×
Ad

ಮೆಟ್ರೋ ನಿಲ್ದಾಣಕ್ಕೆ ಮುನಿರತ್ನ ಹಣ ಕೊಟ್ಟರೆ, ಅವರ ಹೆಸರಿಡಲು ಸಿದ್ಧ : ಡಿ.ಕೆ.ಶಿವಕುಮಾರ್

‘ಕೃಷ್ಣಬೈರೇಗೌಡರದ್ದು ಸಾರ್ವಜನಿಕ ಹಿತ, ಮುನಿರತ್ನರದ್ದು ಖಾಸಗಿ ಬೇಡಿಕೆ’

Update: 2025-08-12 17:59 IST

ಮುನಿರತ್ನ/ಡಿ.ಕೆ.ಶಿವಕುಮಾರ್‌

ಬೆಂಗಳೂರು, ಆ.12: ‘ಯಲಹಂಕ ಸಮೀಪದ ಬೆಟ್ಟಹಲಸೂರು ನಮ್ಮ ಮೆಟ್ರೋ ನಿಲ್ದಾಣ ನಿರ್ಮಾಣಕ್ಕೆ ಶಾಸಕ ಮುನಿರತ್ನ ಹಣ ನೀಡಿದರೆ, ಆ ನಿಲ್ದಾಣಕ್ಕೆ ಮುನಿರತ್ನ ಅಂಡ್ ಕಂಪೆನಿ ಎಂದೇ ಹೆಸರಿಡಲು ಸಿದ್ಧ’ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಂದಿಲ್ಲಿ ಪ್ರತಿಕ್ರಿಯೆ ನೀಡಿದರು.

ಮಂಗಳವಾರ ವಿಧಾನಸಭೆ ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿ ಸದಸ್ಯ ಮುನಿರತ್ನ ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಅವರು, ಬೆಟ್ಟಹಲಸೂರು ಮೆಟ್ರೋ ನಿಲ್ದಾಣದ ನಿರ್ಮಾಣಕ್ಕೆ ಎಂಬೆಸಿ ಸಂಸ್ಥೆ ಮುಂದೆ ಬಂದಿತ್ತು. ಸಿಎಸ್‍ಆರ್ ಅನುದಾನ ಬಳಸಿಕೊಂಡು ಮೆಟ್ರೋ ನಿಲ್ದಾಣ ನಿರ್ಮಿಸಿದರೆ ಆ ನಿಲ್ದಾಣಕ್ಕೆ ಆ ಸಂಸ್ಥೆಯ ಹೆಸರಿಡಲು ಅವಕಾಶ ಕಲ್ಪಿಸಲಾಗಿದೆ. ನಮ್ಮ ಈ ಮಾದರಿಗೆ ಪ್ರಧಾನಿ ಮೋದಿಯವರು ಪ್ರಶಂಸೆ ಮಾಡಿದ್ದಾರೆ ಎಂದರು.

ಇನ್ಫೋಸಿಸ್ ಸಂಸ್ಥೆಯವರು 200 ಕೋಟಿ ರೂ.ಕೊಟ್ಟಿದ್ದು, ಮೆಟ್ರೋ ನಿಲ್ದಾಣಕ್ಕೆ ಆ ಸಂಸ್ಥೆ ಹೆಸರು ಇಡಲಾಗಿದೆ. ಡೆಲ್ಟಾ ಸಂಸ್ಥೆಯೂ ನೀಡಿದೆ. ಆದರೆ, ಮುನಿರತ್ನಗೆ ಸೇರಿದ 70-80 ಎಕರೆ ಜಮೀನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ರಸ್ತೆಯಲ್ಲಿದೆ. ಅವರ ಜಮೀನಿನ ಪಕ್ಕ ಅವರಿಗೆ ಮೆಟ್ರೋ ನಿಲ್ದಾಣ ಬೇಕಾಗಿದೆ. ಹೀಗಾಗಿ ಈ ಪ್ರಶ್ನೆ ಎತ್ತಿದ್ದಾರೆ ಎಂದು ಶಿವಕುಮಾರ್ ಕುಟುಕಿದರು.

ಈ ವೇಳೆ ಮಧ್ಯಪ್ರವೇಶಿಸಿದ ಮುನಿರತ್ನ, ಉಪಮುಖ್ಯಮಂತ್ರಿ ಶಿವಕುಮಾರ್ ಅವರು ಬಿಲ್ಡರ್‌ಗೆ ಕರೆ ಮಾಡಿ 24 ತಾಸಿನಲ್ಲಿ ಹಣ ಕಟ್ಟುತ್ತಿಯೋ ಇಲ್ಲವೋ ಎಂದು ಎಂಬೆಸಿ ಸಂಸ್ಥೆಯವರಿಗೆ ಕೇಳಿದರೆ ಸಾಕು. ಅವರು ಹಣ ಪಾವತಿ ಮಾಡುತ್ತಾರೆ. ಬೆಂಗಳೂರಿನಲ್ಲಿ ಬಿಲ್ಡರ್‍ಗಳು ಕೇವಲ ಶಿವಕುಮಾರ್ ಮಾತನ್ನಷ್ಟೇ ಕೇಳುತ್ತಾರೆ ಎಂದು ತಿಳಿಸಿದರು.

ಬಳಿಕ ಪ್ರತಿಕ್ರಿಯೆ ನೀಡಿದ ಶಿವಕುಮಾರ್, ಮನುಷ್ಯನಿಗೆ ಸ್ವಾರ್ಥ ಇರುವುದು ಸಹಜ, ಇದು ತಪ್ಪಲ್ಲ. ನನಗೂ ಇದೆ, ಅವರಿಗೂ ಇದೆ. ಆ ಭಾಗದಲ್ಲಿ ಎಂಬೆಸಿ ಅವರದ್ದು ಸುಮಾರು 250ಎಕರೆ ಜಮೀನಿದೆ. ಅವರು ಮೆಟ್ರೋ ನಿಲ್ದಾಣಕ್ಕೆ ತಮ್ಮ ಹೆಸರು ಬರಬೇಕೆಂದು ಒಪ್ಪಂದ ಮಾಡಿಕೊಂಡಿದ್ದಾರೆ. 140 ಕೋಟಿ ರೂ.ಮೊತ್ತದಲ್ಲಿ ನಿರ್ಮಿಸಲಾಗುವ ಮೆಟ್ರೋ ನಿಲ್ದಾಣಕ್ಕೆ 120 ಕೋಟಿ ರೂ.ನೀಡುವುದಾಗಿ ಹೇಳಿದ್ದರು. ಅದರಲ್ಲಿ ಕೇವಲ 1 ಕೋಟಿ ರೂ.ಹಣವನ್ನು ಮಾತ್ರ ನೀಡಿದ್ದಾರೆ. ಆ ಭಾಗದಲ್ಲಿ ಮುನಿರತ್ನರದ್ದು 70-80 ಎಕರೆ ಜಮೀನಿದೆ, ಹೀಗಾಗಿ ಮುನಿರತ್ನ ಹಣ ಕೊಟ್ಟು ಮೆಟ್ರೋ ನಿಲ್ದಾಣ ನಿರ್ಮಿಸಿದರೆ ಆ ನಿಲ್ದಾಣಕ್ಕೆ ಮುನಿರತ್ನ ಅವರ ಹೆಸರೇ ಇಡುತ್ತೇನೆ ಎಂದು ತಿಳಿಸಿದರು.

ಈ ವೇಳೆ ಮಾತನಾಡಿದ ವಿಪಕ್ಷ ನಾಯಕ ಆರ್.ಅಶೋಕ್, ‘ಈಗಾಗಲೇ ಎಂಬೆಸಿ ಜೊತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಎಂಬೆಸಿ ಕಂಪೆನಿಯವರು 1 ಕೋಟಿ ರೂ.ಕೊಟ್ಟಿದ್ದು, ಬಾಕಿ 119 ಕೋಟಿ ರೂ. ನೀಡಲಿ ಎಂದು ಉಪಮುಖ್ಯಮಂತ್ರಿ ಅವರು ಧಮ್ಕಿ ಹಾಕಲಿ ಎಂದಷ್ಟೇ ಮುನಿರತ್ನ ಹೇಳುತ್ತಿದ್ದಾರೆ ಎಂದರು.

ಬಳಿಕ ಪ್ರತಿಕ್ರಿಯಿಸಿದ ಶಿವಕುಮಾರ್, ನಾನೇಕೆ ಧಮ್ಕಿ ಹಾಕಲಿ? ಬೇಕಾದರೆ ಒಪ್ಪಂದ ರದ್ದುಗೊಳಿಸೋಣ, ಮುನಿರತ್ನ ಹಣ ಕೊಟ್ಟರೆ ‘ಮುನಿರತ್ನ ಅಂಡ್ ಕಂಪನಿ’ ಅಂತಲೇ ಆ ನಿಲ್ದಾಣಕ್ಕೆ ಹೆಸರಿಡೋಣ’ ಎಂದು ಹೇಳಿದರು.

‘ಈ ಮೆಟ್ರೋ ನಿಲ್ದಾಣದ ಬಗ್ಗೆ ಸ್ಥಳೀಯ ಶಾಸಕರೂ ಆಗಿರುವ ಸಚಿವ ಕೃಷ್ಣಬೈರೇಗೌಡ ನನ್ನ ಜೊತೆ ಚರ್ಚಿಸಿ ಪರಿಸ್ಥಿತಿ ವಿವರಿಸಿದ್ದಾರೆ. ಕ್ಷೇತ್ರದ ಬಗ್ಗೆ ಅವರು ಹೇಳಿರುವ ಮಾತನ್ನು ನಾನು ಗಮನದಲ್ಲಿಟ್ಟುಕೊಂಡಿದ್ದೇನೆ. ಕೃಷ್ಣಬೈರೇಗೌಡ ಅವರದ್ದು ಸಾರ್ವಜನಿಕ ಬೇಡಿಕೆ, ಮುನಿರತ್ನ ಅವರದ್ದು ಖಾಸಗಿ ಬೇಡಿಕೆ. ಇಷ್ಟೇ ವ್ಯತ್ಯಾಸ ಎಂದು ಶಿವಕುಮಾರ್ ತಿರುಗೇಟು ನೀಡಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News