ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ವಿರುದ್ಧ ಅಪಪ್ರಚಾರ ಆರೋಪ: ಎಫ್‍ಐಆರ್ ದಾಖಲು
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (Photo: PTI)
ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ವಿರುದ್ಧ ಅಪಪ್ರಚಾರ ಮಾಡುತ್ತಿದ್ದ ಆರೋಪದ ಮೇಲೆ ʼಕುಮಾರಸ್ವಾಮಿ ಫಾರ್ ಸಿಎಂ ಸೋಶಿಯಲ್ ಮೀಡಿಯಾʼ ಎಂಬ ಪೇಸ್‍ಬುಕ್ ಖಾತೆಯ ವಿರುದ್ಧ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ವಕೀಲ ದೀಪು ಸಿ.ಆರ್. ಅವರು ನೀಡಿದ ದೂರಿನ ಮೇರೆಗೆ ಈ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಜೆಡಿಎಸ್ ಪಕ್ಷದ ಅಧಿಕೃತ ಜಾಲತಾಣದ ಪುಟಗಳಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಶವವಾಗಿ ಚಿತ್ರಿಸುವ ನಿಟ್ಟಿನಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನ ಬಳಸಿ ಸಿದ್ಧಪಡಿಸಲಾದ ವಿಡಿಯೋವೊಂದನ್ನು ಪ್ರಸಾರ ಮಾಡಲಾಗಿತ್ತು ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಸಿಎಂ ಡಿ.ಕೆ.ಶಿವಕುಮಾರ್ ಅವರ ತೇಜೋವಧೆ ಮಾಡಲು ಮತ್ತು ಅವರ ಘನತೆಗೆ ಧಕ್ಕೆ ತರಲು ಈ ವಿಡಿಯೋ ಬಳಸಲಾಗಿದೆ. ಸಮಾಜದಲ್ಲಿ ತಪ್ಪು ಸಂದೇಶ ರವಾನಿಸುವ ಮೂಲಕ ಸಾರ್ವಜನಿಕ ಶಾಂತಿ ಭಂಗಕ್ಕೆ ಯತ್ನಿಸಲಾಗಿದೆ ಎಂದು ದೂರದಾರರು ಆರೋಪಿಸಿದ್ದಾರೆ.