×
Ad

ಇ.ವಿ.ಬ್ಯಾಟರಿ ಉತ್ಪಾದನೆ: ರಾಜ್ಯದಲ್ಲಿ 8 ಸಾವಿರ ಕೋಟಿ ರೂ. ಹೂಡಿಕೆಗೆ IBC ಒಡಂಬಡಿಕೆ

Update: 2023-08-01 22:12 IST

ಬೆಂಗಳೂರು, ಆ.1: ಮರುಬಳಕೆ ಮಾಡಬಹುದಾದ ಎಲೆಕ್ಟ್ರಿಕ್ ಬ್ಯಾಟರಿಗಳನ್ನು ತಯಾರಿಸುವ ಇಂಟರ್ ನ್ಯಾಷನಲ್ ಬ್ಯಾಟರಿ ಕಂಪೆನಿ (ಐಬಿಸಿ) ಮತ್ತು ರಾಜ್ಯ ಸರಕಾರ 8 ಸಾವಿರ ಕೋಟಿ ರೂ.ಹೂಡಿಕೆಗೆ ಅವಕಾಶ ಮಾಡಿಕೊಡುವ ಒಡಂಬಡಿಕೆಗೆ ಮಂಗಳವಾರ ಇಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಎಂ.ಬಿ.ಪಾಟೀಲ್ ಸಮ್ಮುಖದಲ್ಲಿ ಅಂಕಿತ ಹಾಕಿದವು.

ಈ ಒಡಂಬಡಿಕೆಗೆ ಸರಕಾರದ ಪರವಾಗಿ ಕೈಗಾರಿಕಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸೆಲ್ವಕುಮಾರ್ ಮತ್ತು ಐಬಿಸಿ ಇಂಡಿಯಾ ಪರವಾಗಿ ಅದರ ಭಾರತದ ವ್ಯವಹಾರಗಳ ಮುಖ್ಯಸ್ಥ ವೆಂಕಟೇಶ ವಲ್ಲೂರಿ ಸಹಿ ಹಾಕಿದರು.

ಮರುಬಳಕೆಗೆ ಬರುವಂಥ ಲಿಥಿಯಾನ್ ಬ್ಯಾಟರಿಗಳ ಉತ್ಪಾದನೆಯನ್ನು ಈ ಕಂಪೆನಿಯು ಇನ್ನು ಒಂದು ವರ್ಷದಲ್ಲಿ ರಾಜ್ಯದಲ್ಲಿ ಪ್ರಾರಂಭಿಸಲಿದೆ. ಈ ಉದ್ದೇಶಕ್ಕಾಗಿ ಕಂಪೆನಿಯ ಕೋರಿಕೆಯಂತೆ ಬೆಂಗಳೂರು ಗ್ರಾಮಾಂತರ ವಲಯದಲ್ಲಿ 100 ಎಕರೆ ಜಮೀನನ್ನು ಕೊಡಲಿದೆ. ತಾವು ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಈ ಕಂಪೆನಿಯೊಂದಿಗೆ ಮೂರು ಸುತ್ತು ಮಾತುಕತೆ ನಡೆಸಿ, ರಾಜ್ಯದಲ್ಲೇ ಹೂಡಿಕೆ ಮಾಡುವಂತೆ ಮನದಟ್ಟು ಮಾಡಿಕೊಡಲಾಗಿತ್ತು ಎಂದು ಎಂ.ಬಿ.ಪಾಟೀಲ್ ತಿಳಿಸಿದ್ದಾರೆ.

ಈ ಕಂಪೆನಿಯು ಇಂತಹ ಬ್ಯಾಟರಿಗಳನ್ನು ದಕ್ಷಿಣ ಕೊರಿಯಾದಲ್ಲಿ ಪರೀಕ್ಷಾರ್ಥವಾಗಿ ತಯಾರಿಸುವ ಘಟಕವನ್ನು ಹೊಂದಿದ್ದು, ಅದು ಕೂಡ ಸದ್ಯದಲ್ಲೇ ಕಾರ್ಯಾರಂಭ ಮಾಡಲಿದೆ. ಅತ್ಯುತ್ತಮ ಬ್ಯಾಟರಿಗಳ ಉತ್ಪಾದನೆಗೆ ಡ್ರೈರೂಮ್ ಮತ್ತು ಕ್ಲೀನ್ ರೂಮ್‍ಗಳನ್ನು ಕಂಪೆನಿ ಸ್ಥಾಪಿಸಲಿದೆ. ಇದು ರಾಜ್ಯದಲ್ಲಿ ಇಂತಹ ಎರಡನೇ ಘಟಕವಾಗಿದ್ದು, ಈ ಕ್ಷೇತ್ರದಲ್ಲಿ ರಾಜ್ಯವು ಇಡೀ ದೇಶಕ್ಕೇ ಅಗ್ರಸ್ಥಾನದಲ್ಲಿದೆ ಎಂದು ಅವರು ವಿವರಿಸಿದ್ದಾರೆ.

ಕಾರ್ಯಕ್ರಮದಲ್ಲಿ ಕೈಗಾರಿಕಾ ಇಲಾಖೆ ಆಯುಕ್ತೆ ಗುಂಜನ್ ಕೃಷ್ಣ, ಐಬಿಸಿ ಸಂಸ್ಥಾಪಕ ಮತ್ತು ಸಿಇಒ ಡಾ.ಪ್ರಿಯದರ್ಶಿ ಪಾಂಡಾ, ಕಂಪೆನಿಯ ಸಿಒಒ ಶಶಿ ಕುಪ್ಪಣ್ಣಗಾರಿ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News