ಕಲಬುರಗಿಯಲ್ಲಿ 'ವಚನ ಮಂಟಪ' ಸ್ಥಾಪನೆ : ಶರಣರ ಸಾಹಿತ್ಯ, ಸಾಂಸ್ಕೃತಿಕತೆಗೆ ಒತ್ತು
ಬೆಂಗಳೂರು: ‘ಬಸವಾದಿ ಶರಣರ ವಚನಗಳನ್ನು ವಿಶ್ವಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಕಲಬುರಗಿಯಲ್ಲಿ ವಚನ ಮಂಟಪವನ್ನು ಸ್ಥಾಪಿಸಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಶುಕ್ರವಾರ ನಗರದ ವಿಧಾನಸೌಧದಲ್ಲಿ ಬಜೆಟ್ ಮಂಡಿಸಿದ ಅವರು, ‘ಬಸವಣ್ಣನವರ ಜನ್ಮಸ್ಥಳವಾದ ಬಸವನಬಾಗೇವಾಡಿ ಅಭಿವೃದ್ಧಿಗೆ ಬಸವನಬಾಗೇವಾಡಿ ಅಭಿವೃದ್ಧಿ ಪ್ರಾಧಿಕಾರ ರಚಿಸಲಾಗುವುದು. ಎಲ್ಲ ಸರಕಾರಿ ಕಚೇರಿಗಳಲ್ಲಿರುವ ವಿಶ್ವಗುರು ಜಗಜ್ಯೋತಿ ಬಸವಣ್ಣನವರ ಭಾವಚಿತ್ರದಲ್ಲಿ ‘ವಿಶ್ವಗುರು ಬಸವಣ್ಣ -ಸಾಂಸ್ಕೃತಿಕ ನಾಯಕ’ ಎಂದು ಮುದ್ರಿಸಲಾಗುವುದು ಎಂದು ತಿಳಿಸಿದರು.
► ಎಲ್ಲ ಕಚೇರಿಗಳು, ಅಂಗಡಿ-ಮುಂಗಟ್ಟುಗಳು, ವಿವಿಧ ವಾಣಿಜ್ಯೋದ್ಯಮ ಸಂಸ್ಥೆಗಳ ನಾಮಫಲಕಗಳಲ್ಲಿ ಶೇ.60ರಷ್ಟು ಕನ್ನಡವನ್ನು ಕಡ್ಡಾಯವಾಗಿ ಅಳವಡಿಸಲು ಕನ್ನಡ ಭಾಷಾ ಸಮಗ್ರ ಅಭಿವೃದ್ಧಿ ಅಧಿನಿಯಮದಡಿ ಜಾರಿ.
► ಗಡಿಭಾಗದಲ್ಲಿ ಕನ್ನಡ ಶಾಲೆಗಳ ಅಭಿವೃದ್ಧಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಏರ್ಪಡಿಸುವ ಮೂಲಕ ಕನ್ನಡ ಭಾಷಾ ಅಭಿವೃದ್ಧಿ.
► ತುಳು, ಕೊಡವ, ಬ್ಯಾರಿ ಮತ್ತು ಕೊಂಕಣಿ ಕರ್ನಾಟಕದ ಪ್ರಾದೇಶಿಕ ಭಾಷೆಗಳಾಗಿದ್ದು, ಅವುಗಳ ಅಭಿವೃದ್ಧಿಗಾಗಿ ಅಕಾಡೆಮಿಗಳ ಮೂಲಕ ಭಾಷೆ, ಸಂಸ್ಕೃತಿ, ಸಾಹಿತ್ಯಕ್ಕೆ ಪ್ರೋತ್ಸಾಹ.
► ಜಾನಪದ ಕಲಾಪ್ರಕಾರಗಳಾದ ದೊಡ್ಡಾಟ, ಸಣ್ಣಾಟ, ಶ್ರೀಕೃಷ್ಣ ಪಾರಿಜಾತ, ತೊಗಲು ಗೊಂಬೆಯಾಟ, ಸೂತ್ರದ ಗೊಂಬೆಯಾಟ, ಕರಗ ಮುಂತಾದವುಗಳ ಪುನರುಜ್ಜೀವನಕ್ಕಾಗಿ ತರಬೇತಿ ಮತ್ತು ಪ್ರದರ್ಶನ.
► ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯದವರ ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಅಲೆಮಾರಿ ಸಂಸ್ಕೃತಿ ಉತ್ಸವವನ್ನು ಆಯೋಜನೆ.
► ರಂಗಾಯಣಗಳಿಗೆ ಹೆಚ್ಚಿನ ಅನುದಾನ ನೀಡುವ ಮೂಲಕ ಇನ್ನಷ್ಟು ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲು ಉತ್ತೇಜನ.
ಮಾಜಿ ಮುಖ್ಯಮಂತ್ರಿ ಎಸ್.ಬಂಗಾರಪ್ಪನವರ ಸ್ಮಾರಕ ನಿರ್ಮಾಣ.
► ಚಿಂತಕರುಗಳಾದ ನಾರಾಯಣ ಗುರುಗಳು, ಜ್ಯೋತಿಬಾ ಫುಲೆ, ಪೆರಿಯಾರ್ ರಾಮಸ್ವಾಮಿ, ರಾಮ ಮನೋಹರ ಲೋಹಿಯಾ ಹಾಗೂ ಬಾಬು ಜಗಜೀವನರಾಮ್ ರವರ ಬರಹಗಳನ್ನು ಕನ್ನಡಕ್ಕೆ ಭಾಷಾಂತರಿಸಿ ಪ್ರಕಟ.
► ಕನಕದಾಸರ ಅಧ್ಯಯನ ಕೇಂದ್ರದ ಮೂಲಕ ತತ್ವಪದ, ಕೀರ್ತನ ಸಾಹಿತ್ಯ ಮತ್ತು ಭಕ್ತಿ ಚಳವಳಿ ಸೇರಿದಂತೆ ಸಾಹಿತ್ಯ ಸಮೀಕ್ಷೆ, ಸಂಗ್ರಹಣೆ, ಪ್ರಕಟಣೆ ಮತ್ತು ಪ್ರಸಾರ ಕಾರ್ಯಗಳನ್ನು ಕೈಗೊಳ್ಳಲು ಒಂದು ಕೋಟಿ ರೂ. ಮೀಸಲು.