×
Ad

ಸರಕಾರಿ ಆಸ್ಪತ್ರೆಗಳಲ್ಲಿ ‘ವಿಶೇಷ ಪೌಷ್ಟಿಕ ಆಹಾರ’ ಯೋಜನೆಗೆ ಚಾಲನೆ ನೀಡಿದ ಸಚಿವ ದಿನೇಶ್ ಗುಂಡೂರಾವ್

Update: 2025-09-02 19:45 IST

ಬೆಂಗಳೂರು, ಸೆ.3: ರೋಗಿಗಳ ಚೇತರಿಕೆಗೆ ಚಿಕಿತ್ಸೆಯ ಜೊತೆಗೆ ಪೌಷ್ಠಿಕ ಆಹಾರ ಸೇವನೆಯೂ ಮಹತ್ವದ ಪಾತ್ರ ವಹಿಸಲಿದೆ. ಹೀಗಾಗಿ ಬೆಂಗಳೂರಿನ ಮೂರು ಸರಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ‘ವಿಶೇಷ ಪೌಷ್ಟಿಕ ಆಹಾರ’ ಯೋಜನೆಯನ್ನು ಜಾರಿ ಮಾಡಲಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

ಮಂಗಳವಾರ ನಗರದ ಸರ್.ಸಿ.ವಿ. ರಾಮನ್ ಆಸ್ಪತ್ರೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ಇಸ್ಕಾನ್ ಸಹಯೋಗದಲ್ಲಿ ಮೂರು ಸರಕಾರಿ ಆಸ್ಪತ್ರೆಗಳಲ್ಲಿ ಒಳರೋಗಿಗಳಿಗೆ ‘ವಿಶೇಷ ಪೌಷ್ಟಿಕ ಆಹಾರ’ ಯೋಜನೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಮೊದಲ ಹಂತದಲ್ಲಿ ಬೆಂಗಳೂರಿನ ಕೆ.ಸಿ ಜನರಲ್ ಆಸ್ಪತ್ರೆ, ಜಯನಗರ ಹಾಗೂ ಸಿ.ವಿ ರಾಮನ್ ನಗರ ಸರಕಾರಿ ಸಾರ್ವಜನಿಕ ಆಸ್ಪತ್ರೆಗಳಲ್ಲಿ ದಾಖಲಾದ ಒಳರೋಗಿಗಳಿಗೆ ವಿಶೇಷ ಪೌಷ್ಠಿಕ ಆಹಾರವನ್ನು ಪ್ರತಿನಿತ್ಯ ಒದಗಿಸಲಾಗುವುದು. ಮುಂಬರುವ ದಿನಗಳಲ್ಲಿ ರಾಜ್ಯದ ಎಲ್ಲ ಸರಕಾರಿ ಜಿಲ್ಲಾಸ್ಪತ್ರೆಗಳಿಗೆ ಪೌಷ್ಠಿಕ ಆಹಾರ ವಿತರಣೆ ಜಾರಿಗೆ ತರಲಾಗುತ್ತದೆ ಎಂದು ಅವರು ಹೇಳಿದರು.

ರೋಗಿಯ ಆರೋಗ್ಯ ಚೇತರಿಕೆಗೆ ಸಹಕಾರಿಯಾಗುವಂತೆ ವೈದ್ಯಕೀಯ ಉದ್ದೇಶಗಳಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದ್ದು, ಸಾಮಾನ್ಯ ಆಹಾರ ಕ್ರಮ, ಚಿಕಿತ್ಸಾ ಆಹಾರ ಕ್ರಮ, ಗರ್ಭಿಣಿಯರ ಆಹಾರ ಕ್ರಮ, ಬಾಣಂತಿಯರ ಆಹಾರ ಕ್ರಮ ಹಾಗೂ ಮಕ್ಕಳ ಆಹಾರ ಕ್ರಮ ಹೀಗೆ ಆಹಾರವನ್ನು ಐದು ವಿಭಾಗಗಳಾಗಿ ವಿಂಗಡಿಸಿ ಯೋಜನೆಯಡಿ ನೀಡಲಾಗುತ್ತದೆ ಎಂದು ಅವರು ವಿವರಿಸಿದರು.

ಪ್ರತಿ ಆಸ್ಪತ್ರೆಯಲ್ಲಿ ಸುಮಾರು 250 ರೋಗಿಗಳಿಗೆ ಪ್ರತಿದಿನ ಆಹಾರವನ್ನು ಸರಬರಾಜು ಮಾಡಲು ಇಸ್ಕಾನ್ ಸಂಸ್ಥೆಯೊಂದಿಗೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಇದಕ್ಕಾಗಿ 9 ತಿಂಗಳ ಅವಧಿಗೆ 1,37,45,700 ರೂ. ವೆಚ್ಚವನ್ನು ಆರೋಗ್ಯ ಇಲಾಖೆಯಿಂದ ಭರಿಸಲಾಗುತ್ತದೆ ಎಂದು ಅವರು ತಿಳಿಸಿದರು.

ಈ ವೇಳೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆಯುಕ್ತ ಶಿವಕುಮಾರ್, ನಿರ್ದೇಶಕ ವಸಂತ್ ಕುಮಾರ್, ಉಪನಿರ್ದೇಶಕಿ ಇಂದ್ರಾ ಕಬಾಡೆ, ಡಿ.ಎಚ್.ಒ ರವೀಂದ್ರನಾಥ್ ಸೇರಿ ಮತ್ತಿತರರಿದ್ದರು.

‘ರಾಜ್ಯದ ಮೂರು ಜಿಲ್ಲಾಸ್ಪತ್ರೆಗಳಲ್ಲಿ ಹೃದಯ ಸಂಬಂಧಿತ ಕಾಯಿಲೆಗಳನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆಗಾಗಿ ಕ್ಯಾಥ್ ಲ್ಯಾಬ್ ಪ್ರಾರಂಭಿಸಲು ಸರಕಾರ ಸಿದ್ದತೆ ನಡೆಸುತ್ತಿದೆ. ಬೆಂಗಳೂರಿನ ಸಿ.ವಿ.ರಾಮನ್ ಆಸ್ಪತ್ರೆ, ಹೊಸಪೇಟೆ ಹಾಗೂ ಮಂಗಳೂರಿನ ಜಿಲ್ಲಾಸ್ಪತ್ರೆಗಳಲ್ಲಿ ಈ ಕ್ಯಾಥ್ ಲ್ಯಾಬ್ ನಿರ್ಮಾಣಕ್ಕೆ ಪ್ರಸ್ತಾವವನ್ನು ಸ್ವೀಕರಿಸಿ ಶೀಘ್ರದಲ್ಲೇ ಅನುಮೋದನೆ ನೀಡಲಾಗುವುದು’

-ದಿನೇಶ್ ಗುಂಡೂರಾವ್, ಆರೋಗ್ಯ ಸಚಿವ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News