಗಿಸಿದ್ದು ಇವರೇ ಅಲ್ಲವೇ? ಇಂತಹ ವಿಷಯದಲ್ಲಿ ಅವರು ದೊಡ್ಡ ಅನುಭವ ಹೊಂದಿದ್ದಾರೆ. ಅವರೇ ಎಲ್ಲವನ್ನೂ ಮಾಡಿ ವಿರೋಧ ಪಕ್ಷಗಳ ಮೇಲೆ ಗೂಬೆ ಕೂರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಸ್ಟಿಂಗ್ ಮಾಡಿ ಸಿದ್ದರಾಮಯ್ಯ ಅವರನ್ನು ಕೆಳಗೆ ಇಳಿಸಿದ ವ್ಯಕ್ತಿಯೇ ನಮ್ಮ ಮೇಲೆ ಆರೋಪ ಮಾಡುವುದು ಹಾಸ್ಯಾಸ್ಪದವಾಗಿದೆ ಎಂದು ಅವರು ಆರೋಪಿಸಿದರು.

ಈ ವೇಳೆ ಮಾಜಿ ಶಾಸಕರಾದ ಸುರೇಶ್ ಗೌಡ, ಚೌಡರೆಡ್ಡಿ ತೂಪಲ್ಲಿ, ಗ್ರೇಟರ್ ಬೆಂಗಳೂರು ಜೆಡಿಎಸ್ ಅಧ್ಯಕ್ಷ ಎಚ್.ಎಂ.ರಮೇಶ್ ಗೌಡ, ರಾಜ್ಯ ವಕ್ತಾರ ಎಚ್.ಎನ್.ದೇವರಾಜು ಸೇರಿದಂತೆ ಪ್ರಮುಖರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor