×
Ad

ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣ ಮಂಡಳಿ ಸ್ಥಾಪನೆಯಾಗಲಿ: ಡಾ.ಅಕ್ಕೈ ಪದ್ಮಶಾಲಿ

Update: 2026-06-20 23:27 IST

ಬೆಂಗಳೂರು: ಸರಕಾರ ಲಿಂಗತ್ವ ಅಲ್ಪಸಂಖ್ಯಾತರ ಕಲ್ಯಾಣ ಮಂಡಳಿಯನ್ನು ರಚನೆ ಮಾಡಿ, ಲಿಂಗತ್ವ ಅಲ್ಪಸಂಖ್ಯಾತ ಸಮುದಾಯದವರನ್ನೇ ಅಧ್ಯಕ್ಷರು, ಸದಸ್ಯರನ್ನಾಗಿ ನೇಮಕ ಮಾಡಿ, 20 ಕೋಟಿ ರೂ. ಅನುದಾನವನ್ನು ನೀಡಬೇಕು ಎಂದು ಹೋರಾಟಗಾರ್ತಿ ಡಾ.ಅಕ್ಕೈ ಪದ್ಮಶಾಲಿ ಒತ್ತಾಯಿಸಿದ್ದಾರೆ.

ಶನಿವಾರ ನಗರದ ನಯನ ಸಭಾಂಗಣದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ವತಿಯಿಂದ ಆಯೋಜಿಸಿದ್ದ ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಲಿಂಗತ್ವ ಅಲ್ಪಸಂಖ್ಯಾತರು ಬಹಳ ವೈವಿದ್ಯತೆಯನ್ನು ಹೊಂದಿದ್ದಾರೆ. ಅವರನ್ನು ಸಾಂಸ್ಕೃತಿಕವಾಗಿ ಜನರು ಸ್ವೀಕರಿಸಿದ್ದಾರೆ. ಆದರೆ ಸಾಮಾಜಿಕವಾಗಿ ಸ್ವೀಕರಿಸಿಲ್ಲ. ಸಾಮಾಜಿಕವಾಗಿ ಬಹಿಷ್ಕಾರವಿದೆ. ಲಿಂಗತ್ವ ಅಲ್ಪಸಂಖ್ಯಾತ ಸಮುದಾಯ ಶೈಕ್ಷಣಿಕವಾಗಿ ಯಾವುದೇ ನೆಲೆಗಟ್ಟನ್ನು ಕಂಡುಕೊಳ್ಳದಿರುವುದು 21ನೇ ಶತಮಾನಕ್ಕೆ ಮಾಡುವ ಬಹುದೊಡ್ಡ ಅಪಮಾನ ಎಂದು ತಿಳಿಸಿದರು.

ಸರ್ವಜನಾಂಗದ ಶಾಂತೀಯ ತೋಟದ ಅಡಿಯಲ್ಲಿ ಲೈಂಗಿಕ ಅಲ್ಪಸಂಖ್ಯಾತರನ್ನು ಮುಖ್ಯವಾಹಿನಿಗೆ ಕರೆದುಕೊಂಡು ಹೋಗಬೇಕೆಂದು ಸರಕಾರ ಒಂದಿಷ್ಟು ಕೆಲಸಗಳನ್ನು ಮಾಡಿದೆ ಎನ್ನುವ ಸಂತೋಷ ಒಂದು ಕಡೆಯಾದರೆ, ಸಮಾಜ ಇನ್ನೂ ಬದಲಾವಣೆಯಾಗಿಲ್ಲ ಎನ್ನುವ ನೋವು ಕೂಡ ಇದೆ ಎಂದು ತಿಳಿಸಿದರು.

ಎಷ್ಟೆಲ್ಲ ಜಂಜಾಟಗಳನ್ನು ಎದುರಿಸಿ ನಾವು ಹೆಣ್ಣಾಗಿ ಪರಿವರ್ತನೆಯಾಗುತ್ತೇವೆ. ಆದರೆ ಭಾರತದ ಸ್ತ್ರೀವಾದಿ ಚಳವಳಿಯಲ್ಲಿ ಒಂದಷ್ಟು ವರ್ಗ ಆಧಾರಿತ ಸ್ತ್ರೀವಾದಿಗಳು, ನೀವು ಹೆಣ್ಣಲ್ಲ ಎಂದು ಹೇಳುತ್ತಾರೆ. ನಮ್ಮ ನೋವು, ಹೋರಾಟಕ್ಕೆ ಪೂರಕವಾದ ಸಮಾಜ ನಿರ್ಮಾಣವಾಗಬೇಕು. ಸಮಾಜ ಏನು ತೀರ್ಮಾನ ಮಾಡುತ್ತದೆಯೋ ಅದಕ್ಕೆ ನಮ್ಮ ಪ್ರತಿರೋಧವಿದೆ. ಸಮಾಜಕ್ಕೆ ನಮ್ಮನ್ನು ಹೆಣ್ಣು ಅಲ್ಲ ಎಂದು ಗುರುತಿಸುವ ಅಧಿಕಾರ ಕೊಟ್ಟವರು ಯಾರು? ಎಂದು ಪ್ರಶ್ನಿಸಿದರು.

ಭಾರತದ ಜನಸಂಖ್ಯೆಯಲ್ಲಿ ಶೇ.10ರಷ್ಟು ಲೈಂಗಿಕ ಅಲ್ಪಸಂಖ್ಯಾತ ಜನರು ಇದ್ದೇವೆ. ನಮ್ಮ ರಾಜಕೀಯ ಪ್ರಾತಿನಿಧ್ಯವನ್ನು ವಹಿಸುವವರು ಯಾರಾದರೂ ಒಬ್ಬರು ಇದ್ದರೆ ತೋರಿಸಿ. ಆದ್ದರಿಂದ ಪ್ರಸ್ತುತ ಸರಕಾರಗಳು ಗಂಭೀರವಾಗಿ ಯೋಚಿಸಿ, ಲೈಂಗಿಕ ಅಲ್ಪಸಂಖ್ಯಾತ ಸಮುದಾಯಕ್ಕೆ ಶಾಸನಸಭೆಯಲ್ಲಿ ಪ್ರಾತಿನಿಧ್ಯವನ್ನು ನೀಡಬೇಕು ಎಂದು ಆಗ್ರಹಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕ ಡಾ.ಬಿ.ಎಸ್.ಮಂಜುನಾಥಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.

ರಾಮ ಮಂದಿರ ನಿರ್ಮಾಣವಾಗಿರುವುದು ಕೂಡ ಬಿಕ್ಷೆಯ ಹಣದಿಂದ, ದೇವಸ್ಥಾನಗಳು ಹಾಗೆಯೇ ನಿರ್ಮಾಣವಾಗುತ್ತಿದೆ. ಅದು ಒಂದು ಸಾಂಪ್ರದಾಯಿಕ ಬಿಕ್ಷೆಯಾಗುತ್ತದೆ. ನಾವು ಹೊಟ್ಟೆಪಾಡಿಗೆ ಬಿಕ್ಷೆ ಮಾಡಿದರೆ ಏನು ತಪ್ಪು? ಯಾರೋ ಒಬ್ಬರು, ಇಬ್ಬರು ತಪ್ಪುಗಳನ್ನು ಮಾಡುತ್ತಾರೆ. ಹಾಗಂತ ಇಡೀ ಸಮುದಾಯವನ್ನು ಹೇಗೆ ನೋಡಬೇಕು.

- ಡಾ.ಅಕ್ಕೈ ಪದ್ಮಶಾಲಿ, ಹೋರಾಟಗಾರ್ತಿ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News