ಬೆಂಗಳೂರು | 2 ವರ್ಷದ ಮಗುವಿಗೆ ಅವಧಿ ಮೀರಿದ ಚುಚ್ಚುಮದ್ದು: ಆಸ್ಪತ್ರೆ ವಿರುದ್ಧ ಎಫ್‍ಐಆರ್
ಸಾಂದರ್ಭಿಕ ಚಿತ್ರ: PTI
ಬೆಂಗಳೂರು, ನ.4: ಅವಧಿ ಮೀರಿದ ಇಂಜೆಕ್ಷನ್ ನೀಡಿ 2 ವರ್ಷದ ಮಗುವಿನ ಆರೋಗ್ಯದಲ್ಲಿ ಏರುಪೇರು ಉಂಟಾಗುವಂತೆ ಮಾಡಿದ್ದ ಆರೋಪದಡಿ ನಗರದ ಸಂಜೀವಿನಿ ಆಸ್ಪತ್ರೆ ವಿರುದ್ಧ ಮಹಾಲಕ್ಷ್ಮೀ ಲೇಔಟ್ಲೀ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದೆ.
ಆಸ್ಪತ್ರೆಯ ವೈದ್ಯರ ನಿರ್ಲಕ್ಷ್ಯದ ವಿರುದ್ಧ ಮಗುವಿನ ತಂದೆ ಕಿರಣ್ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಗೆ ನೀಡಿದ ದೂರಿನನ್ವಯ ಪ್ರಕರಣ ದಾಖಲಾಗಿದೆ.
ಜ್ವರದಿಂದ ಬಳಲುತ್ತಿದ್ದ ಎರಡು ವರ್ಷದ ಮಗು ‘ಯಾದ್ವಿ’ಯನ್ನು ಅ.29ರಂದು ಆಕೆಯ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಯ ಸಂದರ್ಭದಲ್ಲಿ ಆಸ್ಪತ್ರೆಯ ವೈದ್ಯರು ಡ್ರಿಪ್ಸ್ ಮೂಲಕ ಇಂಜೆಕ್ಷನ್ ನೀಡಿದ್ದು, ನಂತರ ಮಗುವಿನ ಆರೋಗ್ಯದಲ್ಲಿ ಏರುಪೇರಾಗಿದೆ. ತುಟಿಯ ಭಾಗದಲ್ಲಿ ರಕ್ತ ಕಾಣಿಸಿಕೊಂಡಿದೆ ಇದರಿಂದ ಆತಂಕಗೊಂಡ ಫೊಷಕರು ತಕ್ಷಣ ಬೇರೆ ಆಸ್ಪತ್ರೆಗೆ ಮಗುವನ್ನು ಸ್ಥಳಾಂತರಿಸಿದ್ದಾರೆ. ಈ ವೇಳೆ ಸಂಜೀವಿನಿ ಆಸ್ಪತ್ರೆಯ ಸಿಬ್ಬಂದಿ ಹಣದ ಆಮಿಷವೊಡ್ಡಿರುವ ಆರೋಪವೂ ಕೇಳಿಬಂದಿದೆ.
ಘಟನೆ ಸಂಬಂಧ ಮಾಧ್ಯಮದೊಂದಿಗೆ ಪ್ರತಿಕ್ರಿಯೆ ನೀಡಿದ್ದ ಸಂಜೀವಿನಿ ಆಸ್ಪತ್ರೆ ಮಕ್ಕಳ ತಜ್ಞೆ ಡಾ.ಸಹನಾ, ‘ಮಗುವಿಗೆ ಅವಧಿ ಮೀರಿದ ಚುಚ್ಚು ಮದ್ದು ಕೊಟ್ಟಿರುವುದು ನಿಜ. ಡ್ರಿಪ್ಸ್‍ನಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಿದೆ. ಅದಕ್ಕಾಗಿ ನಾವು ಕ್ಷಮೆ ಕೇಳುತ್ತೇವೆ. ಸಂಬಂಧಪಟ್ಟ ಸಿಬ್ಬಂದಿಯನ್ನು ಕೆಲಸದಿಂದ ಅಮಾನುತುಗೊಳಿಸಲಾಗಿದೆ ಎಂದು ಹೇಳಿದ್ದಾರೆ.