×
Ad

ಗೋಪ್ಯತೆಯ ಸಬೂಬು ಹೇಳಿ ಕೇಂದ್ರ ಸರಕಾರ ಕೈ ಚೆಲ್ಲಿ ಕುಳಿತುಕೊಳ್ಳಬಾರದು: ಸಚಿವ ದಿನೇಶ್ ಗುಂಡೂರಾವ್

Update: 2023-10-27 11:03 IST

ಬೆಂಗಳೂರು, ಅ.27: ಭಾರತದ ನೌಕಾಪಡೆಯ 8 ಮಾಜಿ ಸಿಬ್ಬಂದಿಗಳಿಗೆ ಖತರ್ ನ್ಯಾಯಾಲಯ ಗಲ್ಲು ಶಿಕ್ಷೆ ನೀಡಿರುವುದು ಆಘಾತಕಾರಿ ಸುದ್ದಿ. ಆದರೆ ಗೋಪ್ಯತೆಯ ಕಾರಣ ನೀಡಿ ಕೇಂದ್ರ ಸರಕಾರ ಇದೊಂದು ಸಾಮಾನ್ಯ ಪ್ರಕರಣ ಎಂದು ತೇಪೆ ಹಾಕುತ್ತಿದೆ. ಭಾರತದ ನೌಕಪಡೆಯಲ್ಲಿ ಸೇವೆ ಸಲ್ಲಿಸಿದ್ದ ಸಿಬ್ಬಂದಿಗೆ ವಿದೇಶಿ ನ್ಯಾಯಾಲಯ ಮರಣ ದಂಡನೆ ವಿಧಿಸಿರುವುದು ಸಾಮಾನ್ಯ ಪ್ರಕರಣವೆ? ಎಂದು ರಾಜ್ಯ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.

ಈ ಬಗ್ಗೆ 'X'ನಲ್ಲಿ ಪೋಸ್ಟ್ ಹಾಕಿರುವ ಅವರು, ಭಾರತದ ನೌಕಾಪಡೆಯ ಸಿಬ್ಬಂದಿಗೆ ಖತರ್ ನ್ಯಾಯಾಲಯ ನೀಡಿರುವ ಗಲ್ಲು ಶಿಕ್ಷೆಯ ಕುರಿತು ಕೇವಲ ಪ್ರಾಥಮಿಕ ಮಾಹಿತಿಯಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ. ಇದು ಕೇಂದ್ರ ಸರಕಾರದ ರಾಜತಾಂತ್ರಿಕ ವೈಫಲ್ಯವಲ್ಲವೆ? ಗಲ್ಲು ಶಿಕ್ಷೆಗೊಳಗಾದ ನೌಕಾಪಡೆಯ ಸಿಬ್ಬಂದಿ ಕಳೆದ ಒಂದು ವರ್ಷದಿಂದ ಖತರ್ ಜೈಲಿನಲ್ಲಿದ್ದಾರೆ. ಇಲ್ಲಿಯವರೆಗೂ ಕೇಂದ್ರ ಏನು ಮಾಡುತಿತ್ತು.? ನೌಕಾದಳದ 8 ಮಾಜಿ ಅಧಿಕಾರಿಗಳಿಗೆ ಕತಾರ್ ಮರಣ ದಂಡನೆ ವಿಧಿಸಿರುವುದು ಇಡೀ ದೇಶವೇ ಕಳವಳ ಪಡುವ ವಿಚಾರ. ಇಸ್ರೇಲ್-ಪ್ಯಾಲೆಸ್ಟೇನ್ ನಡುವಿನ ಸಂಘರ್ಷದ ಹೊತ್ತಿನಲ್ಲೇ ಈ ತೀರ್ಪು ಬಂದಿರುವುದು ಚಿಂತಿಸಬೇಕಾದ ವಿಚಾರ. ದೇಶಕ್ಕೆ ಸೇವೆ ಸಲ್ಲಿಸಿದವರು ವಿದೇಶಿ ನೆಲದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದಾರೆ. ಈ ಬಗ್ಗೆ ಕೇಂದ್ರ ಸೂಕ್ಷ್ಮವಾಗಿ ವರ್ತಿಸಬೇಕು ಎಂದು ಒತ್ತಾಯಿಸಿದ್ದಾರೆ.

ಖತರ್ ನ್ಯಾಯಾಲಯದ ತೀರ್ಪಿನಿಂದ ಗಲ್ಲುಶಿಕ್ಷೆಗೆ ಗುರಿಯಾದ ನೌಕಾದಳದ ಸಿಬ್ಬಂದಿ ಕುಟುಂಬವಷ್ಟೇ ಅಲ್ಲ, ಇಡೀ ದೇಶವೇ ಆತಂಕಕ್ಕೀಡಾಗಿದೆ. ಕೇಂದ್ರ ಸರಕಾರ ಗೋಪ್ಯತೆಯ ಸಬೂಬು ಹೇಳಿ ಕೈ ಚೆಲ್ಲಿ ಕುಳಿತರೆ ದೇಶಕ್ಕೆ ಸೇವೆ ಸಲ್ಲಿಸಿದವರನ್ನು ನಾವೇ ಸ್ವತಃ ಕೈಯಾರೆ ಬಲಿ ಕೊಟ್ಟಂತಾಗುತ್ತದೆ. ಹಾಗಾಗಿ ಕೇಂದ್ರ ಈ ಪ್ರಕರಣದ ಸೂಕ್ಷ್ಮತೆ ಅರಿತುಕೊಳ್ಳಲಿ ಎಂದು ಅವರು ಹೇಳಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News