ಅವಧಿಯೊಳಗೆ ಗಣಿಗಾರಿಕೆ ಆರಂಭಿಸಲು ವೈಜ್ಞಾನಿಕ ನಿಯಮ ರಚನೆ : ಡಿ.ಕೆ.ಶಿವಕುಮಾರ್
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ
ಬೆಂಗಳೂರು : ಹರಾಜು ನಡೆದು ಅತ್ಯಂತ ಕನಿಷ್ಠ ಅವಧಿಯೊಳಗೆ ಗಣಿಗಾರಿಕೆ ಆರಂಭಿಸಬೇಕು ಎನ್ನುವ ಬಗ್ಗೆ ವೈಜ್ಞಾನಿಕ ನಿಯಮ ರೂಪಿಸಲು ಅಧಿಕಾರಿಗಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೂಚನೆ ನೀಡಿದ್ದಾರೆ.
ಬುಧವಾರ ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಗಣಿಗಾರಿಕೆಗೆ ಭೂಮಿ ಪಡೆದವರು ಎಷ್ಟು ಮಂದಿ ಇದ್ದಾರೆ? ಗುತ್ತಿಗೆ ಪಡೆದ ಪ್ರಕರಣಗಳ ಸ್ಥಿತಿ ಗತಿ ಏನಿದೆ? ಗಣಿಗಾರಿಕೆ ಆರಂಭಿಸದಿರುವವರ ಪಟ್ಟಿ, ಅದಕ್ಕೆ ಕಾರಣಗಳೇನು, ಅರಣ್ಯ ಅನುಮತಿ ಬಾಕಿ ಇರುವ ಪ್ರಕರಣಗಳೆಷ್ಟು, ಬಾಕಿ ಉಳಿಯಲು ಕಾರಣಗಳೇನು ಎನ್ನುವುದೂ ಸೇರಿ ಸಮಗ್ರ ವರದಿ ಸಲ್ಲಿಸುವಂತೆ ಗಣಿ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಇದೇ ವೇಳೆ, ರಾಜ್ಯದ ಗಣಿ ನೀತಿ ಮತ್ತು ಇತರೆ ರಾಜ್ಯಗಳಲ್ಲಿ ಇರುವ ಗಣಿ ನೀತಿ, ನಿಯಮ ಮತ್ತು ಕಾನೂನುಗಳನ್ನು ಸಮಗ್ರವಾಗಿ ಅಧ್ಯಯನ ನಡೆಸಿ, ‘ಹರಾಜು ನಡೆದು ಎಷ್ಟು ಕನಿಷ್ಠ ಅವಧಿಯೊಳಗೆ ಗಣಿಗಾರಿಕೆ ಆರಂಭಿಸಬೇಕು’ ಎನ್ನುವ ಬಗ್ಗೆ ವೈಜ್ಞಾನಿಕ ನಿಯಮ ರೂಪಿಸಲು ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರರಾದ ಎಲ್.ಕೆ.ಅತೀಕ್ ಮತ್ತು ಆರ್ಥಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ರಿತೇಶ್ ಕುಮಾರ್ ಸಿಂಗ್ ಅವರಿಗೆ ಡಿ.ಕೆ.ಶಿವಕುಮಾರ್ ಜವಾಬ್ದಾರಿ ನೀಡಿದರು.