ನಮ್ಮ ಆಹ್ವಾನದ ಮೇರೆಗೆ ಪ್ರಧಾನಿ ಮೆಟ್ರೋ ಉದ್ಘಾಟನೆಗೆ ಬರುತ್ತಿದ್ದಾರೆ: ಸಿಎಂ ಡಿ.ಕೆ.ಶಿವಕುಮಾರ್
"ನ.13ರಂದು ಪ್ರಧಾನಿ ಮುಂದೆ ರಾಜ್ಯದ ಹಲವು ವಿಚಾರಗಳನ್ನು ಮಂಡಿಸುತ್ತೇನೆ"
ಡಿ.ಕೆ.ಶಿವಕುಮಾರ್
ಕನಕಪುರ: ನಮ್ಮ ಆಹ್ವಾನದ ಮೇರೆಗೆ ಪ್ರಧಾನಮಂತ್ರಿಯವರು ಮೆಟ್ರೋ ಗುಲಾಬಿ ಮಾರ್ಗವನ್ನು ಉದ್ಘಾಟಿಸಲು ನ.13ರಂದು ಬೆಂಗಳೂರಿಗೆ ಆಗಮಿಸುತ್ತಿದ್ದಾರೆ. ಕೆಲವರು ಪ್ರಧಾನಿಯನ್ನು ನಾವೇ ಆಹ್ವಾನಿಸಿದ್ದೇವೆ ಎಂದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಬಿಜೆಪಿಯವರಿಗೂ ಇದಕ್ಕೂ ಏನು ಸಂಬಂಧ? ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಪ್ರಶ್ನಿಸಿದರು.
ಕನಕಪುರದಲ್ಲಿ ಶುಕ್ರವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇದು ಜನರ ದುಡ್ಡು. ನಾವು ಸಾಲ ಪಡೆದು ಮೆಟ್ರೋ ಅಭಿವೃದ್ಧಿ ಮಾಡುತ್ತಿದ್ದೇವೆ. ಕೆಲವು ವಿಚಾರಗಳನ್ನು ನ.13ರಂದು ಪ್ರಧಾನಮಂತ್ರಿಗಳ ಮುಂದೆ ಮಂಡಿಸಲಿದ್ದೇನೆ ಎಂದರು.
ರಾಹುಲ್ ಗಾಂಧಿ ಕರೆದ ಸಭೆಯಲ್ಲಿ ಭಾಗಿ :
ದೆಹಲಿಯಲ್ಲಿ ರಾಹುಲ್ ಗಾಂಧಿಯವರು ಪ್ರದೇಶ ಕಾಂಗ್ರೆಸ್ ಸಮಿತಿ (ಪಿಸಿಸಿ) ಅಧ್ಯಕ್ಷರು ಹಾಗೂ ಶಾಸಕಾಂಗ ಪಕ್ಷದ (ಸಿಎಲ್‌ಪಿ) ನಾಯಕರನ್ನು ಸಂಜೆ ಸಭೆಗೆ ಆಹ್ವಾನಿಸಿದ್ದಾರೆ. ಸಭೆ ಒಂದೂವರೆ ಗಂಟೆಗಳ ಕಾಲ ನಡೆಯಲಿದೆ. ಹೀಗಾಗಿ ದೆಹಲಿಗೆ ತೆರಳುತ್ತಿದ್ದೇನೆ. ದೀಪಾವಳಿ ಹಬ್ಬ ಇರುವುದರಿಂದ ದೆಹಲಿಯಲ್ಲಿ ಯಾರನ್ನೂ ಭೇಟಿಯಾಗುತ್ತಿಲ್ಲ ಎಂದು ತಿಳಿಸಿದರು.
ಕಬ್ಬು ಬೆಳೆಗಾರರ ಹೋರಾಟ ವಾಪಸ್; ಪ್ರತಿಷ್ಠೆ ಬೇಡವೆಂದು ಮನವಿ ಮಾಡಿದ್ದೆವು :
ಕಬ್ಬು ಬೆಳೆಗಾರರು ಹೋರಾಟ ಕೈಬಿಟ್ಟಿರುವ ಕುರಿತು ಪ್ರತಿಕ್ರಿಯಿಸಿದ ಅವರು, ನಾವು ರೈತರಿಗೆ ಈ ವಿಚಾರದಲ್ಲಿ ಪ್ರತಿಷ್ಠೆ ಬೇಡ ಎಂದು ಮನವಿ ಮಾಡಿದ್ದೆವು. ಇಂದು ಸಕ್ಕರೆ ಕಾರ್ಖಾನೆಗಳ ಪ್ರತಿನಿಧಿಗಳು ಹಾಗೂ ನಮ್ಮ ಸಚಿವರು ಕುಳಿತು ಚರ್ಚಿಸಿದ್ದಾರೆ. ಕೆಲವರು ಕಬ್ಬು ಅರೆಯಲು ಅನುಮತಿ ನೀಡಿ, ರಕ್ಷಣೆ ಒದಗಿಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಸಂಬಂಧ ಇಂದು ಅಫಿಡವಿಟ್ ಸಲ್ಲಿಸಲಾಗುತ್ತಿದೆ ಎಂದರು.
ಪ್ರಧಾನಿ ಬಳಿ ಸಕ್ಕರೆ ಬೆಲೆ ನಿಗದಿ ವಿಚಾರ ಪ್ರಸ್ತಾಪ :
ಸಕ್ಕರೆಯ ಬೆಲೆಯನ್ನು ಕೇಂದ್ರ ಸರ್ಕಾರವೇ ನಿಗದಿಪಡಿಸಬೇಕು. ಈ ಬಗ್ಗೆಯೂ ಪ್ರಧಾನಮಂತ್ರಿಗಳ ಬಳಿ ಪ್ರಸ್ತಾಪಿಸಲು ಪತ್ರ ಬರೆಯಲಾಗಿದೆ. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ಈ ನಿಟ್ಟಿನಲ್ಲಿ ಪ್ರಯತ್ನಿಸುತ್ತಿರುವುದಾಗಿ ತಿಳಿಸಿದ್ದಾರೆ ಎಂದು ಹೇಳಿದರು.
ರೈತರಿಗೆ ಅಗೌರವ ತೋರಿಸಬಾರದು :
ಸಮಸ್ಯೆ ಇತ್ಯರ್ಥವಾಗದಿದ್ದರೆ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನ ನಡೆಸಲು ಬಿಡುವುದಿಲ್ಲ ಎಂದು ಸರ್ಕಾರವನ್ನು ಹೆದರಿಸುವುದು ಸರಿಯಲ್ಲ. ಸ್ವಲ್ಪ ಸೌಜನ್ಯ ಇರಬೇಕು. ‘ಏ ಬಾರೋ ಇಲ್ಲಿ’ ಎಂದು ಕರೆಯುವುದು ರೈತರಿಗೆ ಅಗೌರವ ತೋರಿಸಿದಂತಾಗುತ್ತದೆ. ಇಂತಹ ವರ್ತನೆ ಇರಬಾರದು ಎಂದು ಹೇಳಿದರು.
ಕನಕಪುರಕ್ಕೆ ಯಾವಾಗ ಬರುತ್ತೀರಿ ಎಂಬ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ಮೂರು-ನಾಲ್ಕು ದಿನ ಬಿಟ್ಟು ಬರುತ್ತೇನೆ ಎಂದರು.