ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ಪಕ್ಷದಲ್ಲಿ ಚರ್ಚೆಯೇ ನಡೆದಿಲ್ಲ : ದಿನೇಶ್ ಗುಂಡೂರಾವ್
"ಅಶೋಕ್‌ರ ‘ನವೆಂಬರ್ ಕ್ರಾಂತಿ’ ಹೇಳಿಕೆ ಅಸಂಬದ್ಧ"
ದಿನೇಶ್ ಗುಂಡೂರಾವ್
ಬೆಂಗಳೂರು : ವಿಪಕ್ಷ ನಾಯಕ ಅಶೋಕ್ ಪದೇ ಪದೇ ಮುಖ್ಯಮಂತ್ರಿ ಬದಲಾವಣೆಯಾಗಲಿದೆ ಎಂಬ ಹೇಳಿಕೆ ಕೊಡುತ್ತಿದ್ದಾರೆ. ಇಂದು ಮತ್ತೆ ನವೆಂಬರ್ ಕ್ರಾಂತಿ ಆಗಲಿದೆ ಎಂದಿದ್ದಾರೆ. ಬಹುಶಃ ಅಶೋಕ್‌ರವರಿಗೆ ಅಸಂಬದ್ಧವಾಗಿ ಮಾತಾಡುವ ಬಾಯಿ ಚಪಲ ಇದ್ದಂತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಹಂಚಿಕೊಂಡಿರುವ ಅವರು, ಮುಖ್ಯಮಂತ್ರಿ ಬದಲಾವಣೆ ವಿಚಾರ ನಮ್ಮ ಪಕ್ಷಕ್ಕೆ ಸಂಬಂಧಿಸಿದ್ದು. ಅಶೋಕ್ ಸೇರಿದಂತೆ ಬಿಜೆಪಿ ನಾಯಕರಿಗ್ಯಾಕೆ ನಮ್ಮ ಪಕ್ಷದ ಚಿಂತೆ.? ಎಂದು ಪ್ರಶ್ನಿಸಿದ್ದಾರೆ.
ಮುಖ್ಯಮಂತ್ರಿ ಬದಲಾವಣೆಯ ಬಗ್ಗೆ ನಮ್ಮ ಪಕ್ಷದಲ್ಲಿ ಚರ್ಚೆಯೇ ನಡೆದಿಲ್ಲ. ಆದರೆ ಅಶೋಕ್ ಕವಡೆ ಶಾಸ್ತ್ರ ಹೇಳುವವರಂತೆ ನವೆಂಬರ್ ಕ್ರಾಂತಿ ಆಗುತ್ತೆ ಎಂದು ಭವಿಷ್ಯ ಹೇಳುತ್ತಿದ್ದಾರೆ. ಆದರೆ ಅದು ಬುರುಡೆ ಭವಿಷ್ಯವಾಗಲಿದೆ. ನಮ್ಮ ಪಕ್ಷದಲ್ಲಿ ಏನೇ ಬದಲಾವಣೆ ಇದ್ದರೂ ಅದನ್ನು ನಮ್ಮ ಪಕ್ಷದ ಹೈಕಮಾಂಡ್ ನಿರ್ಧರಿಸಲಿದೆ. ನಮ್ಮ ಪಕ್ಷದ ಆಂತರಿಕ ವಿಚಾರದ ಬಗ್ಗೆ ಅಶೋಕ್‌ರವರಿಗೆ ಅಷ್ಟೊಂದು ಆಸಕ್ತಿ ಯಾಕೆ.? ಎಂದು ಕೇಳಿದ್ದಾರೆ.