×
Ad

ಬೆಂಗಳೂರಿನ ಹಲವೆಡೆ ಭಾರಿ ಪ್ರಮಾಣದ ಸ್ಪೋಟಕ ಪತ್ತೆ: ಮೂವರು ಆರೋಪಿಗಳ ಬಂಧನ

Update: 2023-07-30 23:41 IST

ಸಾಂದರ್ಭಿಕ ಚಿತ್ರ 

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪದ ಮೇಲೆ ಐವರು ಶಂಕಿತ ಉಗ್ರರನ್ನು ಸಿಸಿಬಿ ಪೊಲೀಸರು ಬಂಧಿಸಿದ ಬೆನ್ನಲ್ಲೇ, ನಗರದ ಹಲವೆಡೆ ಭಾರಿ ಪ್ರಮಾಣದ ಸ್ಫೋಟಕ ವಸ್ತುಗಳು ಪತ್ತೆಯಾಗಿದ್ದು, ಮೂವರು ಆರೋಪಿಗಳನ್ನು ಸೋಲದೇವನಹಳ್ಳಿ ಪೊಲೀಸರು ಬಂಧಿಸಿರುವುದು ವರದಿಯಾಗಿದೆ.

ಶಂಕರ್, ಕುಮಾರ್ ಹಾಗೂ ಶ್ರೀನಿವಾಸ್ ಎಂಬವರು ಬಂಧಿತ ಆರೋಪಿಗಳಾಗಿದ್ದು, ಹೆಸರಘಟ್ಟದ ಕಲ್ಲುಗುಡ್ಡದಹಳ್ಳಿಯ ಶಂಕರ್ ಹಾಗೂ ದಾಸೇನಹಳ್ಳಿ ಬಳಿಯ ಕುಮಾರ್ ಮನೆಗಳಲ್ಲಿ ಶೋಧ ನಡೆಸಲಾಗಿದ್ದು, ಅನುಮತಿ ಇಲ್ಲದೆ ಮನೆಯಲ್ಲಿ ಇಟ್ಟಿದ್ದ ಅಪಾರ ಪ್ರಮಾಣದ ಸ್ಫೋಟಕ ವಸ್ತುಗಳನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಎರಡೂವರೆ ಕೆ.ಜಿ ಸಲ್ಫರ್ ಪೌಡರ್, 250 ಗ್ರಾಂ ಎಕ್ಸ್ ಪ್ಲೋಸಿವ್ ಜೆಲ್, 45 ಕೆ.ಜಿ ಪೊಟ್ಯಾಶಿಯಂ ನೈಟ್ರೇಟ್ ವೈಟ್ ಪೌಡರ್ ಹಾಗೂ ಸ್ಫೋಟಕ ಮದ್ದುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ದಾಸೇನಹಳ್ಳಿಯ ರಾಘವೇಂದ್ರ ಲೇಔಟ್‍ನಲ್ಲಿರುವ ಶ್ರೀನಿವಾಸ್ ಎಂಬುವರ ಬಾಡಿಗೆ ಮನೆಯಲ್ಲಿ ಶೋಧ ನಡೆಸಿದ್ದು, 1.860 ಕೆ.ಜಿ ತೂಕದ 15 ರೆಕ್ಸ್ ಎಕ್ಸ್ ಪ್ಲೋಸಿವ್ ಜೆಲ್, 1.950 ಗ್ರಾಂ ಕಾರ್ಕೋಲ್ ಪೌಡರ್, 7.850 ಗ್ರಾಂ ಸಲ್ಫರ್ ಪೌಡರ್, 13 ಕೆ.ಜಿ ಪೊಟ್ಯಾಶಿಯಂ ನೈಟ್ರೇಟ್ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಕುರಿತು ಎರಡು ಪ್ರತ್ಯೇಕ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದ್ದು, ವಿಚಾರಣೆ ವೇಳೆ ಆರೋಪಿಗಳು ಕಲ್ಲು ಕ್ವಾರಿಗಾಗಿ ಸಂಗ್ರಹ ಮಾಡಿದ್ದಾಗಿ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News