ಉದ್ಯಮಿಗಳು ನಮ್ಮ ಸಹೋದರರು; ಬೆಂಗಳೂರಿನ ಘನತೆಗೆ ಘಾಸಿ ಮಾಡಬೇಡಿ: ಡಿ.ಕೆ.ಶಿವಕುಮಾರ್
ಡಿ.ಕೆ.ಶಿವಕುಮಾರ್
ಬೆಂಗಳೂರು : ಉದ್ಯಮಿಗಳು ನಮ್ಮ ಸಹೋದರ, ಸಹೋದರಿಯರು. ಬೆಂಗಳೂರು ನಿಮ್ಮ ನಗರ, ಇದರ ಘನತೆಗೆ ಘಾಸಿ ಮಾಡಬೇಡಿ ಎಂದು ಹೇಳಿದ್ದೇನೆ. ನಮ್ಮನ್ನು ಟೀಕೆ ಮಾಡಿದವರನ್ನು ದೂರ ಮಾಡಲು ಆಗುವುದಿಲ್ಲ. ಅವರ ಸಲಹೆ-ಸೂಚನೆಗಳನ್ನು ನಾವು ಕೇಳಬೇಕು ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.
ರವಿವಾರ ಇಲ್ಲಿನ ಕಬ್ಬನ್ ಪಾರ್ಕ್‍ನಲ್ಲಿ ಬೆಂಗಳೂರು ನಡಿಗೆ ಕಾರ್ಯಕ್ರಮದ ಅಂಗವಾಗಿ ನಡೆದ ನಾಗರಿಕರ ಜತೆ ಸಂವಾದದ ನಂತರ ಮಾತನಾಡಿದ ಅವರು, ಉದ್ಯಮಿಗಳು ನೀವು ಟೀಕೆ ಮಾಡಿದರೆ ಈ ನಗರದ ಬಗ್ಗೆ ಅಂತರ ರಾಷ್ಟ್ರೀಯ ಸುದ್ದಿಯಾಗುತ್ತದೆ ಎಂದು ಅವರಿಗೆ ಹೇಳಿದ್ದೇನೆ. ಉಳಿದ ಚರ್ಚೆ ವಿಚಾರಗಳನ್ನು ಸಮಯ ಬಂದಾಗ ತಿಳಿಸುತ್ತೇನೆ ಎಂದರು.
ಉದ್ಯಮಿಗಳಾದ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಶಾ ಮತ್ತಿತರರ ಜೊತೆ ಮಾತುಕತೆ ನಡೆಸಲಾಯಿತು. ಎಲ್ಲರೂ ಬೆಂಗಳೂರಿನ ಅಭಿವೃದ್ಧಿ ಬಗ್ಗೆ ಸಲಹೆಗಳನ್ನು ನೀಡಿದ್ದಾರೆ. ಕಂಪೆನಿಗಳಲ್ಲಿ ವೈಯಕ್ತಿಕವಾಗಿ ತೀರ್ಮಾನ ತೆಗೆದುಕೊಳ್ಳಬಹುದು. ಪ್ರಜಾಪ್ರಭುತ್ವ ಹಾಗೂ ಅಧಿಕಾರಶಾಹಿ ವ್ಯವಸ್ಥೆಯಲ್ಲಿ ಕೆಲಸ ಮಾಡುವಾಗ ಕಾನೂನು ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ಸಲಹಾ ಸಮಿತಿಗೆ ಅವರುಗಳನ್ನು ಸೇರ್ಪಡೆ ಮಾಡಿಕೊಳ್ಳಲಾಗಿದೆ ಎಂದರು.
‘ಮೆಟ್ರೋ’ ಕೇಂದ್ರ ಸಚಿವರಿಗೆ ಮನವಿ: ರೆಡ್ ಲೈನ್ ಮೆಟ್ರೋಗೆ ಕೇಂದ್ರ ಸರಕಾರ ಅನುಮತಿ ನೀಡಿರಲಿಲ್ಲ. ಈಗ ಮತ್ತೊಮ್ಮೆ ಬಿಎಂಆರ್‍ಸಿಎಲ್ ಡಿಪಿಆರ್ ತಯಾರಿಸಿದ್ದು, ಜನರ ಅನುಕೂಲಕ್ಕಾಗಿ ಮೆಟ್ರೋ ಮಾರ್ಗ ವಿಸ್ತರಣೆ ಮಾಡಲೇಬೇಕು. ಜೊತೆಗೆ ಡಬಲ್ ಡೆಕ್ಕರ್ ಮಾಡಬೇಕು. ಕೇಂದ್ರ ಸಚಿವರು ಇದೇ ಅ.30ರಂದು ಬೆಂಗಳೂರಿಗೆ ಬರಲಿದ್ದಾರೆ. ಅವರಿಗೂ ಈ ಬಗ್ಗೆ ಮನವಿ ಸಲ್ಲಿಸಲಾಗುವುದು ಎಂದರು.
ತೇಜಸ್ವಿ ಸೂರ್ಯ ಭೇಟಿಗೆ ಸಮಯ ನೀಡಿದ್ದೇನೆ: ಟನಲ್ ರಸ್ತೆಗೆ ಸಂಸದ ತೇಜಸ್ವಿ ಸೂರ್ಯ ಹೊರತಾಗಿ ಯಾರೂ ವಿರೋಧ ಮಾಡುತ್ತಿಲ್ಲ. ಟೀಕೆ ಮಾಡುವುದನ್ನು ನಾನು ವಿರೋಧ ಮಾಡುತ್ತಿಲ್ಲ. ಪರ್ಯಾಯ ಮಾರ್ಗಗಳ ಬಗ್ಗೆಯೂ ತಿಳಿಸಬೇಕು. ಅವರ ಸಲಹೆಗಳು ಚೆನ್ನಾಗಿದ್ದರೆ ಅದನ್ನೂ ಪರಿಗಣಿಸಲಾಗುವುದು ಎಂದರು.
ಸಾರ್ವಜನಿಕರ ಪರವಾಗಿ ಭೇಟಿ ಮಾಡುತ್ತೇವೆಂದು ತೇಜಸ್ವಿ ಸೂರ್ಯ ಹೇಳಿದ್ದಾರೆ. ಮಂಗಳವಾರ ಭೇಟಿಗೆ ಸಮಯ ನೀಡಿದ್ದೇನೆ. ಅವರ ಸಲಹೆಗಳು ಸೂಕ್ತವಾಗಿದ್ದರೆ ಅದನ್ನೂ ಸ್ವೀಕರಿಸಲಾಗುವುದು. ನಾಗರಿಕರೊಬ್ಬರು ನನ್ನನ್ನು ಅಡ್ಡ ಹಾಕಿ ಯಾವುದೇ ಕಾರಣಕ್ಕೂ ಟನಲ್ ಯೋಜನೆ ನಿಲ್ಲಬಾರದು ಎಂದು ಬೆಂಬಲಿಸಿದರು ಎಂದು ಹೇಳಿದರು.